ಮಹಿಳೆ, ಮಕ್ಕಳ ರಕ್ಷಣೆಗಾಗಿ ಜಾಗೃತಿ ಆಂದೋಲನ ನಿರ್ಧಾರ

ಕುಂದಾಪುರ: ಮಹಿಳೆಯರು, ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ, ವಿದ್ಯಾರ್ಥಿನಿಯರ ಅನುಮಾನಸ್ಪದ ಸಾವು ಮೊದಲಾದ ಕಾರಣಗಳಿಂದ ಆತಂಕ ಮನೆ ಮಾಡಿದೆ. ತಾಲೂಕಿನ ಪ್ರತಿ ಗ್ರಾಮ ಪಂಚಾಯಿತಿಯಲ್ಲಿ ಮಹಿಳೆಯರು ಮತ್ತು ಮಕ್ಕಳ ರಕ್ಷಣೆಗೋಸ್ಕರ ಆಂದೋಲನ ರೂಪಿಸಲಾಗುವುದು. ವಿಶೇಷವಾಗಿ ಮಹಿಳೆಯರ ಗ್ರಾಮಸಭೆಗೆ ಒತ್ತು ನೀಡಲಾಗುವುದು ಎಂದು ಕುಂದಾಪುರ ತಾಲೂಕು ಪಂಚಾಯಿತಿ ಅಧ್ಯಕ್ಷ ಭಾಸ್ಕರ ಬಿಲ್ಲವ ತಿಳಿಸಿದರು. 

ಶನಿವಾರ ಬೆಳಗ್ಗೆ ಜರುಗಿದ ಕುಂದಾಪುರ ತಾಲೂಕು ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಸದಸ್ಯರ ಕಳಕಳಿಗೆ ಸ್ಪಂದಿಸಿ ಎಲ್ಲಾ ಇಲಾಖೆಗಳ ಸಹಯೋಗದೊಂದಿಗೆ ಅಭಿಯಾನ ನಡೆಸಲಾಗುವುದು ಎಂದರು. ಹಿರಿಯ ಸದಸ್ಯರಾದ ರಾಜು ಪೂಜಾರಿ ಹಾಗೂ ಕೆದೂರು ಸದಾನಂದ ಶೆಟ್ಟಿ ವಿಷಯ ಪ್ರಸ್ತಾಪಿಸಿ ಮಹಿಳೆಯರು, ವಿದ್ಯಾರ್ಥಿನಿಯರು, ಮಕ್ಕಳು ಆತಂಕದಲ್ಲಿ ಬದುಕುವಂತಾಗಿದೆ. ದೂರದಿಂದ ಶಾಲಾ ಕಾಲೇಜಿಗೆ ಬರುವ ಮಕ್ಕಳು ಭಯದಿಂದಲೇ ಬರುವಂತಾಗಿದೆ. ಮಕ್ಕಳಲ್ಲಿ, ಮಹಿಳೆಯರಲ್ಲಿ ಮಾನಸಿಕ ಧೈರ್ಯ ಮೂಡುವ ಕೆಲಸ ನಡೆಯಬೇಕು. ಈಗಾಗಲೆ ನಮ್ಮ ಭೂಮಿ ಸಂಸ್ಥೆಯ ಸಹಕಾರದೊಂದಿಗೆ ಆಂದೋಲನದ ಕುರಿತು ಪೂರ್ವಭಾವಿ ಸಭೆ ನಡೆಸಲಾಗಿದೆ ಎಂದರು. 

ಸದಸ್ಯೆ ಪೂರ್ಣಿಮಾ ಖಾರ್ವಿ, ಸದಸ್ಯರಾದ ನಾಡಾ ಶಂಕರ ಶೆಟ್ಟಿ, ಆಲೂರು ಮಂಜಯ್ಯ ಶೆಟ್ಟಿ, ಪ್ರದೀಪ್‌ಚಂದ್ರ ಶೆಟ್ಟಿ, ಪ್ರದೀಪ್‌ಕುಮಾರ ಶೆಟ್ಟಿ, ಕಾಳಾವರ ದೀಪಕ್ ಶೆಟ್ಟಿ ಚರ್ಚೆಯಲ್ಲಿ ಪಾಲ್ಗೊಂಡರು. ಅಂತಿಮವಾಗಿ ಮುಂದಿನ ವಾರದಿಂದಲೇ ಪ್ರತಿ ಗ್ರಾಮದಲ್ಲಿಯೂ ಜಾಗತಿ ಅಭಿಯಾನಕ್ಕೆ ಚಾಲನೆ ನೀಡುವ ತೀರ್ಮಾನ ತೆಗೆದುಕೊಳ್ಳಲಾಯಿತು. 

ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣದಿಂದ ಹೊಡೆತ: ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಯೋಜನೆಯಡಿ ನಡೆಯುತ್ತಿರುವ ಕಾಮಗಾರಿ ದೊಡ್ಡ ಗೋಲ್‌ಮಾಲ್ ಆಗಿದೆ. ಈ ಕಾಮಗಾರಿಯ ಬಗ್ಗೆ ರಾಜ್ಯ ಸರಕಾರಕ್ಕಾಗಲಿ, ಸಂಬಂಧಿತ ಇಲಾಖೆಗಾಗಲಿ ಯಾವುದೇ ಮಾಹಿತಿ ಇಲ್ಲ. ಖಾಸಗಿ ಏಜೆನ್ಸಿ ಮೂಲಕ ಕೆಲಸ ನಿರ್ವಹಿಸಲಾಗುತ್ತಿದೆ. ಕೋಟ್ಯಾಂತರ ರೂಪಾಯಿ ಹಣ ಲೂಟಿ ಮಾಡುವ ಈ ಪ್ರಯತ್ನಕ್ಕೆ ಕಡಿವಾಣ ಬೀಳಬೇಕಾಗಿದೆ ಎಂದು ಸದಸ್ಯರಾದ ರಾಜು ಪೂಜಾರಿ, ಪ್ರದೀಪ್‌ಚಂದ್ರ ಶೆಟ್ಟಿ ಒತ್ತಾಯಿಸಿದರು. 

ಪಿಡಿಓಗಳಿಗೆ ಎಚ್ಚರಿಕೆ: ಬಸವ ವಸತಿ ಯೋಜನೆಯಡಿ ಅರ್ಹ ಫಲಾನುಭವಿಗಳಿಗೆ ಅನ್ಯಾಯವೆಸಗಲಾಗಿದೆ. ಗ್ರಾಮ ಪಂಚಾಯಿತಿ ಪಿಡಿಓಗಳು ತಕ್ಷಣ ಗಮನಹರಿಸಿ ಸಮಸ್ಯೆ ಪರಿಹಾರ ಮಾಡಬೇಕು. ಸ್ಟೇಜ್ ವೈಸ್ ಪೋಟೊ ಉದ್ದೇಶವನ್ನಿಟ್ಟುಕೊಂಡು ಯೋಜನೆಯ ಫಲಾನುಭವಿಗಳಿಗೆ ಹಣ ಮಂಜೂರಾತಿಗೆ ತಡೆಯೊಡ್ಡುವ ಪ್ರಯತ್ನ ಯಾವುದೇ ಕಾರಣಕ್ಕೂ ಸಹಿಸಲಾಗದು ಎಂದು ತಾ.ಪಂ.ಅಧ್ಯಕ್ಷ ಭಾಸ್ಕರ ಬಿಲ್ಲವ ಎಚ್ಚರಿಸಿದ್ದಾರೆ. 

ಸದಸ್ಯ ನವೀನ್‌ಚಂದ್ರ ಶೆಟ್ಟಿ ಮಾತನಾಡಿ ಕಳೆದ ಕೆಲವು ತಿಂಗಳುಗಳಿಂದ ಯೋಜನೆಯ ಫಲಾನುಭವಿಗಳಿಗೆ ಹಣ ಬಿಡುಗಡೆಯಾಗಿಲ್ಲ. ಬಡವರು ಅತೀವ ಸಂಕಷ್ಟಕ್ಕೆ ತುತ್ತಾಗಿದ್ದಾರೆ. ತಾಲೂಕು ಪಂಚಾಯಿತಿ ಈ ವಿಷಯದಲ್ಲಿ ನೇರವಾಗಿ ಸರಕಾರಕ್ಕೆ ಪತ್ರ ಬರೆಯಬೇಕು ಎಂದು ಆಗ್ರಹಿಸಿದರು. ಸದಸ್ಯರಾದ ರಾಮ ಶೇರೆಗಾರ್, ಪೂರ್ಣಿಮಾ ಪೂಜಾರಿ ಚರ್ಚೆಯಲ್ಲಿ ಪಾಲ್ಗೊಂಡರು. 

