ಜಿಎಸ್‌ಬಿ ಜಾಗೃತಿ ಸಮಾವೇಶ

ಬೈಂದೂರು: ದೇವರು, ಧರ್ಮ, ಸಂಸ್ಕೃತಿ ವಿಚಾರದಲ್ಲಿ ಒಗ್ಗೂಡುತ್ತಿದ್ದ ಗೌಡ ಸಾರಸ್ವತ ಸಮಾಜ ಸಾಮಾಜಿಕವಾಗಿ ಒಗ್ಗೂಡುತ್ತಿದ್ದುದು ಬಹಳ ಅಪರೂಪ. ಇಂತಹದೊಂದು ಉತ್ತಮ ವಾತಾವರಣ ಸಷ್ಟಿಸಿದ ಶ್ರೇಯಸ್ಸು ಉಡುಪಿ ಜಿಲ್ಲಾ ಗೌಡ ಸಾರಸ್ವತ ಬ್ರಾಹ್ಮಣ ಸಮಾಜ ಹಿತರಕ್ಷಣಾ ವೇದಿಕೆಗೆ ಸಲ್ಲುತ್ತದೆ. ಮುಂದಿನ 10 ವರ್ಷಗಳಲ್ಲಿ ಸಮಾಜದ ಪ್ರತಿಯೊಬ್ಬರೂ ಸಬಲರಾಗುವ ನಿಟ್ಟಿನಲ್ಲಿ ಸಮಾಜ ಬಾಂಧವರು ಒಗ್ಗೂಡಿ ಕೆಲಸ ಮಾಡಬೇಕು ಎಂದು ಕೊಡ್ಯಾಲ್ ವಿಶ್ವಕೊಂಕಣಿ ವಿದ್ಯಾರ್ಥಿ ವೇತನ ನಿಧಿ ಕಾರ್ಯದರ್ಶಿ ಪ್ರದೀಪ್ ಜಿ.ಪೈ ಹೇಳಿದರು. 

ಭಾನುವಾರ ಬೈಂದೂರಿನ ಜೆ.ಎನ್.ಆರ್. ಕಲಾಮಂದಿರದ ದಿ.ಕುಂಜಾಲು ಜಯಂತಿ ಕಿಣಿ ಮತ್ತು ದಿ.ಕುಂಜಾಲು ಸದಾನಂದ ಕಿಣಿ ವೇದಿಕೆಯಲ್ಲಿ ಉಡುಪಿ ಜಿಲ್ಲಾ ಜಿಎಸ್‌ಬಿ ಸಮಾಜ ಹಿತರಕ್ಷಣಾ ವೇದಿಕೆ ಆಶ್ರಯದಲ್ಲಿ ಜರುಗಿದ ಬೈಂದೂರು ವಲಯ ಮಟ್ಟದ ಬಹತ್ ಗೌಡ ಸಾರಸ್ವತ ಬ್ರಾಹ್ಮಣ ಸಮಾಜ ಜಾಗೃತಿ ಸಮಾವೇಶ ಉದ್ಘಾಟಿಸಿ ಮಾತನಾಡಿದರು. 

2012, ಜ.1ರಂದು ಕೋಟೇಶ್ವರದಲ್ಲಿ ಮೊದಲ ಬಾರಿಗೆ ಜರುಗಿದ ಜಿಎಸ್‌ಬಿ ಸ್ವಾಭಿಮಾನಿ ಸಮಾವೇಶ ಸಮಾಜಕ್ಕೆ ದಿಕ್ಸೂ ಚಿಯಾಯಿತು. ಬಳಿಕ ಕಲ್ಯಾಣಪುರದ ಸಮಾವೇಶ ಸಮಾಜದ ಒಗ್ಗೂಡುವಿಕೆಗೆ ಸಾಕ್ಷಿಯಾಯಿತು. ವೇದಿಕೆ ಸಮಾಜದ ಗಣತಿ ನಡೆಸಿ 160 ಕಡು ಬಡ ಕುಟುಂಬ ವನ್ನು ಗುರುತಿಸುವ ಕೆಲಸ ಮಾಡಿತು. ಈ ಪೈಕಿ 50 ಕುಟುಂಬಗಳಿಗೆ ಉಡುಪಿಯ ಬಂಧುವೊಬ್ಬರು ಪ್ರತೀ ತಿಂಗಳು ಆರ್ಥಿಕ ನೆರವು ನೀಡುತ್ತಿದ್ದಾರೆ. 

