ಮರವಂತೆ ಹೊರ ಬಂದರು ಕಾಮಗಾರಿ ವಿಶೇಷ ಕಾಳಜಿ ಅಗತ್ಯ ಶಾಸಕ ಗೋಪಾಲ ಪೂಜಾರಿ

ಕುಂದಾಪುರ: ರಾಜ್ಯದ ಮೊದಲ ಮೀನುಗಾರಿಕಾ ಹೊರಬಂದರು ಎಂಬ ಖ್ಯಾತಿಗೆ ಪಾತ್ರವಾಗಲಿರುವ ಮರವಂತೆ ಮೀನುಗಾರಿಕಾ ಹೊರ ಬಂದರು ಬಗೆಗೆ ಮೀನುಗಾರರಲ್ಲಿ ಸಾಕಷ್ಟು ನಿರೀಕ್ಷೆಗಳಿವೆ. ಈ ಯೋಜನೆ ವಿಫಲತೆಯನ್ನು ಕಾಣಬಾರದು . ಆದ್ದರಿಂದ ಅದರ ಗುಣಮಟ್ಟದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು ಎಂದು ಶಾಸಕ ಕೆ. ಗೋಪಾಲ ಪೂಜಾರಿ ಹೇಳಿದರು.

ಇಲ್ಲಿನ ಬಂದರು ಕಾಮಗಾರಿಯ ಕುರಿತು ಸ್ಥಳೀಯ ಮೀನುಗಾರರು ವ್ಯಕ್ತ ಪಡಿಸಿದ ಕೆಲವು ಆತಂಕ, ಸಂದೇಹಗಳ ಹಿನ್ನೆಲೆಯಲ್ಲಿ ಸೋಮವಾರ ಶಾಸಕರು ಅಧಿಕಾರಿಗಳು ಮತ್ತು ಮೀನುಗಾರ ಮುಖಂಡರ ಉಪಸ್ಥಿತಿಯಲ್ಲಿ ಬಂದರು ಕಾಮಗಾರಿಯ ಪ್ರಗತಿ ಪರಿಶೀಲಿಸಿದರು.

ಈ ಸಂದರ್ಭದಲ್ಲಿ ಮೀನುಗಾರ ಮುಖಂಡರು ನಿರ್ಮಾಣ ಹಂತದ ಎರಡು ತಡೆಗೋಡೆ ಕುಸಿದಿರುವ ಬಗ್ಗೆ, ಮೀನುಗಾರಿಕಾ ದೋಣಿಗಳ ಪ್ರವೇಶ ಮತ್ತು ನಿರ್ಗಮನ ಮಾರ್ಗ ಕುಸಿದ ಕಲ್ಲುಗಳಿಂದ ಮುಚ್ಚಿಹೋಗಿರುವ ಬಗ್ಗೆ, ತೀರ ಕೊರೆತದಿಂದ ಸಂಪರ್ಕ ರಸ್ತೆ ಅಪಾಯಕ್ಕೆ ಸಿಲುಕಿರುವ ಬಗ್ಗೆ, ತಡೆಗೋಡೆ ರಚನೆಯಲ್ಲಿ ಬಳಸಲಾಗುತ್ತಿರುವ ಕಲ್ಲಿನ ಗಾತ್ರದ ಬಗ್ಗೆ ತಮ್ಮ ಸಂದೇಹ ಮತ್ತು ಆತಂಕ ತೋಡಿಕೊಂಡರು. ಶಾಸಕರ ಸೂಚನೆಯ ಮೇರೆಗೆ ಅವುಗಳಿಗೆ ಬಂದರು ಮತ್ತು ಮೀನುಗಾರಿಕಾ ಇಲಾಖೆಯ ಕಾರ್ಯ ನಿರ್ವಾಹಕ ಇಂಜಿನಿಯರ್‌ ಟಿ. ಎಸ್‌. ರಾಥೋಡ್‌ ಉತ್ತರಿಸಿದರು. ಗುತ್ತಿಗೆದಾರರು ಬƒಹತ್‌ ಯಂತ್ರ ಬಳಸಿ, ಕುಸಿದ ಕಲ್ಲುಗಳನ್ನು ಸ್ವಸ್ಥಾನದಲ್ಲಿ ಇರಿಸುವರು. ತಡೆಗೋಡೆ ಪೂರ್ತಿಯಾದಂತೆ ಅದರ ಇಬ್ಬದಿಯಲ್ಲಿ ರಕ್ಷಣಾತ್ಮಕ ನಿರ್ಮಾಣ ಕಾರ್ಯ ಕೈಗೊಳ್ಳುವರು. ಬಳಸುವ ಕಲ್ಲುಗಳ ಗಾತ್ರ ಮತ್ತು ಅನ್ಯ ಕೆಲಸಗಳನ್ನು ಬಂದರಿನ ವಿನ್ಯಾಸ ಮಾಡಿದ ಪುಣೆಯ ಕೇಂದ್ರೀಯ ಜಲ ಶಕ್ತಿ ಸಂಶೋಧನಾ ಕೇಂದ್ರದ ವಿಜ್ಞಾನಿಗಳ ಮಾರ್ಗದರ್ಶನದಲ್ಲೇ ನಡೆಸಲಾಗುವುದು. ರಸ್ತೆಯನ್ನು ಕಾಮಗಾರಿ ಮುಗಿಯುವ ವರೆಗೆ ವಾಹನ ಸಂಚಾರ ಯೋಗ್ಯ ಸ್ಥಿತಿಯಲ್ಲಿ ಇರಿಸಿಕೊಂಡು, ಬಂದರು ನಿರ್ಮಾಣದ ಬಳಿಕ ಮೇಲ್ದರ್ಜೆಗೇರಿಸಲಾಗುವುದು. ಸ್ಥಳದಲ್ಲಿ ಇಲಾಖೆ ಮತ್ತು ಗುತ್ತಿಗೆದಾರರ ಇಂಜಿನಿಯರ್‌ಗಳನ್ನು ನಿಯುಕ್ತಿಗೊಳಿಸಲಾಗುವುದು ಎಂಬ ವಿವರಣೆ ನೀಡಿದರು.

