ಗಂಗೊಳ್ಳಿ ಗ್ರಾಮ ದತ್ತು: ಬಿಎಸ್‌ವೈ

ಗಂಗೊಳ್ಳಿ: ಪ್ರಧಾನಿ ನರೇಂದ್ರ ಮೋದಿ ಅವರು ಪ್ರತಿ ಲೋಕಸಭೆ ಸದಸ್ಯರಿಗೆ ಒಂದೊಂದು ಗ್ರಾಮವನ್ನು ದತ್ತು ತೆಗೆದುಕೊಳ್ಳಲು ಅವಕಾಶ ಕಲ್ಪಿಸಿದ್ದು, ಅದರಂತೆ ಶಿವಮೊಗ್ಗ ಲೋಕಸಭೆ ಕ್ಷೇತ್ರ ವ್ಯಾಪ್ತಿಯ ಬೈಂದೂರು ವಿಧಾನಸಭೆ ಕ್ಷೇತ್ರದಲ್ಲಿ ಅತ್ಯಧಿಕ ಜನಸಂಖ್ಯೆ ಹೊಂದಿರುವ ಗಂಗೊಳ್ಳಿ ಗ್ರಾಮ ವನ್ನು ದತ್ತು ತೆಗೆದುಕೊಂಡು ಸರ್ವಾಂಗೀಣ ಅಭಿವೃದ್ಧಿಪಡಿಸಲಾಗುವುದು ಎಂದು ಲೋಕಸಭೆ ಸದಸ್ಯ ಬಿ.ಎಸ್. ಯಡಿಯೂರಪ್ಪ ಭರವಸೆ ನೀಡಿದರು. 
   ಇಲ್ಲಿನ ವೀರೇಶ್ವರ ದೇವಳದಲ್ಲಿ ಸೋಮವಾರ ನಡೆದ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು. ಕಳೆದ ಅವಧಿಯಲ್ಲಿ ಲೋಕಸಭೆ ಸದಸ್ಯರು ಗಂಗೊಳ್ಳಿಯಲ್ಲಿ ಹಲವು ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿದ್ದಾರೆ. ಅದರಲ್ಲಿ ಪ್ರಮುಖವಾಗಿ ಜೆಟ್ಟಿ ಕಾಮಗಾರಿ, ಆರೋಗ್ಯ ಕೇಂದ್ರಕ್ಕೆ ನೂತನ ಕಟ್ಟಡ ಸೇರಿದಂತೆ ಹಲವು ಯೋಜನೆಗಳನ್ನು ಜಾರಿಗೆ ತಂದಿದ್ದು, ಕಾಮಗಾರಿ ಪ್ರಗತಿಯಲ್ಲಿದೆ ಎಂದರು. 
   ಜನಪ್ರತಿನಿಧಿಗಳ ಸಭೆ: ಮುಂದಿನ ಎರಡು ತಿಂಗಳೊಳಗೆ ಬೈಂದೂರು ವಿಧಾನಸಭೆ ಕ್ಷೇತ್ರದ ಪಕ್ಷದ ಜಿಪಂ, ತಾಪಂ ಹಾಗೂ ಗ್ರಾಪಂ ಅಧ್ಯಕ್ಷರ ಹಾಗೂ ಸದಸ್ಯರ ಸಭೆ ಕರೆದು, ಅವರೊಂದಿಗೆ ಕ್ಷೇತ್ರದ ಸಮಸ್ಯೆಗಳ ಬಗ್ಗೆ ಚರ್ಚಿಸಿ ಅದಕ್ಕೆ ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸುವುದರ ಮೂಲಕ ಗ್ರಾಮೀಣ ಭಾಗವನ್ನು ಅಭಿವೃದ್ಧಿಪಡಿಸಲಾಗುವುದು ಎಂದರು. 
   ಕೇಂದ್ರ ಸರಕಾರದ 100 ದಿನದ ಆಡಳಿತ ಕಾರ್ಯವೈಖರಿಯನ್ನು ಶ್ಲಾಘಿಸಿದ ಅವರು, ಮೋದಿಯವರ ಆಡಳಿತ ವೇಗವನ್ನು ಗಮನಿಸಿದರೆ 21 ನೇ ಶತಮಾನ ಭಾರತೀಯರ ಶತಮಾನವಾಗುವುದರಲ್ಲಿ ಯಾವುದೇ ಸಂದೇಹವಿಲ್ಲ. ಮೋದಿಯವರ ಕನಸಿನ ಕೂಸಾದ ಜನಧನ್ ಯೋಜನೆಯ ಮೂಲಕ ದೇಶದ ಎಲ್ಲ ನಾಗರಿಕರು ಬ್ಯಾಂಕ್ ಖಾತೆಯನ್ನು ತೆರೆಯುವುದರ ಮೂಲಕ ಓಡಿ ಸೌಲಭ್ಯ ಹಾಗೂ 1 ಲಕ್ಷ ರೂ. ವಿಮಾ ಸೌಲಭ್ಯ ಪಡೆಯಲು ಅವಕಾಶ ಕಲ್ಪಿಸಲಾಗಿದೆ. ಮೋದಿಯವರು ಎಲ್ಲ ವರ್ಗದ ವರ ವಿಕಾಸವನ್ನು ಬಯಸಿದ್ದು, ಮುಂದಿನ ವರ್ಷದೊಳಗೆ ದೇಶವನ್ನು ಅಚ್ಚರಿಪಡುವಂತೆ ಅವರು ಅಭಿವೃದ್ಧಿಯೆಡೆಗೆ ಕೊಂಡೊಯ್ಯುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. 
