ಮಾಟದ ಲಿಂಬೆಹಣ್ಣು ಜ್ಯೂಸ್ ಆಯ್ತು!ಕುಂದಾಪುದ ಮಾದರಿ ವಿಜ್ಞಾನ ಶಿಕ್ಷಕನಿಂದ ಮಾಟಮಂತ್ರ ಇಲ್ಲದಾಯ್ತು!!

ಕುಂದಾಪುರ: ಭಾನುವಾರ ಮಧ್ಯಾಹ್ನದ ವೇಳೆ ಕಾರಿನಿಂದಿಳಿದ ವ್ಯಕ್ತಿಯೊಬ್ಬರು ಮೆಸ್ಕಾಂ ಕಚೇರಿ ಮುಂಭಾಗದಲ್ಲಿ ಸಣ್ಣ ಹೊಂಡ ತೋಡಿ ಮಾಟಮಂತ್ರದ ವಸ್ತುಗಳನ್ನಿಟ್ಟು ತೆರಳಿದ್ದಾರೆ. ಇದನ್ನು ಗಮನಿಸಿದ ಲೈನ್‌ಮೆನ್‌ಗಳು ಏನಿರಬಹುದೆಂದು ಮುಚ್ಚಿದ ಮಣ್ಣನ್ನು ಕೆದಕಿ ತೆಗೆದಾಗ ಅದರಲ್ಲಿ ತಾಮ್ರದ ತಗಡು, ಪುಡಿ ಹಾಗೂ ಲಿಂಬೆಹಣ್ಣು ಇರುವುದನ್ನು ಕಂಡು ಯಾರೋ ಮಾಟ ಮಾಡಿದ್ದರೆಂದು ಕೂಡಲೇ ಮೆಸ್ಕಾಂ ನ ಶಾಖಾಧಿಕಾರಿ ಬಾಬಣ್ಣ ಪೂಜಾರಿಗೆ ವಿಷಯ ತಿಳಿಸಿದ್ದಾಗ ಅವರು ತಕ್ಷಣ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. 
     
ಈ ಸುದ್ದಿ ಹಬ್ಬಿ ಮೆಸ್ಕಾಂ ಕಚೇರಿ ಎದುರು ಸಾಕಷ್ಟು ಸಂಖ್ಯೆಯಲ್ಲಿ ಜನ ಸೇರಿದರು. ಆದರೆ ವಿಷಯ ತಿಳಿದ ಕುಂದಾಪುರದ ವಿಜ್ಞಾನ ಶಿಕ್ಷಕ ಉದಯ ಗಾಂವ್ಕರ್ ಸ್ಥಳಕ್ಕೆ ಭೇಟಿ ನೀಡಿ ಮಂತ್ರಿಸಿದ್ದರೆನ್ನಲಾದ ವಸ್ತುವನ್ನು ವಶಕ್ಕೆ ತೆಗೆದುಕೊಂಡರು. ಅಲ್ಲಿಯೇ ಆ ಲಿಂಬೆಹಣ್ಣನ್ನು ಕತ್ತರಿಸಿ ಜ್ಯೂಸ್ ಮಾಡಿ ಕುಡಿದು ಜನರಲ್ಲಿ ಅಚ್ಚರಿ ಮೂಡಿಸಿದರು. ಬಳಿಕ ತಾಮ್ರದ ತಗಡು ಮತ್ತು ಪುಡಿಯನ್ನು ಕಿಸೆಗೆ ಹಾಕಿಕೊಂಡರು. ಆಧುನಿಕ ಕಾಲಘಟ್ಟದಲ್ಲಿ ಇಂತಹ ಘಟನೆಗಳನ್ನು ನಂಬಬಾರದು. ಈ ಬೂಟಾಟಿಕೆಗಳಿಂದ ಏನೂ ಆಗದು. ನಾವು ಮಾನಸಿಕವಾಗಿ ಕುಂದಬಾರದು ಎಂದು ಅಲ್ಲಿ ನೆರದಿದ್ದವರಿಗೆ ಧೈರ್ಯ ತುಂಬಿದರು. 

ಆದರೆ ಈ ನಡುವೆ ಈ ಮಾಟ ಮಾಡಿದ ಬಗ್ಗೆ ಮಾತಿಗಿಳಿದ ಶಾಖಾಧಿಕಾರಿ ಈ ಕೆಲಸ ಮಾಡಿದವರು ಯಾರೆಂದು ತನಗೆ ತಿಳಿದಿದ್ದು ಅವರ ವೈರತ್ವವನ್ನು ಕಚೇರಿ ಮುಂದೆ ತೋರ್ಪಡಿಸುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರೆನ್ನಲಾಗಿದೆ. ಅಲ್ಲದೇ ಸಂಜೆಯ ವೇಳೆ ದೇವರ ಮೇಲೆ ಪ್ರಮಾಣ ಮಾಡಿಸಲು ಮುಂದಾಗಿದ್ದರೆನ್ನಲಾಗಿದೆ.
   
 ಗೋಪಾಡಿ ಗ್ರಾಮದ ಮೆಸ್ಕಾಂ ಕಚೇರಿ ಎದುರು ನಡೆದ ಈ ನೈಜ ಪ್ರಹಸನ ಆಧುನಿಕ ಕಾಲಘಟ್ಟದಲ್ಲಿ ಮೂಢನಂಬಿಕೆಗೆ ಬಲಿಯಾಗಹೊರಟವರನ್ನು ತಡೆದು, ಕಂದಾಚಾರಗಳನ್ನು ಸಮರ್ಥವಾಗಿ ಪ್ರತಿರೋದಿಸುವ ಹೊಸ ಪರಿಪಾಠದ ಹುಟ್ಟಿಗೆ  ನಾಂದಿಹಾಡಿದಂತಾಯಿತು.

Diabolism breaked by Science teacher Uday Gaonkarಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com