ಆಳ್ವಾಸ್ ವಿದ್ಯಾರ್ಥಿ ಸಿರಿ ಸಂಪನ್ನ

ಮೂಡುಬಿದಿರೆ: ಇಂದು ಗೆಲುವಿನ ಜಗತ್ತೇ ನಮ್ಮ ಕೈಯಲ್ಲಿದೆ. ಸಾಧನೆಗೆ ಅಡ್ಡಿ ಆತಂಕಗಳು ಬಂದಾಗ ಅವುಗಳನ್ನು ತೊಡೆದು ಹಾಕಿ ಮುಂದೆ ಸಾಗಬೇಕು. ಪ್ರತಿಯೊಬ್ಬ ವಿದ್ಯಾರ್ಥಿಗಳಿಗೂ ಪ್ರೊತ್ಸಾಹ ನೀಡುವ ಗುರು ಮತ್ತು ಸಾಧಿಸುವ ಛಲ, ಗುರಿ ಮುಖ್ಯವಾದಾಗ ಸಾಧನೆ ಸಾಧ್ಯ ಎಂದು ಗಿನ್ನೆಸ್ ದಾಖಲೆಯ ನಿರ್ದೇಶಕ ಮಾಸ್ಟರ್ ಕಿಶಾನ್ ಹೇಳಿದರು.

ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಆಶ್ರಯದಲ್ಲಿ ನಡೆದ ಆಳ್ವಾಸ್ ವಿದ್ಯಾರ್ಥಿಸಿರಿ-೨೦೧೪ ಸಮ್ಮೇಳನಕ್ಕೆ ಶುಕ್ರವಾರ ಡಾ.ವಿ.ಎಸ್.ಆಚಾರ್ಯ ಸಭಾಂಗಣದಲ್ಲಿ ಚಾಲನೆ ನೀಡಿ ಮಾತನಾಡಿದರು.

ಸಾಹಿತ್ಯ, ಸಾಂಸ್ಕೃತಿಯ ಸೊಬಗು ನಗರ ಪ್ರದೇಶದಲ್ಲಿ ಸಿಗುತ್ತಿಲ್ಲ. ವಿದ್ಯಾರ್ಥಿಗಳಲ್ಲಿ ಸಾಧನೆಯ ಕಿಚ್ಚಿದೆ. ಹೊಸತದತ್ತ ತೆರೆದುಕೊಳ್ಳುವ ಹಂಬಲವಿದೆ. ಆದರೆ ಪ್ರೊತ್ಸಾಹಕರ ಕೊರತೆಯಿಂದಾಗಿ ಪ್ರತಿಭೆಗಳು ಸೊರಗುತ್ತಿದ್ದಾರೆ ಎಂದು ಹೇಳಿದ ಅವರು ವಿದ್ಯಾರ್ಥಿಗಳಲ್ಲಿರುವ ಸುಪ್ತ ಪ್ರತಿಭೆಗಳನ್ನು ಅನಾವರಣಗೊಳಿಸಲು ವಿದ್ಯಾರ್ಥಿ ಸಮ್ಮೇಳನ ಸುಂದರ ವೇದಿಕೆಯಾಗಿದೆ ಇಂತಹ ಅವಕಾಶಗಳನ್ನು ವಿದ್ಯಾರ್ಥಿಗಳಿಗೆ ಕಲ್ಪಿಸಿರುವುದಕ್ಕೆ ಡಾ.ಮೋಹನ ಆಳ್ವರಿಗೆ ಕೃತಜ್ಞತೆಗಳು ಎಂದರು.

