ವೈ. ಮಂಜಯ್ಯ ಶೆಟ್ಟಿ ಜಯಂತಿ ಉತ್ಸವ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭ

ಕುಂದಾಪುರ: ತಪ್ತಿ, ಮಾನವೀಯತೆ ಇಲ್ಲದವರು ಮನುಷ್ಯರಾಗಲು ಸಾಧ್ಯವಿಲ್ಲ. ಸಮಾಜ ಸಾಗುತ್ತಿರುವ ದಿಕ್ಕು ನೋಡಿದಾಗ ವೇದನೆಯಾಗುತ್ತದೆ. ಮುಂಬರುವ ದಿನಗಳು ಮಾನವೀಯತೆ ತುಂಬಿದ ಮನುಷ್ಯರ ದಿನಗಳಾಗಬಹುದು ಎಂದು ಮಾಜಿ ಲೋಕಾಯುಕ್ತ ಜಸ್ಟೀಸ್ ಎನ್.ಸಂತೋಷ್ ಹೆಗ್ಡೆ ಹೇಳಿದರು. 

ಇಲ್ಲಿನ ಆರ್.ಎನ್.ಶೆಟ್ಟಿ ಕಲ್ಯಾಣ ಭವನದಲ್ಲಿ ಕೀರ್ತಿಶೇಷ ಯಡ್ತರೆ ಮಂಜಯ್ಯ ಶೆಟ್ಟಿ ಸ್ಮಾರಕ ಟ್ರಸ್ಟ್ ಹಮ್ಮಿಕೊಂಡ ಯಡ್ತರೆ ಮಂಜಯ್ಯ ಶೆಟ್ಟಿ ಜಯಂತಿ ಉತ್ಸವ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಕೀರ್ತಿಶೇಷ ಯಡ್ತರೆ ಮಂಜಯ್ಯ ಶೆಟ್ಟಿ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದರು. 

ಮಂಜಯ್ಯ ಶೆಟ್ಟಿ ಮತ್ತು ನನ್ನ ತಂದೆ ಕೆ.ಎಸ್.ಹೆಗ್ಡೆ ಸಮಕಾಲೀನರು. ಮಂಜಯ್ಯ ಶೆಟ್ಟಿಯವರ ಹೆಸರಿನಲ್ಲಿ ಪ್ರಶಸ್ತಿ ಪಡೆಯುತ್ತಿರುವುದಕ್ಕೆ ತುಂಬು ಸಂತೋಷವಾಗುತ್ತಿದೆ. ಅವರೊಬ್ಬ ಆದರ್ಶ ರಾಜಕಾರಣಿ ಎಂದರು. 

ಪ್ರಶಸ್ತಿ ಸ್ವೀಕರಿಸಿದ ಖ್ಯಾತ ಸಾಹಿತಿ ವೈದೇಹಿ ಮಾತನಾಡಿ, ಯಡ್ತರೆ ಮಂಜಯ್ಯ ಶೆಟ್ಟಿ ದೊಡ್ಡ ವ್ಯಕ್ತಿತ್ವದ ಸಾತ್ವಿಕ ರಾಜಕಾರಣಿ. ಅವರು ದೂರದಲ್ಲಿ ನಡೆದುಕೊಂಡು ಬರುತ್ತಿದ್ದರೆ ಎಲ್ಲರೂ ಶಿರಬಾಗಿ ನಿಲ್ಲುತ್ತಿದ್ದರು. ಸತ್ತ ಮೇಲೂ ಅವರು ಜೀವಂತವಾಗಿದ್ದಾರೆ ಎಂದಾದರೆ ಅವರು ಬಿಟ್ಟು ಹೋಗಿರುವ ಮಾನವೀಯ ಮೌಲ್ಯಗಳೇ ಸಾಕ್ಷಿ ಎಂದರು. 

ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವದ್ಧಿ ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕ ಡಾ.ಎಲ್.ಎಚ್.ಮಂಜುನಾಥ್ ಪ್ರಶಸ್ತಿ ಸ್ವೀಕರಿಸಿ ಮಾತನಾಡಿ, ದೇಶದಲ್ಲೇ ಮೊದಲ ಬಾರಿಗೆ ಗ್ರಾಮಾಭಿವದ್ಧಿ ಯೋಜನೆಯಿಂದ ಪ್ರೇರಿತವಾಗಿ ಭಾರತೀಯ ಜೀವವಿಮಾ ನಿಗಮ ಭಾಗ್ಯಲಕ್ಷ್ಮೀ ವಿಮಾ ಯೋಜನೆ ಬಡವರಿಗಾಗಿ ಜಾರಿಗೆ ತರುತ್ತಿದೆ ಎಂದರು. 

