ಸಾಹಿತಿ ಕಾಯ್ಕಿಣಿ ಗೆ ಡಾ| ಶಿವರಾಮ ಕಾರಂತ ಹುಟ್ಟೂರ ಪ್ರಶಸ್ತಿ ಪ್ರದಾನ

ಕೋಟ: ಕೋಟ ಡಾ| ಶಿವರಾಮ ಕಾರಂತರು ಸಾಹಿತಿಯಾಗಷ್ಟೇ ಗುರುತಿಸಿಕೊಳ್ಳದೇ ಯಕ್ಷಗಾನ, ಸಿನೆಮಾ, ನಾಟಕ, ಸಮಾಜಸೇವೆ ಹೀಗೆ ಹಲವಾರು ರಂಗಗಳಲ್ಲಿ ತೊಡಗಿಸಿಕೊಂಡು ಸಮಾಜದ ಆಗುಹೋಗುಗಳಿಗೆ ಸ್ವಂದಿಸುವ ಮಹಾನ್‌ ವ್ಯಕ್ತಿಯಾಗಿದ್ದರು ಎಂದು ಸಾಹಿತಿ ಜಯಂತ ಕಾಯ್ಕಿಣಿ ಹೇಳಿದರು.

ಅವರು ಕೋಟ ಕಾರಂತ ಥೀಂ ಪಾರ್ಕ್‌ನಲ್ಲಿ  ಕೋಟತಟ್ಟು ಗ್ರಾಮ ಪಂಚಾಯಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಉಡುಪಿ ಡಾ.ಶಿವರಾಮ ಕಾರಂತ ಟ್ರಸ್ಟ್, ಕೋಟ ಡಾ.ಶಿವರಾಮ ಕಾರಂತ ಹುಟ್ಟೂರು ಪ್ರಶಸ್ತಿ ಪ್ರತಿಷ್ಠಾನದ ಸಂಯುಕ್ತ ಆಶ್ರಯದಲ್ಲಿ ನಡೆದ ಕಾರ್ಯಕ್ರಮದಲ್ಲಿ 10ನೇ ವರ್ಷದ ಕಾರಂತ ಹುಟ್ಟೂರ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದರು.

ತನ್ನ ಜೀವನದ ಕೊನೆ ತನಕ ಸಾಮಾಜಿಕ ಹೋರಾಟದಲ್ಲಿ ಆಸಕ್ತರಾಗಿದ್ದ ಕಾರಂತರ ಸಾಮಾಜಿಕ ಕಾಳಜಿ ಅದ್ಭುತವಾಗಿತ್ತು. ಇಂದು ಯಕ್ಷಗಾನ  ಕಲಾವಿದರನ್ನು ಮೆರವಣಿಗಳಲ್ಲಿ ಸ್ವಾಗತಗಾರರಾಗಿ ಬಳಸುತ್ತಿದ್ದು, ಕಾರಂತರು ಇದ್ದಿದ್ದರೆ ಇಂತಹ ಅವಮಾನಗಳನ್ನು ಸಹಿಸುತ್ತಿರಲಿಲ್ಲ ಎಂದರು.

ನಗರಾಭಿವದ್ದಿ ಸಚಿವ ವಿನಯ ಕುಮಾರ್ ಸೊರಕೆ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿ, ಶಿವರಾಮ ಕಾರಂತರು ಬಹುಮುಖ ಪ್ರತಿಭೆಯ ವ್ಯಕ್ತಿಯಾಗಿದ್ದು, ಸಮಾಜದ ಆಗು ಹೋಗುಗಳಿಗೆ ಸದಾ ಸ್ಪಂದಿಸುತ್ತಿದ್ದರು. ನಾನು ಪುತ್ತೂರಿನ ಶಾಸಕನಾಗಿದ್ದಾಗ ಅವರ ಸೇವೆ ಮಾಡುವ ಭಾಗ್ಯ ನನ್ನ ಪಾಲಿಗೆ ಒದಗಿ ಬಂದಿರುವುದು ನನ್ನ ಭಾಗ್ಯ ಎಂದರು.  

ಕೋಟತಟ್ಟು ಗ್ರಾ.ಪಂ ಅಧ್ಯಕ್ಷೆ ಶೋಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಮುಖ್ಯ ಅತಿಥಿಯಾಗಿ ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ನ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ, ಜಿಪಂ ಸದಸ್ಯೆ ಸುನೀತಾ ರಾಜಾರಾಂ, ತಾಪಂ ಸದಸ್ಯ ಭರತ್ ಕುಮಾರ್ ಶೆಟ್ಟಿ, ಸಾಲಿಗ್ರಾಮ ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಪಿ.ಸಾಧು, ಕೋಟ ಗ್ರಾಪಂ ಅಧ್ಯಕ್ಷ ಎಂ.ಶಿವ ಪೂಜಾರಿ, ಬೆಳಪು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ದೇವಿ ಪ್ರಸಾದ್ ಶೆಟ್ಟಿ ಮೊದಲಾದವರು ಆಗಮಿಸಿ ಶುಭಹಾರೈಸಿದರು. 

ನಿರೂಪಕ ಅವಿನಾಶ್‌ ಕಾಮತ್‌ ಹಾಗೂ ತಂಡದವರು ಜಯಂತ್‌ ಕಾಯ್ಕಿಣಿ ಕುರಿತು ರಚಿಸಿದ ಕಿರುಚಿತ್ರ ಬಿಡುಗೊಂಡಿತು. 

ಪ್ರತಿಷ್ಠಾನದ ಕಾರ್ಯಾಧ್ಯಕ್ಷ ಆನಂದ ಸಿ.ಕುಂದರ್ ಸ್ವಾಗತಿಸಿದರು. ಮಾಜಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಪ್ರಸ್ತಾವನೆಗೈದರು. ಸಾಂಸ್ಕೃತಿಕ ಚಿಂತಕ ಎಚ್.ಶ್ರೀಧರ ಹಂದೆ ಪ್ರಶಸ್ತಿ ಪುರಸ್ಕೃತರನ್ನು ಯಕ್ಷಗಾನ ಶೈಲಿಯಲ್ಲಿ ಪರಿಚಯಿಸಿದರು. ಕಾರ್ಯಕ್ರಮಕ್ಕೆ ಸಹಕರಿಸಿದವರನ್ನು ಪ್ರತಿಷ್ಠಾನದ ಕಾರ್ಯದರ್ಶಿ ಕೋಟ ನರೇಂದ್ರ ಕುಮಾರ್ ಪರಿಚಯಿಸಿ ಗೌರವಿಸಿದರು. ಪಿ.ಡಿ.ಓ ಜಯರಾಮ ಶೆಟ್ಟಿ ವಂದಿಸಿದರು. ಶಿಕ್ಷಕ ಸತೀಶ್ ಪೂಜಾರಿ ವಡ್ಡರ್ಸೆ, ಕು. ಉಷಾ ಕಾರ್ಯಕ್ರಮ ನಿರೂಪಿಸಿದರು.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com