ಸಮ್ಮೇಳನದ ಸರ್ವಾಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಶ್ರದ್ಧಾ ಎನ್. ಪೈವಳಿಕೆ ಮಾತನಾಡಿ ಸಾಹಿತ್ಯ ಮತ್ತು ನಮ್ಮ ನಾಡಿನ ಕಲೆಗಳು ಅವುಗಳ ನೈಜ್ಯ ಸತ್ವಕ್ಕೆ ಅಭಿಮುಖವಾಗಿ ಮುನ್ನಡೆದರೆ ಇಡೀ ಭಾರತ ಮಾನವೀಯತೆಯ, ಸತ್ಯದ, ಅಹಿಂಸೆಯ ಸದಾಚಾರದ ಗಣಿಯಾದೀತು. ಕನ್ನಡ ಹಿರಿಮೆಗೆ ಶಿರೋಮಣಿಯಾಗಿ ವಿಶ್ವಕ್ಕೆ ಮಾದರಿಯಾಗುತ್ತದೆ.
“ಇಂದಿನ ಮಕ್ಕಳೇ ಮುಂದಿನ ಜನಾಂಗ”, ಮುಂದಿನ ಪೀಳಿಗೆ ಸನ್ಮಾರ್ಗದಲ್ಲಿ ಸಾಗಬೇಕೆಂದಿದ್ದರೆ ವಿದ್ಯಾರ್ಥಿಗಳಿಗೆ ಸಾಹಿತ್ಯ ಕಲೆಯನ್ನು ಬೋಧಿಸಬೇಕು. ಸಾಹಿತ್ಯ, ಕಲೆ, ಸಂಸ್ಕೃತಿಗಳನ್ನು ಬಿಟ್ಟರೆ ನಮಗೆ ಜೀವನವೇ ಇಲ್ಲ ಆದುದರಿಂದ ಹಿರಿಯರು ಇದಕ್ಕೆ ಪ್ರವರ್ಧನಿಸಬೇಕು ಎಂದು ಹೇಳಿದ ಶ್ರದ್ಧಾ ಹುಟ್ಟಿದ ಜೀವಿ ಬಾಳಲೇಬೇಕು. ನಾವು ತರಗತಿಗಳು ಒಡ್ಡುವ ಪರೀಕ್ಷೆಗಳ ಕೊಠಡಿಗಳಿಗೆ ತಪ್ಪಿಸಬಹುದು ಆದರೆ ವಿಧಿಯೊಡ್ಡುವ ಪರೀಕ್ಷೆಯನ್ನು ತಪ್ಪಿಸಲು ಪ್ರತಿಯೊಬ್ಬನೂ ಅಸಮರ್ಥನೇ ಸರಿ. ಆದ್ದರಿಂದ ನಾವು ಎಷ್ಟು ಸಮಯ ಬಾಳಿ ನಮ್ಮ ಕರ್ತವ್ಯವನ್ನು ನಿಭಾಯಿಸಿದ್ದೇವೆ ಎನ್ನುವುದು ಮುಖ್ಯವಾಗುತ್ತದೆ ಎಂದು ಹೇಳಿದರು.

