ಅನ್ಯರಾಜ್ಯ ಬೋಟುಗಳ ವಿರುದ್ಧ ಗಂಗೊಳ್ಳಿ ಮೀನುಗಾರರ ಆಕ್ರೋಶ

ಕುಂದಾಪುರ: ಕಳೆದ ಹಲವು ದಿನಗಳಿಂದ ತಮಿಳುನಾಡು ಮೂಲದ ಮೀನುಗಾರರು ಗಂಗೊಳ್ಳಿಯಲ್ಲಿ ಕಪ್ಪೆ ಬೊಂಡಾಸ್ ಮೀನುಗಾರಿಕೆ ನಡೆಸುತ್ತಿರುವುದಕ್ಕೆ ಸ್ಥಳೀಯ ಮೀನುಗಾರರ ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ಕಪ್ಪೆ ಬೊಂಡಾಸ್‌ ಮೀನುಗಾರಿಕೆ ನಡೆಸದಂತೆ ಈ ಹಿಂದೆ ಮೀನುಗಾರರಿಂದ ಮಂಗಳೂರು ಹಾಗೂ ಮಲ್ಪೆ ಬಂದರಿನಲ್ಲಿ ವ್ಯಾಪಕ ಪ್ರತಿಭಟನೆ ವ್ಯಕ್ತವಾದ ಹಿನ್ನೆಲೆಯಲ್ಲಿ ದ.ಕ. ಹಾಗೂ ಉಡುಪಿ ಜಿಲ್ಲೆಯಲ್ಲಿ ಕ‌ಪ್ಪೆಬೊಂಡಾಸ್‌ ಮೀನುಗಾರಿಕೆ ಸ್ಥಗಿತಗೊಂಡಿತ್ತು. ಇದೀಗ ತಮಿಳುನಾಡು ಮೂಲದ ಮೀನುಗಾರರು ಅನ್ಯ ರಾಜ್ಯದ ನೋಂದಣಿಯ ದೋಣಿಗಳ ಮೂಲಕ ಗಂಗೊಳ್ಳಿ ಬಂದರಿನ ಮೂಲಕ ಕಪ್ಪೆಬೊಂಡಾಸ್‌ ಹಾಗೂ ಶಾರ್ಕ್‌ ಮೀನುಗಾರಿಕೆ ನಡೆಸುತ್ತಿದ್ದಾರೆ ಎಂದು ಸ್ಥಳೀಯ ಮೀನುಗಾರರು ಆರೋಪಿಸಿದ್ದಾರೆ.

ಅನ್ಯ ರಾಜ್ಯದ ಬೋಟುಗಳ ಮೂಲಕ ಇಲ್ಲಿ ಮೀನುಗಾರಿಕೆ ನಡೆಸಬಾರದು ಎಂಬ ಸ್ಪಷ್ಟ ಆದೇಶ ಇದ್ದರೂ ಸಹ ಅದನ್ನು ಉಲ್ಲಂಗಿಸುತ್ತಿರುವವರ ವಿರುದ್ಧ ಮೀನುಗಾರಿಕೆ ಇಲಾಖೆ, ಜಿಲ್ಲಾಡಳಿತ ಹಾಗೂ ಕರಾವಳಿ ಕಾವಲುಪಡೆಯ ಪೊಲೀಸರು ಯಾಕೆ ಕ್ರಮಕ್ಕೆ ಮುಂದಾಗುತ್ತಿಲ್ಲ ಎನ್ನುವುದು ಮೀನುಗಾರರ ಪ್ರಶ್ನೆ.

