ಸರಕಾರಿ ಆಸ್ಪತ್ರೆಗಳಲ್ಲಿ ವೈದ್ಯರ ನೆಮಕಾತಿಗೆ ಚಿಂತನೆ: ಸಚಿವ ಖಾದರ್

ಶಿರೂರು ಗ್ರೀನ್ ವ್ಯಾಲಿ ಸ್ಕೂಲಿಗೆ ಭೇಟಿ ನೀಡಿ ವಿದ್ಯಾರ್ಥಿ ಕೈಪಿಡಿ ಬಿಡುಗಡೆ ಮಾಡಿದ ಬಳಿಕ ಸುದ್ದಿಗೋಷ್ಠಿ

ಶಿರೂರು: ವೈದ್ಯರ ನೇಮಕಾತಿ ಬಗ್ಗೆ ಚಿಂತನೆ ನಡೆಸಿದ್ದು, 983 ತಜ್ಞ ವೈದ್ಯರನ್ನು, 321 ಎಂಬಿಬಿಎಸ್ ವೈದ್ಯರನ್ನು ಹಾಗೂ 2 ಸಾವಿರದ ಐದು ನೂರು ಇತರ ಸಿಬ್ಬಂದಿಗಳನ್ನು ಕೆಪಿಎಸ್‌ಸಿ ಮೂಲಕ ತಿಂಗಳೊಳಗೆ ಭರ್ತಿ ಮಾಡಲಾಗುವುದು. ಇದರಿಂದಾಗಿ ಸರಕಾರಿ ಆಸ್ಪತ್ರೆಯಲ್ಲಿನ ಬಹುತೇಕ ಸಮಸ್ಯೆ ಬಗೆಹರಿಯಲಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ. ಖಾದರ್ ಹೇಳಿದರು. 

ರಾಜ್ಯದಲ್ಲಿ ಕಳೆದ 10 ವರ್ಷದಿಂದ ಸರಕಾರಿ ಆಸ್ಪತ್ರೆಗಳಲ್ಲಿ ಕೇವಲ ಬೆಡ್‌ಗಳ ಸಂಖ್ಯೆಯನ್ನು ಹೆಚ್ಚಿಸಲಾಗಿದೆಯೇ ಹೊರತು ವೈದ್ಯರ ನೇಮಕ ಮಾಡಿಲ್ಲ. ಇದರಿಂದಾಗಿ ಸಹಜವಾಗಿ ವೈದ್ಯರ ಕೊರತೆ ಉಂಟಾಗಿದೆ. ನಮ್ಮ ಸರಕಾರ ಅಧಿಕಾರಕ್ಕೆ ಬಂದ ಆರಂಭದಲ್ಲಿಯೇ ವೈದ್ಯರ ನೇಮಕಾತಿ ಬಗ್ಗೆ ಚಿಂತನೆ ನಡೆಸಿದ್ದೇವೆ. ಆದರೆ ಹೈದರಾಬಾದ್ ಕರ್ನಾಟಕದ ಮೀಸಲಾತಿ ಗೊಂದಲದಿಂದಾಗಿ ಅದು ಸಾಧ್ಯವಾಗಿಲ್ಲ ಎಂದು ತಿಳಿಸಿದರು.

ಶಿರೂರು ಗ್ರೀನ್ ವ್ಯಾಲಿ ಸ್ಕೂಲಿಗೆ ಭೇಟಿ ನೀಡಿ ವಿದ್ಯಾರ್ಥಿ ಕೈಪಿಡಿ ಬಿಡುಗಡೆ ಮಾಡಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ಶಿರೂರು ಪ್ರಾಥಮಿಕ ಆರೋಗ್ಯ ಕೇಂದ್ರದ ಕಟ್ಟಡವನ್ನು ಶಿರೂರಿನ ಗ್ರೀನ್ ವ್ಯಾಲಿ ಟ್ರಸ್ಟ್ ಸುಮಾರು 2.5 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ ಮಾಡಲು ಮುಂದೆ ಬಂದಿರುವುದು ಶ್ಲಾಘನೀಯ ಎಂದ ಅವರು, ರಾಜ್ಯಸಭೆ ಸದಸ್ಯ ಆಸ್ಕರ್ ಫನಾಂಡಿಸ್ ಹಾಗೂ ಶಾಸಕರ ಸಹಕಾರದಿಂದ ಈ ಆರೋಗ್ಯ ಕೇಂದ್ರಕ್ಕೆ ಅಗತ್ಯ ಸೌಲಭ್ಯ ಒದಗಿಸುವ ಮೂಲಕ ಇದನ್ನು ಮಾದರಿ ಪ್ರಾಥಮಿಕ ಆರೋಗ್ಯ ಕೇಂದ್ರವಾಗಿ ರೂಪಿಸಲಾಗುವುದು ಎಂದರು. 

