ಒಕ್ಕಲ್ಲೆಬ್ಬಿಸುವಿಕೆ ವಿರೋಧಿಸಿ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ

ಕುಂದಾಪುರ: ಮನೆ ನಿವೇಶನ, ಭೂಮಿ ಹಕ್ಕಿಗಾಗಿ ಕರ್ನಾಟಕ ಪ್ರಾಂತ ರೈತ ಸಂಘ, ನಿವೇಶನ ರಹಿತರ ಹೋರಾಟ ಸಮಿತಿ ಸಾಕಷ್ಟು ಹೋರಾಟ ನಡೆಸಿ ಅರ್ಜಿ ಸಲ್ಲಿಸಿದ್ದರೂ ಈತನಕ ತಾಲೂಕು ಆಡಳಿತ ಎಚ್ಚೆತ್ತುಕೊಂಡಿಲ್ಲ. ಭೂಮಿ ಹಕ್ಕು ನೀಡುವಲ್ಲಿ ವಿಫಲವಾಗಿದೆ. ಭೂರಹಿತ ಬಡವರು, ಅಲ್ಲದೆ ಬಡ ರೈತರ ಬದುಕಿಗೆ ಬರೆ ಏಳೆಯಲು ಸರಕಾರ ಹೊರಟಿದೆ ಎಂದು ಕರ್ನಾಟಕ ಪ್ರಾಂತ ರೈತ ಸಂಘ ತಾಲೂಕು ಸಮಿತಿ ಪ್ರಧಾನ ಕಾರ್ಯದರ್ಶಿ ಮಹಾಬಲ ವಡೇರಹೋಬಳಿ ಹೇಳಿದರು. 

ಮಂಗಳವಾರ ಬೆಳಗ್ಗೆ ಇಲ್ಲಿನ ತಾಲೂಕು ಕಚೇರಿ ಎದುರು ಭೂಮಿ ಹಕ್ಕು ಆಗ್ರಹಿಸಿ ಕರ್ನಾಟಕ ಪ್ರಾಂತ ರೈತ ಸಂಘ ಹಮ್ಮಿಕೊಂಡಿರುವ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹವನ್ನುದ್ದೇಶಿಸಿ ಅವರು ಮಾತನಾಡಿದರು. 

ಬಗರ್‌ಹುಕಂ ಸಾಗುವಳಿದಾರರನ್ನು ಭೂಒತ್ತುವರಿದಾರರ ಸಾಲಿಗೆ ಸೇರಿಸಿ ಸರಕಾರ ಅನ್ಯಾಯವೆಸಗಿದೆ. ಭೂಒತ್ತುವರಿ ಹೆಸರಿನಲ್ಲಿ ಬಡವರನ್ನು ಒಕ್ಕಲ್ಲೆಬ್ಬಿಸುವ ಪ್ರಯತ್ನ ಖಂಡನೀಯ. ಬಡರೈತರ ಸರಕಾರಿ ಭೂಮಿ ಒತ್ತುವರಿಯನ್ನು ತೆರವುಗೊಳಿಸಬಾರದು. ಕಂದಾಯ ಮತ್ತು ಅರಣ್ಯ ಇಲಾಖೆ ಕಾಯಿದೆಗೆ ತಕ್ಷಣ ತಿದ್ದುಪಡಿ ಮಾಡಬೇಕು. ಅಕ್ರಮ-ಞ;ಸಕ್ರಮ ಸಮಿತಿಯನ್ನು ಹೋಬಳಿ ಮಟ್ಟದಲ್ಲಿ ರಚಿಸಿ ಬಡವರು, ನಿವೇಶನ ರಹಿತರಿಗೆ ಭೂಮಿ ಹಕ್ಕು ನೀಡಬೇಕು ಎಂದು ಅವರು ಒತ್ತಾಯಿಸಿದರು. 

ಕರ್ನಾಟಕ ಪ್ರಾಂತ ರೈತ ಸಂಘ ತಾಲೂಕು ಸಮಿತಿ ಅಧ್ಯಕ್ಷ ಯು.ದಾಸ ಭಂಡಾರಿ ಮಾತನಾಡಿ ನ್ಯಾಯ ಸಿಗೋತನಕ ಹೋರಾಟ ಮುಂದುವರಿಸಲಾಗುವುದು. ನಿವೇಶನ ರಹಿತರ ಅರ್ಜಿ ತಕ್ಷಣ ಪರಿಶೀಲಿಸಿ ಅರ್ಹ ಫಲಾನುಭವಿಗಳಿಗೆ ಜಮೀನು ಹಂಚಿಕೆ ಮಾಡಬೇಕು ಎಂದರು. ಮುಖಂಡರಾದ ಕೆ.ಶಂಕರ್, ರಾಜೀವ ಪಡುಕೋಣೆ, ಎಚ್.ನರಸಿಂಹ, ಸುರೇಶ್ ಕಲ್ಲಾಗರ, ವೆಂಕಟೇಶ್ ಕೋಣಿ, ನಿವೇಶನ ರಹಿತರು, ಕಷಿಕರು, ಕಷಿಕೂಲಿಕಾರರು ಧರಣಿ ಸತ್ಯಾಗ್ರಹದಲ್ಲಿ ಭಾಗವಹಿಸಿದ್ದಾರೆ.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com