ಅತ್ಯಾಚಾರ, ದೌರ್ಜನ್ಯ ಖಂಡಿಸಿ ಪ್ರತಿಭಟನೆ

 ಗಂಗೊಳ್ಳಿ: ರಾಜ್ಯದಲ್ಲಿ ಸ್ತ್ರೀಯರ ಹಾಗೂ ಮಕ್ಕಳ ಮೇಲೆ ಅತ್ಯಾಚಾರ, ದೌರ್ಜನ್ಯಗಳನ್ನು ಹೆಚ್ಚುತ್ತಿದ್ದು ಸಮಾಜದಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ. ಮಕ್ಕಳು ಶಾಂತಿಯಿಂದ ಶಾಲೆಗೆ ಹೋಗಲು ಆಡಚಣೆಗಳು ಉಂಟಾಗಿದೆ. ನಾಗರಿಕ ಸಮಾಜ ಎಚ್ಚೆತ್ತುಕೊಳ್ಳಬೇಕಾಗಿದೆ ಎಂದು ಗಂಗೊಳ್ಳಿ ಇಗರ್ಜಿಯ ಧರ್ಮಗುರು ರೆ.ಫಾ.ಆಲ್ಫೋನ್ಸ್ ಡಿಲೀಮಾ ಹೇಳಿದರು. 
    ಶನಿವಾರ ಗಂಗೊಳ್ಳಿಯ ಚರ್ಚ್ ವಠಾರದಲ್ಲಿ ಕೆಥೋಲಿಕ್ ಸ್ತ್ರೀ ಸಂಘಟನೆ, ಸಮಾನ ಮನಸ್ಕ ಸಂಘಟನೆಗಳು ಹಾಗೂ ಗಂಗೊಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸ್ತ್ರೀ ಶಕ್ತಿ, ಸ್ವಸಹಾಯ ಸಂಘಗಳ ನೇತತ್ವದಲ್ಲಿ ಮಹಿಳೆಯರು, ಮಕ್ಕಳ ಮೇಲಿನ ಅತ್ಯಾಚಾರ ಹಾಗೂ ದೌರ್ಜನ್ಯ ವಿರೋಧಿಸಿ ಹಮ್ಮಿಕೊಂಡ ಪ್ರತಿಭಟನೆಯನ್ನುದ್ದೇಶಿಸಿ ಅವರು ಮಾತನಾಡಿದರು. 
    ಗ್ರಾ.ಪಂ ಮಾಜಿ ಸದಸ್ಯ ಬಿ.ರಾಘವೇಂದ್ರ ಪೈ ಮಾತನಾಡಿ ಸಮಾಜದಲ್ಲಿ ಶಾಂತಿ ಸುವ್ಯವಸ್ಥೆ ಮೂಡಬೇಕಾದರೆ ವಿಚ್ಚಿದ್ರಕಾರಿ ಶಕ್ತಿಗಳ ವಿರುದ್ಧ ಸರಕಾರ ಕಠಿಣ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು. 
    ಅಂಗನವಾಡಿ ಕಾರ್ಯಕರ್ತೆ ಫಿಲೋಮಿನಾ ಮಹಿಳೆಯರ ರಕ್ಷಣೆಗೆ ಬಗ್ಗೆ ಮಾತನಾಡಿದರು. ಗ್ರಾಮ ಪಂಚಾಯಿತಿ ಸದಸ್ಯರಾದ ರಾಜ ಖಾರ್ವಿ, ಜಯಂತಿ ಖಾರ್ವಿ, ಕೆಥೋಲಿಕ್ ಸ್ತ್ರೀ ಸಂಘಟನೆಯ ಅಧ್ಯಕ್ಷೆ ಗ್ಲಾಡಿಸ್ ಡಿಸೋಜ, ಪ್ರೇರಕಿ ಮಾರಿ ಲೂಸಿ, ಶೈಲಾ ಆಲ್ಮೇಡಾ, ರೆಜಿನಾಲ್ಡ್ ಪಿಂಟೋ, ಇಗರ್ಜಿ ಆಡಳಿತ ಮಂಡಳಿ ಸದಸ್ಯರು, ವಿವಿಧ ಸ್ವಸಹಾಯ, ಸ್ತ್ರೀಶಕ್ತಿ ಸಂಘಗಳ ಪದಾಧಿಕಾರಿಗಳು ಪ್ರತಿಭಟನಾ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು. 
     ಇಗರ್ಜಿಯ ಪಾಲನಾ ಮಂಡಳಿ ಉಪಾಧ್ಯಕ್ಷೆ ಪ್ರೀತಿ ಕ್ರಾಸ್ತಾ ಸ್ವಾಗತಿಸಿದರು. ಬಳಿಕ ಪ್ರತಿಭಟನಾ ಮೆರವಣಿಗೆಯು ಚರ್ಚ್ ರಸ್ತೆ ಮೂಲಕ ದೊಡ್ಡಹಿತ್ಲು ಮಾರ್ಗವಾಗಿ ಮುಖ್ಯರಸ್ತೆ ಮೂಲಕ ಪೋಸ್ಟ್ ಆಫೀಸಿನವರೆಗೆ ಸಾಗಿ ಗ್ರಾಮ ಪಂಚಾಯಿತಿ ಬಳಿ ಅಂತ್ಯಗೊಂಡಿತು. ಮೆರವಣಿಗೆ ಬಳಿಕ ಗಂಗೊಳ್ಳಿ ಗ್ರಾಮ ಪಂಚಾಯಿತಿ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಲಾಯಿತು. ಗ್ರಾಪಂ ಅಧ್ಯಕ್ಷೆ ರೇಷ್ಮಾ ಖಾರ್ವಿ, ಉಪಾಧ್ಯಕ್ಷ ಮಹೇಶರಾಜ್ ಪೂಜಾರಿ, ಪಿಡಿಒ ಟಿ.ಸೀತಾ ಮನವಿ ಸ್ವೀಕರಿಸಿದರು. 
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com