ರಾಜ್ಯದಲ್ಲಿ ಪ್ರಸ್ತುತ ಪ್ರತಿ 25 ನಿಮಿಷಕ್ಕೆ ತಲುಪುವಂತೆ 108 ಅಂಬುಲೆನ್ಸ್ ಕಾರ್ಯನಿರ್ವಹಿಸುತ್ತಿದ್ದು, ಮುಂದಿನ ದಿನಗಳಲ್ಲಿ ಯಾವುದೇ ಅವಘಡಗಳು ಸಂಭವಿಸಿದರೂ ಪ್ರತಿ 15 ನಿಮಿಷಕ್ಕೆ ಅಂಬ್ಯುಲನ್ಸ್ ತಲುಪುಬೇಕು ಎಂಬ ನಿಟ್ಟಿನಲ್ಲಿ ಸರಕಾರ ಹೆಚ್ಚುವರಿ 198 ಅಂಬುಲೆನ್ಸ್ ನೀಡಲು ಚಿಂತನೆ ನಡೆಸಿದೆ. ಅದಕ್ಕೆ ಮುಖ್ಯಮಂತ್ರಿಯವರು ತಿಂಗಳೊಳಗೆ ಚಾಲನೆ ನೀಡಲಿದ್ದಾರೆ. ಇದರಿಂದಾಗಿ ಉಡುಪಿ ಜಿಲ್ಲೆಗೂ 4 ಹೆಚ್ಚುವರಿ ಆ್ಯಂಬುಲೆನ್ಸ್ ಸೌಲಭ್ಯ ದೊರಕಲಿದೆ ಎಂದರು. 

    ಇಂದಿನ ಜನರ ಜೀವನ ಶೈಲಿಯಿಂದಾಗಿ ರೋಗ ಬರುತ್ತಿದೆ. ಕೆಲಸದ ಒತ್ತಡದಿಂದ ಬಿಪಿ, ಸಕ್ಕರೆ ಕಾಯಿಲೆ ಮೊದಲಾದವುಗಳ ಬಗ್ಗೆ ಪರೀಕ್ಷೆ ಮಾಡಿಸಿಕೊಳ್ಳಲು ಬಿಡುವಿಲ್ಲ. ಇಂತಹ ಕಾಯಿಲೆಗಳಿಗೆ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿಯೇ ಚಿಕಿತ್ಸೆ ಲಭಿಸಬೇಕು ಎಂಬ ನೆಲೆಯಲ್ಲಿ ಸರಕಾರ ಪ್ರಾಥಮಿಕ, ತಾಲೂಕು ಹಾಗೂ ಜಿಲ್ಲಾ ಆಸ್ಪತ್ರೆಗಳನ್ನು ಸಂಪೂರ್ಣ ಕಂಪ್ಯೂಟರೀಕರಣಗೊಳಿಸುವ ಚಿಂತನೆ ನಡೆಸಿದೆ. ಆ ಮೂಲಕ ಅಲ್ಲಿಗೆ ಬರುವ ಪ್ರತಿ ರೋಗಿಗೆ ಚಿಕಿತ್ಸೆ ನೀಡಿದ ಬಳಿಕ ಅವರಿಗೆ ಇರುವ ರೋಗದ ಬಗ್ಗೆ (ಬಿಪಿ, ಶುಗರ್) ಸಂಪೂರ್ಣ ಮಾಹಿತಿಯನ್ನು ವಿಶೇಷ ಸಾಪ್ಟ್‌ವೇರ್ ಮೂಲಕ ಕಂಪ್ಯೂಟರ್‌ನಲ್ಲಿ ಶೇಖರಿಸಿ (ಉಳಿಸಿ)ಡಲಾಗುವುದು. ಇದರಿಂದಾಗಿ ಅದೇ ರೋಗಿ ಇನ್ನೊಮ್ಮೆ ಚಿಕಿತ್ಸೆ ಬಂದಾಗ ಅವರಿಗೆ ಬಂದಂತಹ ರೋಗಗಳ ಬಗ್ಗೆ ಸುಲಭವಾಗಿ ಚಿಕಿತ್ಸೆ ನೀಡಲು ಸಹಕಾರಿಯಾಗಲಿದೆ ಎಂದರು. 