ಸಮ್ಮೇಳನದ ರೂವಾರಿ ಡಾ.ಎಂ.ಮೋಹನ್ ಆಳ್ವ ಮಾತನಾಡಿ, ನುಡಿಸಿರಿ, ವಿರಾಸತ್, ಮಕ್ಕಳಸಿರಿ ಬೂಟಾಟಿಕೆಯ ಸಮ್ಮೇಳನವಾಗದೆ ಮನಸ್ಸು ಕಟ್ಟು, ಸಾಹಿತಿಕ, ಸಾಂಸ್ಕೃತಿಕ ಪ್ರಜ್ಞೆ ಮೂಡಿಸುವಲ್ಲಿ ಯಶಸ್ವಿಯಾಗಿದೆ. ದೇಶಿ ಜೀವನ ಪದ್ಧತಿಯಿಂದ ವಿಮುಖರಾಗುತ್ತಿರುವ ಈ ಸನ್ನಿವೇಶದಲ್ಲಿ ನಮ್ಮ ಮೂಲ ಪರಂಪರೆ, ಸಂಸ್ಕೃತಿ ತೆರೆಗೆ ಸರಿಯುತ್ತಿದೆ. ಅವುಗಳನ್ನು ಜತನದಿಂದ ಕಾಪಾಡುವ ಮುಂದಿನ ಪೀಳಿಗೆ ಅರ್ಥಪೂರ್ಣವಾಗಿ ಹಸ್ತಾಂತರಿಸುವ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ. ವಿದ್ಯಾರ್ಥಿಗಳಲ್ಲಿ ಇಂತಹ ಜಾಗೃತಿ ಮೂಡಿಸಲು ಆಳ್ವಾಸ್ ಸಂಸ್ಥೆಯು ಹಲವಾರು ಯೋಜನೆಗಳನ್ನು ಹಮ್ಮಿಕೊಂಡಿದ್ದು, ಯಶಸ್ವಿಯಾಗಿದೆ. ಯೋಚನೆ, ಯೋಜನೆಯನ್ನು ಮೇಲ್ದರ್ಜೆಗೆ ಕೊಂಡೊಯ್ಯಲು ‘ವಿದ್ಯಾರ್ಥಿಸಿರಿ’ ಸಮ್ಮೇಳನ ಪೂರಕವಾಗಿದೆ. ಕಾಲ ಕಾಲಕ್ಕೆ ಚಿಂತನೆಗಳನ್ನು ಅಂಕುರಿಸದೆ. ಮೇಲ್ದರ್ಜೆಗೆ ಕೊಂಡೊಯ್ಯದೆ ವಿದ್ಯಾರ್ಥಿಗಳನ್ನು ಸಾಹಿತ್ಯದಿಂದ ದೂರ ಮಾಡುತ್ತಿದ್ದೇವೆ ಎಂದು ವಿಷಾಧ ವ್ಯಕ್ತಪಡಿಸಿದರು.

ವಿದ್ಯಾರ್ಥಿ ಪುರಸ್ಕಾರ: ಉಡುಪಿ ವಳಕಾಡು ಸರ್ಕಾರಿ ಪ್ರೌಢಶಾಲೆ ಅಕ್ಷಯ್ ಹೆಗಡೆ, ಮೂಡುಬಿದರೆ ರೋಟರಿ ಆಂಗ್ಲ ಮಾಧ್ಯಮ ಶಾಲೆಯಬ ಅಯಣ.ವಿ.ರಮಣ್, ಆಳ್ವಾಸ್ ಕನ್ನಡ ಮಾಧ್ಯಮ ಶಾಲೆಯ ಗೀತಾಲಕ್ಷ್ಮೀ.ಕೆ ಅವರಿಗೆ ೨೦೧೪ನೇ ಸಾಲಿನ ಆಳ್ವಾಸ್ ವಿದ್ಯಾರ್ಥಿ ಪುರಸ್ಕಾರ ನೀಡಿ ಸನ್ಮಾನಿಸಲಾಯಿತು.

ಮಕ್ಕಳ ಸಾಹಿತಿ ಡಾ.ಎಚ್.ಎಸ್.ವೆಂಕಟೇಶ್ ಮೂರ್ತಿ,ಡಾ. ಚಿನ್ನಪ್ಪ ಗೌಡ, ಮೂಡುಬಿದಿರೆ ಕ್ಷೇತ್ರಾ ಶಿಕ್ಷಣಾಧಿಕಾರಿ ಗೋವಿಂದ ಮಡಿವಾಳ,ಉಪಸ್ಥಿತರಿದ್ದರು.
ಪುತ್ತೂರು ವಿವೇಕಾನಂದ ಪ.ಪೂ ಕಾಲೇಜಿನ ಉಷಾ.ಎ.ಸ್ವಾಗತಿಸಿದರು. ಉಜಿರೆ ಎಸ್‌ಡಿ‌ಎಂ ಆಂಗ್ಲ ಮಾಧ್ಯಮ ಶಾಲೆಯ ರಶ್ಮಿ ಪಲ್ಲವಿ, ಆಳ್ವಾಸ್ ಕನ್ನಡ ಮಾಧ್ಯಮ ಶಾಲೆಯ ಸುಶ್ಮಿತಾ.ಕೆ. ವಂದಿಸಿದರು.

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com