ಯಡ್ತಾಡಿ: ಶ್ರಾವಣದ ಕೆಸರಿನಲ್ಲಿ ಕಮಲ ಕೂಟ

ಕೋಟ: ಕೆಸರು ಗದ್ದೆ ಕ್ರೀಡಾಕೂಟವು ಮುಂದಿನ ಗ್ರಾಪಂ ಚುನಾವಣೆಗೆ ಮುನ್ನುಡಿಯಾಗಬೇಕು. ಚುನಾವಣೆ ರಂಗದಲ್ಲಿ ಕಾಂಗ್ರೆಸ್ ಪಕ್ಷವನ್ನು ಕೆಸರಿನಲ್ಲಿ ಕೆಡವಲು ಪಣತೊಡಬೇಕು ಎಂದು ಮಾಜಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು. 

 ಯಡ್ತಾಡಿ ಅಲ್ತಾರು ಜೋಡುಕರೆ ಕಂಬಳಗದ್ದೆ ಬಳಿಯ ಕೃಷಿ ಭೂಮಿಯಲ್ಲಿ ಬಿಜೆಪಿ ಕುಂದಾಪುರ ಯುವ ಮೋರ್ಚಾದ ಆಶ್ರಯದಲ್ಲಿ ಕುಂದಾಪುರ ವಿಧಾನಸಭೆ ಕ್ಷೇತ್ರದ ಬಿಜೆಪಿ ಕಾರ‌್ಯಕರ್ತರು ಹಾಗೂ ಸಾರ್ವಜನಿಕರ ಮನೋರಂಜನೆಗಾಗಿ ಜರುಗಿದ ಶ್ರಾವಣದ ಕೆಸರಿನಲ್ಲಿ ಕಮಲ ಕೂಟ ಕೆಸರು ಗದ್ದೆಯ ಆಟೋಟ ಸ್ಪರ್ಧೆಯ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. 

ರಾಜ್ಯ ಸರಕಾರದ ತಪ್ಪು ನಿರ್ಧಾರದಿಂದ 60 ಲಕ್ಷ ಬಡ ಕುಟುಂಬಗಳು ಮುಂದಿನ ತಿಂಗಳಿಂದ ಪಡಿತರ ವಂಚಿತವಾಗಲಿವೆ. ಆದರೂ ರಾಜ್ಯ ಸರಕಾರ ಇದರ ಕುರಿತು ಚಿಂತಿಸದೆ ಇದ್ದೂ ಸತ್ತಂತಿದೆ ಎಂದು ದೂರಿದರು. 

ಮುಖ್ಯ ಅತಿಥಿ ರಾಜ್ಯ ಹಿಂದುಳಿದ ವರ್ಗಗಳ ಮೋರ್ಚಾದ ಕಾರ್ಯದರ್ಶಿ ಸಿದ್ದೇಶ್ ಮಾತನಾಡಿ, ರಾಜಕೀಯ ಪಕ್ಷವೊಂದರ ಮೂಲಕ ನಮ್ಮ ಮಣ್ಣಿನ ಸೊಗಡನ್ನು ಪರಿಚಯಿಸಿ ಸಂಘಟನೆ ಮಾಡುತ್ತಿರುವುದು ಶ್ಲಾಘನೀಯ ಕಾರ‌್ಯ. ಇದರ ಸ್ಫೂರ್ತಿಯಾಗಿ ಪಡೆದು ನಮ್ಮ ಜಿಲ್ಲೆಗಳಲ್ಲಿಯೂ ಇಂತಹ ಕ್ರೀಡಾ ಕೂಟ ಆಯೋಜಿಸುವುದಾಗಿ ತಿಳಿಸಿದರು. ಮಾಜಿ ಶಾಸಕ ರಘಪತಿ ಭಟ್ ವಾಲಿಬಾಲ್ ಪಂದ್ಯಾಟ ಉದ್ಘಾಟಿಸಿದರು. 

ಕುಂದಾಪುರ ಬಿಜೆಪಿ ಕ್ಷೇತ್ರಾಧ್ಯಕ್ಷ ರಾಜೇಶ ಕಾವೇರಿ, ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ವಿಲಾಸ್ ನಾಯಕ್, ಬಿಜೆಪಿ ರಾಜ್ಯ ಮೀನುಗಾರಿಕಾ ಪ್ರಕೋಷ್ಠದ ಅಧ್ಯಕ್ಷ ಕಿಶೋರ್ ಕುಮಾರ್, ತಾಪಂ ಸದಸ್ಯ ಮಂಜು ಬಿಲ್ಲವ, ಸರೋಜ ಪೂಜಾರಿ, ಕೋಟ ಬಿಜೆಪಿ ಶಕ್ತಿ ಕೇಂದ್ರದ ಅಧ್ಯಕ್ಷ ವಿಠ್ಠಲ್ ಪೂಜಾರಿ ಐರೋಡಿ, ಉದ್ಯಮಿ ರಷಿರಾಜ್ ಸಾಸ್ತಾನ, ಬಿಜೆಪಿ ಯುವ ಮೋರ್ಚಾದ ಅಧ್ಯಕ್ಷ ಶಂಕರ ಅಂಕದಕಟ್ಟೆ, ರವೀಂದ್ರ ದೊಡ್ಮನೆ ಹಾಗೂ ನಾನಾ ಶಕ್ತಿ ಕೇಂದ್ರದ ಅಧ್ಯಕ್ಷರು, ವಿವಿಧ ಮೋರ್ಚಾಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು. ಮಂದಾರ್ತಿ ಶಕ್ತಿ ಕೇಂದ್ರದ ಅಧ್ಯಕ್ಷ ಗೌತಮ್ ಹೆಗ್ಡೆ ಸ್ವಾಗತಿಸಿದರು. ದಿನೇಶ ಗಾಣಿಗ ಕೋಟ ಕಾರ್ಯಕ್ರಮ ನಿರೂಪಿಸಿದರು. 

ಗ್ರಾಮೀಣ ಕ್ರೀಡಾಕೂಟದ ವಿವಿಧ ಸ್ಪರ್ಧೆಗಳು: ಕಬಡ್ಡಿ, ಹಗ್ಗ ಜಗ್ಗಾಟ, ಮಾನವ ಪಿರಮಿಡ್, ಕೆಸರಿನ ಓಟ, ಲಿಂಬೆ ಚಮಚ ಓಟ, ಉಪ್ಪು ಮೂಟೆ ಓಟ, ಡೊಂಕಾಲು ಮೂರ‌್ಕಾಲು ಓಟ, ಗೋಣಿ ಚೀಲ ಓಟ, ನಿಧಿ ಹುಡುಕಾಟ, ಲಗೋರಿ, ಕರಗಳಲ್ಲಿ ಕಮಲ ಮುಂತಾದ ಮರೆಯಾದ ಗ್ರಾಮೀಣ ಕ್ರೀಡಕೂಟಗಳನ್ನು ಆಯೋಜಿಸುವ ಮೂಲಕ ಕಾರ‌್ಯಕರ್ತರು, ಸಾರ್ವಜನಿಕರು ಕೆಸರಿನಲ್ಲಿ ಮಿಂದೆದ್ದು ಖುಷಿ ಅನುಭವಿಸಿದರು.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com