       ಈ ಹಿಂದೆ ಜಿಲ್ಲಾ ಹಾಗೂ ತಾಲೂಕು ಆಸ್ಪತ್ರೆಗಳಿಗೆ ಒಂದು ಲಕ್ಷ ರೂ. ಮಿತಿಯೊಳಗೆ ಔಷಧ ನೀಡಲಾಗುತ್ತಿತ್ತು. ಇದರಿಂದಾಗಿ ಬಹುತೇಕ ಆಸ್ಪತ್ರೆಗಳಲ್ಲಿ ಔಷಧಗಳ ಕೊರತೆ ಉಂಟಾಗಿ ಅಲ್ಲಿನ ವೈದ್ಯರು ಹೊರಗಿನ ಔಷಧಾಲಯಕ್ಕೆ ಚೀಟಿ ಬರೆದುಕೊಡುತ್ತಿದ್ದರು. ಇದಕ್ಕೆ ಕಡಿವಾಣ ಹಾಕಲು ಸರಕಾರ ಪ್ರತಿಯೊಂದು ಜಿಲ್ಲಾ ಹಾಗೂ ತಾಲೂಕು ಆಸ್ಪತ್ರೆಗಳಲ್ಲಿ ಜನರಲ್ ಮೆಡಿಶನ್ ಹಾಗೂ 24*7 ಫಾರ್ಮಸಿ ಸೌಲಭ್ಯ ಒದಗಿಸುವ ಚಿಂತನೆ ನಡೆಸಿದ್ದು, ಅದಕ್ಕೆ ಮುಖ್ಯಮಂತ್ರಿಗಳು ಡಿಸೆಂಬರ್‌ನಲ್ಲಿ ಚಾಲನೆ ನೀಡಿದ್ದಾರೆ. ಈ ಬಗ್ಗೆ ಸರಕಾರ ಎಚ್‌ಎಎಲ್ ಸಂಸ್ಥೆಯೊಂದಿಗೆ ಒಡಂಬಂಡಿಕೆ ಮಾಡಿಕೊಂಡಿದ್ದು, ಎಲ್ಲ ಜಿಲ್ಲಾ ಹಾಗೂ ತಾಲೂಕು ಆಸ್ಪತ್ರೆಗಳಲ್ಲಿ ಅತ್ಯಂತ ಕಡಿಮೆ ದರದಲ್ಲಿ ಅಂದರೆ ಎಂಆರ್‌ಪಿಗಿಂತಲೂ ಶೇ. 20ರಷ್ಟು ಕಡಿಮೆ ದರದಲ್ಲಿ ಅಗತ್ಯಕ್ಕೆ ತಕ್ಕಂತೆ ಯಥೇಚ್ಚ ಔಷಧ ಒದಗಿಸುವ ಚಿಂತನೆ ನಡೆಸಿದೆ ಎಂದರು. 

      ರಾಜ್ಯದಲ್ಲಿ ಎನ್‌ಆರ್‌ಎಚ್‌ಎಂ ಯೋಜನೆಯಡಿ ಸೇವೆ ಸಲ್ಲಿಸುತ್ತಿದ್ದ ಆಯುಷ್ ಗುತ್ತಿಗೆ ವೈದ್ಯರ ವೇತನ ಹೆಚ್ಚಿಸುವಂತೆ ಈಗಾಗಲೇ ಕೇಂದ್ರ ಸಚಿವರೊಂದಿಗೆ ಚರ್ಚಿಸಿದ್ದು, ಶೀಘ್ರ ಅವರ ಸಮಸ್ಯೆ ಈಡೇರಿಸಲು ಪ್ರಮಾಣಿಕ ಪ್ರಯತ್ನ ಮಾಡಲಾಗುವುದು ಎಂದರು. 

   ಗ್ರಾಮೀಣ ಭಾಗದ ಜನರಿಗೆ ಅನುಕೂಲವಾಗುವಂತೆ ಎಲ್ಲ್ಲ ಆಸ್ಪತ್ರೆಗಳಲ್ಲೂ ಯಶಸ್ವಿನಿ ಸೌಲಭ್ಯ ಸಿಗುವಂತಾಗಬೇಕು ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಈ ಬಗ್ಗೆ ಸಹಕಾರ ಸಚಿವರೊಂದಿಗೆ ಚರ್ಚಿಸಲಾಗುವುದು ಎಂದರು. 

   ಪ್ರತಿಪಕ್ಷಗಳು ಸೂಕ್ತ ಸಲಹೆಗಳನ್ನು ನೀಡಿ ನಾವು ಅದನ್ನು ಸ್ವೀಕರಿಸುತ್ತೇವೆ. ಆದರೆ ವಿನಾ ಕಾರಣ ಇಲಾಖೆಯ ಮೇಲೆ ಗೂಬೆ ಕೂರಿಸುವುದು ಸರಿಯಲ್ಲ. ಇದರಿಂದ ಇಲಾಖೆಯ ಆತ್ಮಸ್ಥೈರ್ಯ ಕುಂದುತ್ತದೆ ಎಂದು ಪ್ರತಿಪಕ್ಷಗಳ ನಡೆಯನ್ನು ಟೀಕಿಸಿದರು. ಸ್ಕೂಲ್ ಟ್ರಸ್ಟಿ ಸೈಯದ್ ಅಬ್ದುಲ್ ಖಾದರ್, ಜಿಲ್ಲಾ ವೈದ್ಯಾಧಿಕಾರಿ ರಾಮಚಂದ್ರ ಬಾಯರಿ, ಪ್ರಿನ್ಸಿಪಾಲ್ ಜಾನ್ ಮ್ಯಾಥ್ಯೂ, ಗ್ರಾಪಂ ಅಧ್ಯಕ್ಷ ರಾಮ ಮೇಸ್ತ ಉಪಸ್ಥಿತರಿದ್ದರು
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com