ಸಭೆಯ ಆರಂಭದಲ್ಲಿ ಇಲಾಖೆಯ ಅಧೀಕ್ಷಕ ಇಂಜಿನಿಯರ್‌ ಕೆ. ಎಸ್‌. ಜಾಂಬಾಳಿ ಯೋಜನೆಯ ಕುರಿತು ಶಾಸಕರಿಗೆ ಮಾಹಿತಿಯಿತ್ತರು. ತಾ.ಪಂ. ಸದಸ್ಯ ಎಸ್‌. ರಾಜು ಪೂಜಾರಿ, ಜಿ.ಪಂ. ಮಾಜಿ ಸದಸ್ಯ ಎಸ್‌. ಮದನಕುಮಾರ, ನಿವೃತ್ತ ಇಂಜಿನಿಯರ್‌ ಎನ್‌. ಎಂ. ಖಾರ್ವಿ ಕಾಮಗಾರಿ ನಡೆಯುವ ಸಂದರ್ಭದಲ್ಲಿ ಸ್ಥಳೀಯರು ವಹಿಸಬೇಕಾದ ಕ್ರಮಗಳ ಬಗ್ಗೆ ಕೆಲವು ಸಲಹೆ ನೀಡಿದರು.

ಉಪ ವಿಭಾಗಾಧಿಕಾರಿ ಎಸ್‌. ಯೋಗೇಶ್ವರ್‌, ಮೀನುಗಾರಿಕಾ ಇಲಾಖೆ ಜಂಟಿ ನಿರ್ದೇಶಕ ಗಣಪತಿ ಭಟ್‌, ಸಹಾಯಕ ನಿರ್ದೇಶಕ ನಾಗರಾಜ, ಸಹಾಯಕ ಕಾರ್ಯ ನಿರ್ವಾಹಕ ಇಂಜಿನಿಯರ್‌ ನಾಗರಾಜ್‌, ಜೂನಿಯರ್‌ ಇಂಜಿನಿಯರ್‌ ಡಯಾಸ್‌, ಲವೀಶ್‌, ಸ್ಥಳೀಯ ಮೀನುಗಾರ ಪ್ರಮುಖರಾದ ಸೋಮಯ್ಯ ಖಾರ್ವಿ, ರಾಮಕೃಷ್ಣ ಖಾರ್ವಿ, ಚಂದ್ರ ಖಾರ್ವಿ, ಪ್ರಭಾಕರ ಖಾರ್ವಿ, ಸಂಜೀವ ಖಾರ್ವಿ, ನಿವೃತ್ತ ಉಪನ್ಯಾಸಕ ಟಿ. ಕೆ. ಖಾರ್ವಿ, ಗ್ರಾ. ಪಂ. ಮಾಜಿ ಅಧ್ಯಕ್ಷ ಎಂ. ವಿನಾಯಕ ರಾವ್‌, ಎಸ್‌. ಜನಾರ್ದನ ಉಪಸ್ಥಿತರಿದ್ದರು.

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com