ಭವ್ಯ ಮೆರವಣಿಗೆ ವೈಭವ: ಸಮಾವೇಶಕ್ಕೆ ಮುನ್ನ ಭವ್ಯ ಮೆರವಣಿಗೆ ನಡೆಯಿತು. ಉಪ್ಪುಂದ ಲಕ್ಷ್ಮೀ ವೆಂಕಟರಮಣ ದೇವರಿಗೆ ಪೂಜೆ ಸಲ್ಲಿಸಿ ಮೆರವಣಿಗೆಗೆ ಚಾಲನೆ ನೀಡಲಾಯಿತು. 1 ಕಿಲೋ ಮೀಟರ್ ವ್ಯಾಪ್ತಿಯಲ್ಲಿ ಸಂಚರಿಸಿದ ಮೆರವಣಿಗೆಯಲ್ಲಿ ಬೈಂದೂರು ವಲಯದ ಸಹಸ್ರಾರು ಜಿಎಸ್‌ಬಿ ಸಮಾಜ ಬಾಂಧವರು ಪಾಲ್ಗೊಂಡಿದ್ದರು. ಶ್ರುತಿ ವಾದ್ಯವಂದ ಉಪ್ಪುಂದ ಮತ್ತು ಸಾಂಪ್ರದಾಯಿಕ ನಾದಸ್ವರದೊಂದಿಗೆ ಮೊದಲ್ಗೊಂಡ ಮೆರವಣಿಗೆ ಶಿಸ್ತುಬದ್ಧವಾಗಿ ಸಂಪನ್ನಗೊಂಡಿತು. 

ಸಾರಸ್ವತ ಲೋಕ ಅನಾವರಣ: ಶಿರೂರಿನಿಂದ ಮೊದಲ್ಗೊಂಡು ಹೆಮ್ಮಾಡಿವರೆಗಿನ ಜಿಎಸ್‌ಬಿ ಕುಟುಂಬಗಳು ಸಮಾವೇಶದಲ್ಲಿ ಪಾಲ್ಗೊಂಡಿದ್ದರು. ಬೈಂದೂರು ಸಾರಸ್ವತರ ಲೋಕವಾಗಿ ಗೋಚರಿಸಿತು. ರುಚಿಕಟ್ಟಾದ ಊಟ, ಉಪಹಾರ ಎಲ್ಲರನ್ನು ಸಂತೃಪ್ತಿಪಡಿಸಿತು. ಶಾಂತೇರಿ ಆಮ್ಗೆಲೆ ಮಾಯಿ (ಶಾಂತೇರಿ ನಮ್ಮ ತಾಯಿ) ಎಂಬ ಭಕ್ತಿಗೀತೆಯೊಂದಿಗೆ ಮಹಿಳೆಯರು ಸಮಾವೇಶಕ್ಕೆ ಚಾಲನೆ ನೀಡಿದರು. ಜಿಎಸ್‌ಬಿ ಸಮಾಜದ ಸಂಸ್ಕೃತಿ, ಸೇವೆ, ಸಮಾಜದ ಶ್ರೇಯೋಭಿವದ್ಧಿ ಕುರಿತು ಚಿಂತನ-ಮಂಥನ ನಡೆಯಿತು. ಬಡವರಿಗೆ ಮನೆ ನಿರ್ಮಾಣ, ಅನಾಥರಿಗೆ ಜೀವನಮುಕ್ತಿ ಯೋಜನೆ ಜಾರಿ ಕುರಿತು ಚಿಂತನೆ ನಡೆಯಿತು.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com