ಮಾಧ್ಯಮಗಳು ಸುವಿಚಾರಗಳನ್ನು ಬಿಂಬಿಸಬೇಕು: ಪೂರ್ಣಿಮಾ

ಉಡುಪಿ: ಸಾಹಿತಿಗಳು, ಸಾಂಸ್ಕೃತಿಕ ಲೋಕದ ದಿಗ್ಗಜರನ್ನು ಮಾಧ್ಯಮಗಳು ದೂರವಿಟ್ಟಿದ್ದರಿಂದಲೇ ಅವನತಿಯ ಹಾದಿಯಲ್ಲಿವೆ ಎಂದು ಮೈಸೂರಿನ ಮಾಧ್ಯಮ ತಜ್ಞರಾದ ಡಾ. ಟಿ. ಸಿ. ಪೂರ್ಣಿಮಾ ಹೇಳಿದ್ದಾರೆ. 
   ಅವರು ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ಎರಡು ದಿನಗಳ ಕಾಲ ನಡೆಯುವ ಆಧುನಿಕ ಮಾಧ್ಯಮ ಇಂದಿನ ನೋಟ: ಮುಂದಿನ ಸವಾಲು ವಿಚಾರ ಸಂಕಿರಣ ಹಾಗೂ ಕಾರ್ಯಾಗಾರದಲ್ಲಿ ಸುದ್ದಿ ವಾಹಿನಿ: ಸಾಮಾಜಿಕ, ಸಾಂಸ್ಕೃತಿಕ ಪರಿಣಾಮಗಳು ವಿಷಯವಾಗಿ ಶನಿವಾರ ಮಾತನಾಡಿದರು. 
    ಬದಲಾಗುತ್ತಿರುವ ಸಮಾಜಕ್ಕೆ ತಕ್ಕಂತೆ ಮಾಧ್ಯಮದ ಪುನರ್ ನಿರ್ಮಾಣವಾದೆ ನವ ಸಮಾಜ, ಮುಂದಿನ ಪೀಳಿಗೆಗೆ ಸ್ಪಂದಿಸುವುದು ಸಾಧ್ಯ. ಸಮಾಜದಲ್ಲಿ ಇರುವುದನ್ನೇ ಮಾಧ್ಯಮಗಳು ಬಿಂಬಿಸುತ್ತಿವೆಯೇ ಹೊರತು ಹೊಸದೇನನ್ನೂ ಸೃಷ್ಟಿಸದೆ ನೀಡುವ ಸಂದೇಶ ಓದುಗರು, ನೋಡುಗರ ಮೇಲೆ ಪರಿಣಾಮ ಬೀರುತ್ತಿದೆ. ಈ ನಿಟ್ಟಿನಲ್ಲಿ ಎಚ್ಚರ ವಹಿಸಬೇಕು. 
      ಟಿಆರ್‌ಪಿಗಾಗಿ ಮಾಧ್ಯಮಗಳು ಎಡವದೆ, ತಪ್ಪು ಸಂದೇಶ ರವಾನಿಸದೆ, ಬಂಡವಾಳಶಾಹಿಗಳಿಗಾಗಿ ದುಡುಕದೆ ಸಮಾಜದ ಅಂಕು, ಡೊಂಕುಗಳನ್ನು ಸರಕಾರದ ತಪ್ಪುಗಳನ್ನು ಮುಂದಿಟ್ಟು ಎಚ್ಚರಿಸುವ ಕೆಲಸ ಮಾಡಬೇಕು. ನಾಳಿನ ಜನಾಂಗಕ್ಕೆ ಪತ್ರಕರ್ತರ ಮೂಲಕ ವಿಷ/ಅಮೃತ ಉಣಿಸುತ್ತಿದ್ದೇವೆಯೇ ಎನ್ನುವ ಎಚ್ಚರ ಬಂಡವಾಳಶಾಹಿಗಳಿಗಿರಬೇಕು. 
   ಬೌದ್ಧಿಕ ಸ್ವಾತಂತ್ರ್ಯ ಸಿಗದ ಹೊರತು ಪತ್ರಕರ್ತರು ಶುದ್ಧವಾಗಿ ಕೆಲಸ ಮಾಡಲಾಗದು. ಸಂಸ್ಕೃತಿಯ ವಿಭಿನ್ನತೆ ಪರಿಚಯಿಸಬೇಕು. ಸಮಾಜಕ್ಕೆ ಯಾವ ಸಂಸ್ಕೃತಿ, ಕಾರ್ಯಕ್ರಮ ಬೇಕೆನ್ನುವ ನಿಟ್ಟಿನಲ್ಲಿ ಶಿಫಾರಸು ಮಂಡಳಿಯ ಅಗತ್ಯವಿದೆ. ಸಂತ್ರಸ್ಥ ಹೆಣ್ಣಿಗೆ ಗಂಡ/ಅತ್ತೆಯಿಂದ ಪೊರಕೆಯಿಂದ ಹೊಡೆಸುವ ಶೋಗಳು ಮತ್ತೊಂದು ಬಗೆಯ ದೌರ್ಜನ್ಯ, ಅತ್ಯಾಚಾರವೆಸಗುತ್ತಿವೆ. 
    ಧಾರಾವಾಹಿಗಳ ಮೂಲಕ ಗ್ರಾಮೀಣ ಹೆಣ್ಮಕ್ಕಳ ಬದುಕು ಹಾಳಾಗದಂತೆ, ಉತ್ತಮ ಬದುಕಿಗೆ ಸಂದೇಶ ನೀಡುವ ಎಚ್ಚರ ಮಾಧ್ಯಮಗಳಿರಬೇಕು. ಕಲೆ ಉಳಿಸುವ ಶಕ್ತಿ ಪ್ರದರ್ಶಕ ಕಲೆಗಳಿದ್ದು , ಇದನ್ನು ತೆರೆಗೆ ಅಳವಡಿಸಬೇಕು. ಮೈಕು,ಲ ಪೆನ್ನು, ಕ್ಯಾಮರಾ ರಾಜಕೀಯ ಅಲ್ಲೋಲ, ಕಲ್ಲೋಲದ ಜತೆಗೆ ಪರಿಹಾರದ ಚೈತನ್ಯವನ್ನೂ ಒದಗಿಸಬಲ್ಲದು ಎಂದರು. 
     ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಜಯಕರ ಸುವರ್ಣ, ಕರ್ನಾಟಕ ಮಾಧ್ಯಮ ಅಕಾಡೆಮಿ ಅಧ್ಯಕ್ಷ     ಎಂ. ಎ. ಪೊನ್ನಪ್ಪ , ಕಾರ‌್ಯಾಗಾರ ಸಂಚಾಲಕರಾದ ಡಾ. ಯು. ಬಿ. ರಾಜಲಕ್ಷ್ಮಿ ಉಪಸ್ಥಿತರಿದ್ದರು. ನೆಲ್ಲಿಜೆ ನವ್ಯಜ್ಯೋತಿ ಕಾರ್ಯಕ್ರಮ ನಿರೂಪಿಸಿದರು.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com