ಸಾಹಿತಿ ಜಯಂತ್‌ ಕಾಯ್ಕಿಣಿಗೆ ಶಿವರಾಮ ಕಾರಂತ ಹುಟ್ಟೂರು ಪ್ರಶಸ್ತಿ

ಉಡುಪಿ:  ಸಾಹಿತಿ ಜಯಂತ್‌ ಕಾಯ್ಕಿಣಿ ಅವರನ್ನು ಕಾರಂತ ಹುಟ್ಟೂರು ಪುರಸ್ಕಾರಕ್ಕೆ ಆಯ್ಕೆ ಮಾಡಲಾಗಿದೆ ಎಂದು ಡಾ. ಶಿವರಾಮ ಕಾರಂತ ಹುಟ್ಟೂರು ಪ್ರತಿಷ್ಠಾನದ ಕಾರ್ಯಾಧ್ಯಕ್ಷ ಆನಂದ ಸಿ. ಕುಂದರ್‌ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ಕೋಟತಟ್ಟು ಗ್ರಾಮ ಪಂಚಾಯಿತಿ ಶಿವರಾಮ ಕಾರಂತರ ಹೆಸರಿನಲ್ಲಿ ಒಂಬತ್ತು ವರ್ಷಗಳಿಂದ ಈ ಪ್ರಶಸ್ತಿ ನೀಡುತ್ತಾ ಬಂದಿದೆ.

ಕಥೆಗಾರ, ಸೃಜನಶೀಲ ಸಾಹಿತಿ ಕಾಯ್ಕಿಣಿ ಅವರನ್ನು ಈ ಬಾರಿ ಪುರಸ್ಕರಿಸಲಾಗುತ್ತಿದೆ. ಕಾರಂತ ಥೀಮ್‌ ಪಾರ್ಕ್‌ನಲ್ಲಿ ಅಕ್ಟೋಬರ್‌ 10ರಂದು ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ. ಒಂದು ತಿಂಗಳ ಕಾಲ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ  ಎಂದು ಹೇಳಿದರು.

ಅ.1ರಂದು ಮಕ್ಕಳ ಸಾಹಿತ್ಯ ಸಮ್ಮೇಳನ, 2ರಂದು ಮಕ್ಕಳ ರಂಗೋತ್ಸವ, 3ರಂದು ಚುಟುಕು ಸಾಹಿತ್ಯ ಸಮ್ಮೇಳನ, 4ರಂದು ಯಕ್ಷಗಾನ ಸಮ್ಮೇಳನ, 5ರಂದು ವೈದ್ಯ ಸಾಹಿತಿಗಳ ಸಮ್ಮೇಳನ, 6ರಂದು ಸಾಮರ್ಥ್ಯ ಅಭಿವೃದ್ಧಿ ತರಬೇತಿ ಕಾರ್ಯಾಗಾರ, 7ರಂದು ಪಂಚಾಯತ್‌ ಹಬ್ಬ, 8ರಂದು ಪತ್ರಿಕಾ ತರಬೇತಿ ಕಾರ್ಯಾಗಾರ, 9ರಂದು ಸಂಗೀತ ಸಮ್ಮೇಳನ, 11ರಿಂದ 20ರ ವರೆಗೆ ರಾಜ್ಯ ಮಟ್ಟದ ಚಲನಚಿತ್ರ ಉತ್ಸವ, 21ರಿಂದ 28ರ ವರೆಗೆ ಬೌದ್ಧಿಕ ತರಬೇತಿ ಕಾರ್ಯಾಗಾರ ಮತ್ತು 29ರಿಂದ 31ರ ವರೆಗೆ ಚಿಣ್ಣರ ಚೇತನ ಕಾರ್ಯಕ್ರಮ ನಡೆಯಲಿದೆ ಎಂದರು.

ವಿದ್ಯಾರ್ಥಿಗಳಿಗಾಗಿ ಏಕವ್ಯಕ್ತಿ ಯಕ್ಷಗಾನ ಸ್ಪರ್ಧೆ, ಚಿತ್ರಕಲೆ ಮತ್ತು ಕಾರಂತರ ಕೃತಿಗಳ ಹೆಸರು ಬರೆಯುವ ಸ್ಪರ್ಧೆ ಏರ್ಪಡಿಸಲಾಗಿದೆ. ಇದರಲ್ಲಿ ಪಾಲ್ಗೊಳ್ಳಲು ಇಚ್ಛಿಸುವವರು ಕ್ರಮವಾಗಿ 94488 24559, 97432 80279 ಸಂಪರ್ಕಿಸಬಹುದು.
ಕೋಟತಟ್ಟು ಗ್ರಾಮ ಪಂಚಾಯಿತಿಯ ಅಧ್ಯಕ್ಷೆ ಶೋಭಾ, ಪಿಡಿಒ ಜಯರಾಮ್‌ ಶೆಟ್ಟಿ, ಪ್ರಚಾರ ಸಮಿತಿ ಸಂಚಾಲಕ ಅಶ್ವತ್‌ ಆಚಾರ್ಯ ಉಪಸ್ಥಿತರಿದ್ದರು.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com