ಶಾಲೆ ಜಾಗ ಕೊಡಿ....ಪರವಾಗಿಲ್ಲ: ನಮ್ಮ ಭಾವನೆಗೆ ಯಾರು ಸ್ಪಂದಿಸುತ್ತಿಲ್ಲ. ಹೊಸ್ಕೋಟೆ ಕಿರಿಯ ಪ್ರಾಥಮಿಕ ಶಾಲೆ ಜಾಗ ಅತಿಕ್ರಮಣದ ಕುರಿತು ಕಳೆದ 1 ವರ್ಷದಿಂದ ನಾನು ನಡೆಸುತ್ತಿರುವ ಹೋರಾಟಕ್ಕೆ ಸ್ಪಂದನವೇ ಇಲ್ಲದ್ದಂತಾಗಿದೆ. ಶಾಲೆ ಜಾಗ ಇಟ್ಟುಕೊಳ್ಳಲು ಮನಸ್ಸಿಲ್ಲದಿದ್ದಲ್ಲಿ ಯಾರು ಅತಿಕ್ರಮಣ ಮಾಡಿದ್ದಾರೋ ಅವರಿಗೆ ಕೊಡಿ...ಇನ್ನು ಈ ವಿಷಯದಲ್ಲಿ ತಾನು ಮಾತನಾಡುವುದಿಲ್ಲ ಎಂದು ಸದಸ್ಯೆ ರಾಧಾ ದೇವಾಡಿಗ ಹತಾಶೆಯಿಂದ ನುಡಿದ ಘಟನೆ ನಡೆಯಿತು. ಹಿರಿಯ ಸದಸ್ಯ ಕೆದೂರು ಸದಾನಂದ ಶೆಟ್ಟಿ ಮಧ್ಯ ಪ್ರವೇಶಿಸಿ ಸದಸ್ಯರ ಕಳಕಳಿ ಆಡಳಿತ ಅರ್ಥಮಾಡಿಕೊಳ್ಳಬೇಕು. ಶಿಕ್ಷಣ ಸಂಸ್ಥೆಯೊಂದರ ಭವಿಷ್ಯ ಡೋಲಾಯಮಾನವಾಗಿರುವಾಗ ಸಹಾಯಕ ಕಮಿಷನರ್ ಸೂಕ್ತ ನಿರ್ಧಾರ ತೆಗೆದುಕೊಳ್ಳಬೇಕು ಎಂದರು. 

ತಾಲೂಕಿನಲ್ಲಿ ಮತ್ತೆ ಅಡಕೆ ಕೊಳೆರೋಗ ಒಕ್ಕರಿಸಿದೆ. ರೈತರು ಭಾರಿ ಸಂಕಷ್ಟಕ್ಕೀಡಾಗಿದ್ದಾರೆ. ಕಳೆದ ಬಾರಿ ಸರಕಾರ ಉತ್ತಮ ರೀತಿಯಲ್ಲಿ ಸ್ಪಂದಿಸಿತ್ತು. ತಾಲೂಕು ಆಡಳಿತ ತಕ್ಷಣ ಅಡಕೆ ಕೊಳೆರೋಗದ ಅಧ್ಯಯನ ನಡೆಸಿ ಸಂತ್ರಸ್ತ ರೈತರ ನೆರವಿಗೆ ನಿಲ್ಲಬೇಕು ಎಂದು ಸದಸ್ಯೆ ಹೇಮಾವತಿ ಪೂಜಾರಿ ಆಗ್ರಹಿಸಿದರು. 

ರೈತರ ಭೂಮಿ ಉಳಿಸಿ: ವಾರಾಹಿ ನೀರಾವರಿ ಯೋಜನೆಯಡಿ ನಡೆಯುತ್ತಿರುವ ಕಾಮಗಾರಿ ಯಿಂದಾಗಿ ರೈತರು ಅಪಾರ ನಷ್ಟ ಉಂಡಿದ್ದಾರೆ. ಅವರ ಸಂಕಷ್ಟ ಆಲಿಸುವ ವ್ಯವಧಾನ ಸಂಬಂಧ ಪಟ್ಟ ಯೋಜನೆಯ ಅಧಿಕಾರಿಗಳಿಗಿಲ್ಲ. ತಾಲೂಕು ಪಂಚಾಯಿತಿಯ ನೋಟಿಸುಗೂ ಮಾನ್ಯತೆ ನೀಡುತ್ತಿಲ್ಲ. ಸೆಕ್ಷನ್ 143 ಪ್ರಕಾರ ಅವರು ಮುಂದಿನ ಸಭೆಗೆ ಹಾಜರಾಗಿ ಸಮಗ್ರ ಉತ್ತರ ನೀಡಬೇಕು ಎಂದು ಸರ್ವ ಸದಸ್ಯರು ಒತ್ತಾಯಿಸಿದರು.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com