ಮರವಂತೆಯಲ್ಲಿ ಕೇಂದ್ರೀಕೃತ ಸೋಲಾರ್ ಬೀದಿದೀಪ ಉದ್ಘಾಟನೆ

ಮರವಂತೆ : ಇಲ್ಲಿ ಅನುಷ್ಠಾನವಾಗುತ್ತಿರುವ ಐದನೆ ಹಂತದ ಸುವರ್ಣ ಗ್ರಾಮೋದಯ ಯೋಜನೆ ಮತ್ತು ಫಿಲಿಪ್ಸ್ ಇಂಡಿಯದ ಪ್ರಾಯೋಗಿಕ ಯೋಜನೆಯಡಿ ಅಲ್ಲಿನ ಹರಿಶ್ಚಂದ್ರ ಮಾರ್ಗಕ್ಕೆ  ಅಳವಡಿಸಿದ ವಿನೂತನ ಕೇಂದ್ರೀಕೃತ ಸೋಲಾರ್ ಬೀದಿದೀಪಗಳನ್ನು ಮಾಜಿ ಸಚಿವ, ಹಾಲಿ ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಗುರುವಾರ ಉದ್ಘಾಟಿಸಿದರು. 
      ಈ ಸಂದರ್ಭದಲ್ಲಿ ಮಾತನಾಡಿದ ಅವರು ವಿದ್ಯುತ್ ಕೊರತೆ ಇರುವ ಪ್ರಸಕ್ತ ಸನ್ನಿವೇಶದಲ್ಲಿ ಸೋಲಾರ್ ವಿದ್ಯುತ್ ಬಳಕೆಗೆ ಆದ್ಯತೆ ನೀಡಬೇಕಾಗಿದೆ. ಸೂರ್ಯಶಕ್ತಿ ಪರಿಸರ ಸ್ನೇಹಿಯಾಗಿರುವುದರಿಂದ ಸರಕಾರ ಕೂಡ ಅದಕ್ಕೆ ಉತ್ತೇಜನ ನೀಡಬೇಕು ಎಂದರು. 
    ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಫಿಲಿಪ್ಸ್ ರಿಸರ್ಚ್ ಇಂಡಿಯದ ಪಿನ್ಸಿಪಲ್ ಸೈಂಟಿಸ್ಟ್ ಡಾ. ಐರೋಡಿ ನರೇಂದ್ರನಾಥ ಉಡುಪ ತಮ್ಮ ಸಂಸ್ಥೆಯ ವಿನೂತನ ಆವಿಷ್ಕಾರದ ವಿವರ ನೀಡಿದರು. 
     ಹೆಚ್ಚಿನ ಕಡೆ ಈಗ ಅಳವಡಿಸಲಾಗುತ್ತಿರುವ ಪ್ರತ್ಯೇಕ ಸೋಲಾರ್ ಬೀದಿದೀಪದ ಬದಲಿಗೆ ಇಲ್ಲಿ ಕೇಂದ್ರೀಕೃತ ವ್ಯವಸ್ಥೆ ಇರುತ್ತದೆ. ಒಂದು ಸುರಕ್ಷಿತ ಸ್ಥಳದಲ್ಲಿ ಸೋಲಾರ್ ಮಾಡ್ಯೂಲ್, ಬ್ಯಾಟರಿ ಮತ್ತು ನಿಯಂತ್ರಕ ಸಾಧನ ಇರಿಸಿ, ಅವುಗಳನ್ನು ತಂತಿಯ ಮೂಲಕ ಕಂಬಗಳಲ್ಲಿರುವ ಕಡಿಮೆ ಶಕ್ತಿ, ಅಧಿಕ ಪ್ರಕಾಶದ ಎಲ್‌ಇಡಿ ದೀಪಗಳಿಗೆ ಜೋಡಿಸಿ ಅವುಗಳನ್ನು ಬೆಳಗಿಸಲಾಗುತ್ತದೆ. ಸೂರ್ಯನ ಬೆಳಕನ್ನು ಆಧರಿಸಿ ದೀಪಗಳು ತಂತಾನೆ ಹೊತ್ತಿಕೊಳ್ಳುವ ಮತ್ತು ಆರಿಹೋಗುವ,  ಅಳವಡಿಸಿದ ವ್ಯವಸ್ಥೆಯಲ್ಲಿ ಉಂಟಾಗುವ ಏರುಪೇರುಗಳನ್ನು ಮುಂಗಂಡು, ಅಗತ್ಯ ಪರಿಹಾರ ಸೂಚಿಸಲು ಸಾಧ್ಯಗುವ ದೂರಸಂವೇದಿ ಕಣ್ಗಾವಲು ವ್ಯವಸ್ಥೆ ಫಿಲಿಪ್ಸ್ ಸಾಧನದ ವೈಶಿಷ್ಟ್ಯ . ಹಲವು ಸಂಕೀರ್ಣಗಳಲ್ಲಿ ಇದನ್ನು ಕಂಪನಿ ಯಶಸ್ವಿಯಾಗಿ ಅಳವಡಿಸಿದೆ. ಗ್ರಾಮಾಂತರ ಬೀದಿದೀಪದ ವಿಭಾಗದಲ್ಲಿ ಮರವಂತೆ ಗ್ರಾಮ ಪಂಚಾಯತ್‌ನಲ್ಲಿ ನಮ್ಮದು ಮೊದಲ ಪ್ರಯೋಗ. ಸಾಧನೆಯ ಮೂಲಕ ವಿವಿಧ ಮಟ್ಟಗಳಲ್ಲಿ ಗುರುತಿಸಿಕೊಂಡಿರುವ ಮರವಂತೆ ಗ್ರಾಮ ಪಂಚಾಯತ್‌ಗೆ ವಿವಿಧೆಡೆಯ ಆಸಕ್ತರು ಭೇಟಿ ನೀಡುತ್ತಿರುವುದನ್ನು ಮನಗಂಡು ಫಿಲಿಪ್ಸ್ ಅದಕ್ಕೆ ಮರವಂತೆಯನ್ನು ಆಯ್ಕೆಮಾಡಿಕೊಂಡಿದೆ ಎಂದು ಅವರು ಹೇಳಿದರು. 
   ಗ್ರಾಮ ಪಂಚಾಯತ್ ಅಧ್ಯಕ್ಷೆ ಕೆ. ಎ. ಸುಗುಣಾ, ಸದಸ್ಯರು, ಅಭಿವೃದ್ಧಿ ಅಧಿಕಾರಿ ಪೂರ್ಣಿಮಾ ,ಸಿಬಂದಿ, ಫಿಲಿಪ್ಸ್ ತಂಡದ ಗಿರೀಶ್, ಉಪ್ಪುಂದ ಮಂಜುನಾಥ ಮಯ್ಯ, ಶ್ರೀನಿವಾಸ ಚಾರಿ, ಜೋಯ್ಸನ್ ಪಾಟೀಲ್, ಸ್ಕಾಟ್ ರೀಡ್, ದೀಪ ಅಳವಡಿಸಿದ ಹೆಮ್ಮಾಡಿಯ ವಿಧಾತ್ರಿ ಸೊಲ್ಯೂಷನ್ಸ್‌ನ ಪ್ರದೀಪ್ ಜಿ. ಬಿ, ಇತರರು ಇದ್ದರು
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com