ಕೇವಲ ಕೂಗಳತೆಯಲ್ಲಿ ಕರಾವಳಿ ಕಾವಲು ಪಡೆಯ ಠಾಣೆ ಇದ್ದರೂ ಯಾವುದೇ ಕ್ರಮಕ್ಕೆ ಮುಂದಾಗುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಯಾವುದೇ ಟ್ರಾಲ್‌ ಬಲೆಯನ್ನು ಉಪಯೋಗಿಸದೇ ಗುಜರಿ ಬಲೆಗಳನ್ನು ಬಳಸಿ ಸಾಂಪ್ರದಾಯಕವಲ್ಲದ ರೀತಿಯಲ್ಲಿ ಅನ್ಯ ರಾಜ್ಯದ ಬೋಟುಗಳು ಗಂಗೊಳ್ಳಿಗೆ ಬಂದು ಮೀನುಗಾರಿಕೆ ನಡೆಸುವುದರಿಂದ ಸ್ಥಳೀಯ ಮೀನುಗಳಿಗೆ ಮಾರುಕಟ್ಟೆಯಲ್ಲಿ ಬೆಲೆ ಕುಸಿತವಾಗುತ್ತಿದೆ. ಪ್ರಾರಂಭದಲ್ಲಿ ಬೆರಳೆಣಿಕೆ ಬೋಟುಗಳಿಂದ ಈ ಮೀನುಗಾರಿಕೆ ನಡೆಯುತ್ತಿದ್ದರೂ ದಿನ ಕಳೆದಂತೆ ಕಪ್ಪೆಬೊಂಡಾಸ್‌ ಮೀನುಗಾರಿಕೆ ನಡೆಸುವ ಬೋಟುಗಳ ಸಂಖ್ಯೆ ಹೆಚ್ಚಾಗುತ್ತಿದೆ. ಈ ನಿಟ್ಟಿನಲ್ಲಿ ಮೊದಲೇ ಜಾಗದ ಅಭಾವವಿದ್ದ ಗಂಗೊಳ್ಳಿ ಬಂದರಿನಲ್ಲಿ ಸ್ಥಳಾಭಾವ ತೋರುವ ಸಾಧ್ಯತೆ ಇದೆ.

ಕಪ್ಪೆ ಬೊಂಡಾಸ್‌ ಹಾಗೂ ಶಾರ್ಕ್‌ ಮೀನುಗಾರಿಕೆ ನಡೆಸುತ್ತಿರುವ ಅನ್ಯ ರಾಜ್ಯದ ಮೀನುಗಾರರು ಸಾಕಷ್ಟು ಮಂಜುಗಡ್ಡೆಯನ್ನು ಖರೀದಿಸುತ್ತಿರುವುದರಿಂದ ಮಂಜುಗಡ್ಡೆಯ ಅಭಾವ ತಲೆದೋರಿದೆ. ಇದರಿಂದಾಗಿ ಮುಂದಿನ ದಿನಗಳಲ್ಲಿ ಸ್ಥಳೀಯ ಸಾಂಪ್ರದಾಯಿಕ ಮೀನುಗಾರಿಕೆಗೆ ಬಲವಾದ ಹೊಡೆತ ಬೀಳುವ ಸಾಧ್ಯತೆ ಇದೆ ಎಂಬುದು ಸ್ಥಳೀಯ ಮೀನುಗಾರರ ಆತಂಕವಾಗಿದೆ.

ಗಂಗೊಳ್ಳಿಯಲ್ಲಿ ಕಪ್ಪೆಬೊಂಡಾಸ್‌ ಮೀನುಗಾರಿಕೆಯನ್ನು ಸಂಪೂರ್ಣವಾಗಿ ನಿಷೇಧಿಸಬೇಕು. ಅನ್ಯ ರಾಜ್ಯದ ಬೋಟುಗಳಲ್ಲಿ ಗಂಗೊಳ್ಳಿ ಬಂದರಿನ ಮೂಲಕ ಮೀನುಗಾರಿಕೆ ನಡೆಸುವುದನ್ನು ನಿಷೇಧಿಸಬೇಕೆಂದು ಆಗ್ರಹಿಸಿರುವ ಸ್ಥಳೀಯ ಮೀನುಗಾರರು ಅಧಿಕಾರಿಗಳು ಕ್ರಮ ಕೈಗೊಳ್ಳದಿದ್ದರೆ ಪ್ರತಿಭಟನೆ ನಡೆಸುತ್ತೇವೆ ಎಂದು ಎಚ್ಚರಿಸಿದ್ದಾರೆ.

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com