    ಹಿಂದಿನ ಯುಪಿಎ ಸರಕಾರ 24 ಲಕ್ಷ ಕೋಟಿ ರೂ. ಸಾಲ ಮಾಡಿ ದೇಶದ ಬೊಕ್ಕಸವನ್ನು ಖಾಲಿ ಮಾಡಿ ಹೋಗಿದೆ. ಅದನ್ನು ತುಂಬುವ ಮೂಲಕ ಅಭಿವೃದ್ಧಿ ಕಾರ್ಯಕ್ರಮಗಳನ್ನು ಜಾರಿಗೆ ತರಬೇಕಾದ ಜವಾಬ್ದಾರಿ ಎನ್‌ಡಿಎ ಸರಕಾರದ ಮೇಲಿದೆ. ಮೋದಿಯವರು ಭ್ರಷ್ಟಾ ಚಾರದ ಸೋಂಕು ತಗುಲದಂತೆ ಅಧಿಕಾರ ನಡೆಸುತ್ತಿದ್ದು, ಭ್ರಷ್ಟಾಚಾರ ಸುತ್ತಿಕೊಂಡ ಮಂತ್ರಿ ಹಾಗೂ ಅಧಿಕಾರಿಗಳನ್ನು 24 ಗಂಟೆಯೊಳಗೆ ಅಧಿಕಾರದಿಂದ ಕಿತ್ತೊಗೆಯಲಿದ್ದಾರೆ. ರಾಜ್ಯ ಸರಕಾರದ ವಿರುದ್ಧ ವಾಗ್ದಾಳಿ ನಡೆಸಿದ ಬಿಎಸ್‌ವೈ, ಸರಕಾರ ಇದ್ದರೂ ಅದು ಸತ್ತಂತಿದೆ ಎಂದು ವಾಗ್ದಾಳಿ ನಡೆಸಿದರು. 
   ಬೈಂದೂರು ವಿಧಾನಸಭೆ ಕ್ಷೇತ್ರದಲ್ಲಿ 166 ಕೋಟಿ ರೂ. ಅನುದಾನ ಒದಗಿಸುವ ಮೂಲಕ ಅಭಿವೃದ್ಧಿ ಕಾರ್ಯಗಳನ್ನು ನಡೆಸಲು ಯೋಜನೆ ಸಿದ್ಧಪಡಿಸಲಾಗುತ್ತಿದೆ ಎಂದರು. ಈ ಸಂದರ್ಭದಲ್ಲಿ ಯಡಿಯೂರಪ್ಪನವರನ್ನು ಸನ್ಮಾನಿಸಲಾುತು.
   ಬಳಿಕ ಗಂಗೊಳ್ಳಿ ಬಂದರು ಪ್ರದೇಶಕ್ಕೆ ಹಾಗೂ ಲೈಟ್ ಹೌಸ್‌ಗೆ ಭೇಟಿ ನೀಡಿ ಕಾಮಗಾರಿ ಪರಿಶೀಲನೆ ನಡೆಸಿದರು. ಮಾಜಿ ಶಾಸಕ ಕೆ. ಲಕ್ಷ್ಮೀನಾರಾಯಣ, ಕ್ಷೇತ್ರಾಧ್ಯಕ್ಷ ಬಿ.ಎಂ. ಸುಕುಮಾರ ಶೆಟ್ಟಿ, ಜಿ ಪಂ ಸದಸ್ಯರಾದ ಗೌರಿ ದೇವಾಡಿಗ, ಇಂದಿರಾ ಶೆಟ್ಟಿ, ತಾಪಂ ಸದಸ್ಯೆ ಪೂರ್ಣಿಮಾ, ಗ್ರಾಪಂ ಅಧ್ಯಕ್ಷೆ ರೇಷ್ಮಾ, ಬಿಜೆಪಿ ಮುಖಂಡರಾದ ರಾಜೇಶ್ ಕಾವೇರಿ, ಸದಾಶಿವ ಪಡುವರಿ, ನಯನಾ ಶ್ಯಾನುಭಾಗ್, ಪುರುಷೋತ್ತಮ, ರಾಘವೇಂದ್ರ ನೆಂಪು, ಪ್ರಭಾಕರ ಮೊವಾಡಿ, ರೆನ್ಸಮ್ ಪಿರೇರಾ ಉಪಸ್ಥಿತರಿದ್ದರು. ಸದಾನಂದ ಶೆಣೈ ಪ್ರಾಸ್ತಾವಿಕವಾಗಿ ಮಾತನಾಡಿದರು. ರಾಘವೇಂದ್ರ ಪೈ ನಿರೂಪಿಸಿ, ಶಿವಾನಂದ ವಂದಿಸಿದರು.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com