ಸೆ.6: 24ನೇ ಮನೋವೈದ್ಯಕೀಯ ಮಹಾ ಸಮ್ಮೇಳನ

ಉಡುಪಿ: ಉಡುಪಿಯ ಮನೋವೈದ್ಯಕೀಯ ಸಂಘದ ಆಶ್ರಯದಲ್ಲಿ ಸೆ.6 ಮತ್ತು 7ರಂದು ಭಾರತೀಯ ಮನೋವೈದ್ಯಕೀಯ ಸಂಘದ ರಾಜ್ಯ ಶಾಖೆಯ ಸಮ್ಮೇಳನವು ಉಡುಪಿಯ ಕಿದಿಯೂರು ಹೋಟೆಲಿನ ಅನಂತಶಯನ ಸಭಾಂಗಣದಲ್ಲಿ ನಡೆಯಲಿದೆ. 

ಮನೋವೈದ್ಯಕೀಯ ಸಂಘದ ಸಂಘಟನಾ ಸಂಚಾಲಕ ಡಾ.ಶ್ರೀಪತಿ ಎಂ.ಭಟ್ ಅವರು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು. 

ಸಮ್ಮೇಳನವನ್ನು ಬೆಳಗ್ಗೆ 9ಗಂಟೆಗೆ ರಾಜ್ಯದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಪ್ರ.ಕಾ.ಶಿವಶೈಲಂ ಅವರು ಉದ್ಘಾಟಿಸಲಿದ್ದಾರೆ. ಅಧ್ಯಕ್ಷತೆಯನ್ನು ಭಾರತೀಯ ಮನೋವೈದ್ಯ ಸಂಘದ ರಾಜ್ಯ ಶಾಖೆಯ ಅಧ್ಯಕ್ಷ ಡಾ.ಮಾಧವ ರಾವ್ ಕೆ.ಎಸ್. ವಹಿಸಲಿದ್ದಾರೆ. ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಶಿವಶಂಕರ್ ಅಮರಣನವರ್, ರಾಜ್ಯ ಶಾಖೆಯ ನೀತಿ ಸಂಹಿತೆಯ ಸಮಿತಿ ಅಧ್ಯಕ್ಷರಾದ ಡಾ.ಹರೀಶ್ ದಳಂತಬೆಟ್ಟು, ಕಾರ್ಯದರ್ಶಿ ಡಾ.ರಂಗನಾಥ ಕುಲಕರ್ಣಿ ಭಾಗವಹಿಸಲಿದ್ದಾರೆ ಎಂದರು. 

'ಮೈಂಡ್ ಆ್ಯಂಡ್ ಬ್ರೈನ್ ಇಂಟರ್‌ಫೇಸ್' ಎಂಬ ಶೀರ್ಷಿಕೆಯಡಿ ನಡೆಯುವ ಈ ಮಹಾ ಸಮ್ಮೇಳನದಲ್ಲಿ ರಾಜ್ಯದಾದ್ಯಂತ 250ಕ್ಕೂ ಹೆಚ್ಚು ಮನೋವೈದ್ಯರುಗಳು ಭಾಗವಹಿಸುವ ನಿರೀಕ್ಷೆಯಿದೆ. ಸಮ್ಮೇಳನದಲ್ಲಿ ವಿವಿಧ ಮಾನಸಿಕ ಆರೋಗ್ಯದ ಆಯಾಮಗಳ ಬಗ್ಗೆ ತಜ್ಞರೊಡನೆ ಚರ್ಚೆ, ವಿಷಯ ಮಂಡನೆ ನಡೆಯಲಿದೆ. 

ಇದೇ ಸಂದರ್ಭದಲ್ಲಿ ಕಂಪ್ಯೂಟರ್‌ಗೆ ಕನ್ನಡ ತಂತ್ರಾಂಶವನ್ನು ನೀಡಿದ, ಸಂವೇದನಾತ್ಮಕ ಮತ್ತು ಭಾಷಾ ವಿಷಯದಲ್ಲಿ ತಮ್ಮದೇ ಕೊಡುಗೆ ನೀಡಿದ ಉಡುಪಿಯ ವಿಜ್ಞಾನಿ ಪ್ರೊ.ಕೆ.ಪಿ.ರಾವ್ ಅವರಿಗೆ 'ಪ್ರೊ.ಆರ್.ಎಲ್.ಕಪೂರ್ ಸ್ಮರಣೀಯ ಪ್ರಶಸ್ತಿ'ಯನ್ನು ಪ್ರದಾನ ಮಾಡಲಾಗುವುದು. ಅಲ್ಲದೆ ಮನೋವೈದ್ಯಕೀಯ ರಂಗದಲ್ಲಿ ಶ್ರಮಿಸಿದ ಡಾ.ಸುರೇಶ್ ಎನ್.ಚಾಟೆ, ಡಾ.ನಾನಾ ಸಾಹೇಬ್ ಎಂ.ಪಾಟೀಲ್ ಅವರ ಸೇವೆಯನ್ನು ಗುರುತಿಸಿ ಸನ್ಮಾನಿಸಲಾಗುವುದು. 

ಸುದ್ದಿಗೋಷ್ಠಿಯಲ್ಲಿ ಸಮ್ಮೇಳನದ ಸಂಘಟನಾ ಕಾರ್ಯದರ್ಶಿ ಡಾ.ಪಿ.ವಿ.ಭಂಡಾರಿ, ಡಾ.ವಿರೂಪಾಕ್ಷ ದೇವರಮನೆ, ಡಾ.ರಾಜೇಶ್‌ಕೃಷ್ಣ ಉಪಸ್ಥಿತರಿದ್ದರು.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com