ಸಂಶಯಾಸ್ಪದ ಸಾವು. ಯುವಕನ ಶವವಿಟ್ಟು ಪ್ರತಿಭಟನೆ

ಕುಂದಾಪುರ: ಇಲ್ಲಿನ ಖಾರ್ವಿಕೇರಿಯ ಪಂಚಗಂಗಾವಳಿ ನದಿಯಲ್ಲಿ ಹೆಣವಾಗಿ ಪತ್ತೆಯಾದ ಪ್ರಮೋದ್ ಖಾರ್ವಿಯ ಸಾವು ಆಕಸ್ಮಿಕವಿರಬಹುದು ಎಂದು ಆತನ ತಂದೆ ಗಣಪತಿ ಖಾರ್ವಿ ಹೇಳಿಕೆ ನೀಡಿದ ಬೆನ್ನಲ್ಲೇ, ತನ್ನ ಮಗನನ್ನು  ಯಾರೋ ಕೊಲೆಗೈದಿದ್ದಾರೆ ಎಂದು ಆತನ ತಾಯಿ ಜಯಲಕ್ಷ್ಮೀ  ಕುಂದಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. 
   'ಕಳೆದ ಕೆಲವು ದಿನಗಳ ಹಿಂದೆ ದೂರವಾಣಿ ಮೂಲಕ ನಾಲ್ವರಿಂದ ತನಗೆ ಜೀವ ಬೆದರಿಕೆ ಇರುವುದಾಗಿ ಪುತ್ರ ತಿಳಿಸಿದ್ದ.  ಈಜು ಚನ್ನಾಗಿ ಬಲ್ಲವನಾಗಿದ್ದ ತನ್ನ ಮಗ ನದಿಗೆ ಬಿದ್ದು ಸಾವನ್ನಪ್ಪಲು ಸಾಧ್ಯವಿಲ್ಲ. ಈ ಸಾವಿನ ಬಗ್ಗೆ ಸಂಶಯವಿದೆ ತಿಳಿಸಿದ್ದಾರೆ. ಮೃತದೇಹದ ಮರಣೋತ್ತರ ಪರೀಕ್ಷೆಯನ್ನು ಮಣಿಪಾಲ ಆಸ್ಪತ್ರೆಯಲ್ಲಿ ನಡೆಸಿ ವಾರೀಸುದಾರರಿಗೆ ಬಿಟ್ಟುಕೊಡಲಾಗಿದೆ. 
    ಪ್ರಮೋದ್ ಖಾರ್ವಿಯ ಸಾವಿನ ವರ್ತಮಾನ ತಿಳಿಯುತ್ತಿದ್ದಂತೆ ಖಾರ್ವಿಕೇರಿಯಲ್ಲಿ ಉದ್ವಿಗ್ನತೆ ಉಂಟಾಯಿತು. ಯಾರೊ ಈತನನ್ನು ಬೆಳಗಿನ ತನಕ ಅಟ್ಟಾಡಿಸಿಕೊಂಡು ಹತ್ಯೆಗೈದು ನದಿಗೆ ಎಸೆದಿದ್ದಾರೆ ಎಂಬ ಗುಸು ಗುಸು ಹಬ್ಬಿದ್ದರಿಂದ ಬುಧವಾರ ಪರಿಸ್ಥಿತಿ ಬಿಗಡಾಯಿಸಿತು. ಖಾರ್ವಿಕೇರಿಯಲ್ಲಿ ಕಳೆದ ಕೆಲವು ದಿನಗಳಿಂದ ನಡೆಯುತ್ತಿರುವ ಮರಳುಗಾರಿಕೆ ದಂಧೆಯಲ್ಲಿ ತೊಡಗಿಸಿಕೊಂಡಿರುವ ಅನ್ಯ ರಾಜ್ಯದ ಮಂದಿಯ ವಿರುದ್ಧ ಈ ಆಕ್ರೋಶ ತಿರುಗಿ, ಪರಿಸ್ಥಿತಿ ವಿಕೋಪಕ್ಕೆ ತಿರುಗಿದ್ದರಿಂದ ಪೊಲೀಸರು ಮಧ್ಯ ಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಿದರು. ಮುಂಜಾಗ್ರತೆ ಕ್ರಮವಾಗಿ ಪರಿಸರದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ. 
    ಶಾಸ್ತ್ರೀವತ್ತದಲ್ಲಿ ಶವವನ್ನಿಟ್ಟು ಪ್ರತಿಭಟಿಸುತ್ತಿದ್ದ ಉದ್ರಿಕ್ತರನ್ನು ಸಮಾಧಾನಪಡಿಸಲು ಆಗಮಿಸಿದ ಡಿವೈಎಸ್ಪಿ ಸಿ.ಬಿ.ಪಾಟೀಲ್ ಮತ್ತು ಪ್ರತಿಭಟನಾಕಾರರ ನಡುವೆ ಮಾತಿನ ಚಕಮಕಿ ನಡೆಯಿತು. ಯುವಕನ ಸಾವಿನ ಬಗ್ಗೆ ತಮಗೆ ಅನುಮಾನವಿದೆ ಎಂದು ಹೇಳುತ್ತಿದ್ದರೂ ಪೊಲೀಸರು ದೂರು ದಾಖಲಿಸಿಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ ಎಂದು ಪ್ರತಿಭಟನಕಾರರು ಅಸಮಾಧಾನ ವ್ಯಕ್ತಪಡಿಸಿದರು. ಪರಿಣಾಮ ಗೊಂದಲದ ವಾತಾವರಣ ಸಷ್ಟಿಯಾಯಿತು. ಸಾವಿರಾರು ಸಂಖ್ಯೆಯಲ್ಲಿ ನಾಗರಿಕರು ಜಮಾಯಿಸಿದ್ದರಿಂದ ಹೆದ್ದಾರಿ ಸಂಚಾರ ಅಸ್ತವ್ಯಸ್ತ ಉಂಟಾಯಿತು. ಬಳಿಕ ಸ್ಥಳಕ್ಕಾಗಮಿಸಿದ ಸರ್ಕಲ್ ಇನ್ಸ್‌ಪೆಕ್ಟರ್ ಎಂ.ದಿವಾಕರ್ ಪ್ರತಿಭಟನಾಕಾರರಿಗೆ ನ್ಯಾಯ ದೊರಕಿಸಿಕೊಡುವ ಮನವಿ ಮಾಡಿಕೊಂಡ ಮೇರೆಗೆ ಉದ್ರಿಕ್ತ ನಾಗರಿಕರು ಸ್ಥಳದಿಂದ ಕದಲಿದರು. ಬಳಿಕ ಶವಮೆರವಣಿಗೆ ನಡೆಸಿ ಅಂತ್ಯವಿಧಿ ನೆರವೇರಿಸಲಾಯಿತು. 
  
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com