ಬೆಂಗಳೂರು ಉದ್ಯಮಿ ಡಾ.ಆರ್.ಎನ್.ಶೆಟ್ಟಿ ಸಮಾರಂಭ ಉದ್ಘಾಟಿಸಿದರು. ಯಡ್ತರೆ ಮಂಜಯ್ಯ ಶೆಟ್ಟಿ ಸ್ಮಾರಕ ಟ್ರಸ್ಟ್‌ನ ಅಧ್ಯಕ್ಷ ಬಿ.ಜಗನ್ನಾಥ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಶಾಸಕ ಎ.ಜಿ.ಕೊಡ್ಗಿ, ಬೈಂದೂರು ಶಾಸಕ ಕೆ.ಗೋಪಾಲ ಪೂಜಾರಿ, ಪುರಸಭೆ ಅಧ್ಯಕ್ಷೆ ಕಲಾವತಿ ಯು.ಎಸ್., ಉಪಾಧ್ಯಕ್ಷ ನಾಗರಾಜ ಕಾಮಧೇನು, ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದ ಆಡಳಿತ ಮೊಕ್ತೇಸರ ಕಷ್ಣಪ್ರಸಾದ್ ಅಡ್ಯಂತಾಯ, ಪ್ರೊ.ಎಂ.ಸುಬ್ಬಣ್ಣ ಶೆಟ್ಟಿ ಕೋಟೇಶ್ವರ, ಯು.ಟಿ.ಆಳ್ವ ಮಂಗಳೂರು, ಡಾ.ವೈ.ಎಸ್.ಹೆಗ್ಡೆ, ಡಾ.ಎಂ.ಲಕ್ಷ್ಮೀನಾರಾಯಣ ಶೆಟ್ಟಿ, ಯು.ಸೀತಾರಾಮ ಶೆಟ್ಟಿ, ಡಾ.ಸುರೇಂದ್ರ ಹೆಗ್ಡೆ, ಗೌತಮ್ ಹೆಗ್ಡೆ ಉಪಸ್ಥಿತರಿದ್ದರು. 

ಇದೇ ಸಂದರ್ಭ ಅಶಕ್ತರಿಗೆ ವೈದ್ಯಕೀಯ ನೆರವು ವಿತರಿಸಲಾಯಿತು. ಮಾಜಿ ಶಾಸಕ ಬಿ.ಅಪ್ಪಣ್ಣ ಹೆಗ್ಡೆ ಸ್ವಾಗತಿಸಿದರು. ಡಾ.ಎಚ್.ವಿ.ನರಸಿಂಹಮೂರ್ತಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ನ್ಯೂಮೆಡಿಕಲ್ ದಿನಕರ ಶೆಟ್ಟಿ ಸನ್ಮಾನಪತ್ರ ವಾಚಿಸಿದರು. ದಿನಕರ ಆರ್.ಶೆಟ್ಟಿ ಮತ್ತು ಯು.ಎಸ್.ಶೆಣೈ ಕಾರ್ಯಕ್ರಮ ನಿರ್ವಹಿಸಿದರು. ಆವರ್ಸೆ ಸುಧಾಕರ ಶೆಟ್ಟಿ ವಂದಿಸಿದರು. 

ರಸ್ತೆ ನಾಮಫಲಕ ಅನಾವರಣ: ಸಮಾರಂಭಕ್ಕೆ ಮೊದಲು ಮಾಜಿ ಲೋಕಾಯುಕ್ತ ಜಸ್ಟೀಸ್ ಎನ್.ಸಂತೋಷ್ ಹೆಗ್ಡೆ ಕುಂದಾಪುರ ಶಾಸ್ತ್ರೀವತ್ತದಿಂದ ಶೆಣೈ ಪಾರ್ಕ್‌ವರೆಗಿನ ಮುಖ್ಯರಸ್ತೆಗೆ 'ಯಡ್ತರೆ ಮಂಜಯ್ಯ ಶೆಟ್ಟಿ ರಸ್ತೆ' ಎಂದು ಮರುನಾಮಕರಣಗೊಳಿಸಿರುವ ನಾಮಫಲಕ ಅನಾವರಣಗೊಳಿಸಿದರು. 
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com