ರೈಲ್ವೆ ಪ್ರಯಾಣ: ಮಕ್ಕಳ ಮಾಹಿತಿ ದಾಖಲು ಕಡ್ಡಾಯ

ಉಡುಪಿ: 5ರಿಂದ 12 ವರ್ಷದೊಳಗಿನ ಮಕ್ಕಳಿಗೆ ರೈಲ್ವೆ ಪ್ರಯಾಣ ಸಂದರ್ಭ ಅರ್ಧ ಟಿಕೆಟ್ ಕಡ್ಡಾಯ. ತಪ್ಪಿದಲ್ಲಿ ವಯಸ್ಕರೋರ್ವರ ಅರ್ಧ ಟಿಕೆಟ್‌ನಷ್ಟು ಮತ್ತು 250ರಿಂದ 3,500 ರೂ. ತನಕ ದಂಡ ವಿಧಿಸುವ ಅವಕಾಶ ರೈಲ್ವೆ ಟಿಟಿಇ ಗಿದೆ ಎಂದು ಉಡುಪಿ ರೈಲ್ವೆ ಯಾತ್ರಿಕ ಸಂಘ ತಿಳಿಸಿದೆ. 
    ಅ.3ರಂದು ರಾಜಧಾನಿ ರೈಲಿನಲ್ಲಿ ದಿಲ್ಲಿಗೆ ಪ್ರಯಾಣಿಸಿದ್ದ ದಂಪತಿಯೊಂದು ಐದು ವರ್ಷದ ಮಗನಿಗೆ ಟಿಕೆಟ್ ಮಾಡದ ಹಿನ್ನೆಲೆಯಲ್ಲಿ ದಂಡ ವಿಧಿಸಿದ್ದಾಗಿ ಸಂಘಕ್ಕೆ ದೂರಿದ್ದಾರೆ. ಕೆಲ ವರ್ಷಗಳ ಹಿಂದೆ ಉತ್ತರ ಭಾರತದಲ್ಲಿ ಎರಡು ರೈಲುಗಳು ಮುಖಾಮುಖಿ ಡಿಕ್ಕಿಯಾಗಿ ನೂರಾರು ಜನ ಸತ್ತ ಸಂದರ್ಭ ಮಕ್ಕಳು ಅನಾಥವಾಗಿದ್ದವು. ಮೃತರ ಗುರುತು ಅವರ ಕಿಸೆ, ಪರ್ಸ್‌ಗಳಲ್ಲಿದ್ದ ಟಿಕೆಟ್ ಸಹಿತ ದಾಖಲೆಗಳಿಂದ ಪತ್ತೆ ಹಚ್ಚಿದ್ದರೆ, ಮಕ್ಕಳ ಗುರುತು ಹಾಗೂ ಅವರು ಯಾರ ಮಕ್ಕಳೆನ್ನುವುದು ಪತ್ತೆ ಮಾಡುವುದು ಸಾಧ್ಯವಾಗಿಲ್ಲ. ಇದರಿಂದ ಎಚ್ಚೆತ್ತ ರೈಲ್ವೆ ಇಲಾಖೆಯು ಪ್ರಯಾಣಿಕರು ಟಿಕೆಟ್ ಬುಕ್ ಮಾಡುವಾಗ ತಮ್ಮಲ್ಲಿರುವ ಎಳೆಗೂಸಿನಿಂದ ಹಿಡಿದು 4 ವರ್ಷದವರೆಗಿನ ಎಲ್ಲಾ ಮಕ್ಕಳ ಹೆಸರು, ಲಿಂಗ, ಪ್ರಾಯವನ್ನು ಟಿಕೆಟ್ ಬುಕ್ಕಿಂಗ್ ಸಂದರ್ಭ ದಾಖಲಿಸಿಕೊಳ್ಳುವ ನಿಯಮ ಕಡ್ಡಾಯ ಮಾಡಿದೆ. ಮಕ್ಕಳ ವಿವರವನ್ನು ಬುಕ್ಕಿಂಗ್ ಫಾರಂನಲ್ಲಿ ಬರೆವ ಸಂದರ್ಭ ಅವರಿಗೆ ಟಿಕೆಟ್ ಬೇಕೋ, ಬೇಡವೋ ಅಥವಾ ಅರ್ಧ ಟಿಕೆಟ್ ಬೇಕೇ ಎಂಬುದನ್ನು ಕ್ಲರ್ಕ್ ಸ್ಪಷ್ಟಪಡಿಸಲಿದ್ದಾರೆ. ಅಪಘಾತ ಗಾಯಾಳು, ಸತ್ತ ವ್ಯಕ್ತಿಗಳ ಪತ್ತೆ ಸುಲಭವಾಗಲಿದೆ ಎಂದು ಸಂಘದ ಅಧ್ಯಕ್ಷ ಆರ್. ಎಲ್. ಡಾಯಸ್ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com