ಆಳ್ವಾಸ್ ನುಡಿಸಿರಿಗೆ ಭರದ ತಯಾರಿ

   ಮೂಡುಬಿದಿರೆಯ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ವರ್ಷಂಪ್ರತಿ ಹಮ್ಮಿಕೊಂಡು ಬರುತ್ತಿರುವ ಆಳ್ವಾಸ್ ನುಡಿಸಿರಿ ನಾಡು-ನುಡಿಯ ರಾಷ್ಟ್ರೀಯ ಸಮ್ಮೇಳನವು ಸುಂದರಿ ಆನಂದ ಆಳ್ವ ಆವರಣದ ರತ್ನಾಕರವರ್ಣಿ ವೇದಿಕೆ, ಡಾ.ಯು.ಆರ್.ಅನಂತಮೂರ್ತಿ ಸಭಾಂಗಣದಲ್ಲಿ ನವೆಂಬರ್ 14, 15 ಮತ್ತು 16ನೇ ದಿನಾಂಕಗಳಂದು ಸಾಹಿತ್ಯ- ಸಾಂಸ್ಕಂತಿಕ ಕಾರ್ಯಕ್ರಮಗಳೊಂದಿಗೆ ವಿಜೃಂಭಣೆಯಿಂದ ನಡೆಯಲಿದೆ.
    ಕಾದಂಬರಿಕಾರ, ಮಕ್ಕಳ ಸಾಹಿತಿ, ಡಾ.ನಾ.ಡಿಸೋಜರವರು ನವೆಂಬರ್ 14 ರಂದು ಬೆಳಗ್ಗೆ ಆಳ್ವಾಸ್ ನುಡಿಸಿರಿ ಸಮ್ಮೇಳನಕ್ಕೆ ದೀಪ ಪ್ರಜ್ವಲನೆಯ ಮೂಲಕ ಚಾಲನೆಯನ್ನು ನೀಡಲಿದ್ದಾರೆ. ಮೂರು ದಿನಗಳ ಕಾಲ ನಡೆಯುವ ಈ ಸಮ್ಮೇಳನದ ಸರ್ವಾಧ್ಯಕ್ಷತೆಯನ್ನು ಖ್ಯಾತ ಕವಿ, ಸಾಹಿತಿ ನಾಡೋಜ ಡಾ.ಸಿದ್ಧಲಿಂಗಯ್ಯನವರು ವಹಿಸಿಕೊಳ್ಳಲಿದ್ದಾರೆ.

11 ಮಂದಿ ಸಾಧಕರಿಗೆ ಆಳ್ವಾಸ್ ನುಡಿಸಿರಿ ಪ್ರಶಸ್ತಿ
ಆಳ್ವಾಸ್ ನುಡಿಸಿರಿ ಪ್ರಶಸ್ತಿಗೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ 11 ಮಂದಿ ಖ್ಯಾತನಾಮರ ಹೆಸರುಗಳನ್ನು ಪ್ರಕಟಿಸಲಾಗಿದೆ. ಅನನ್ಯ ಸಂಶೋಧಕ, ಭಾಷಾ ವಿಜ್ಞಾನಿ ಡಾ. ಸಂಗಮೇಶ ಸವದತ್ತಿಮಠ, ಸಾಹಿತಿ, ಸಂಶೋಧಕ ಪ್ರೊ. ವಸಂತ ಕುಷ್ಠಗಿ, ಖ್ಯಾತ ಕವಿ, ಅಂಕಣಕಾರ ಪ್ರೊ. ಎಚ್.ಎಸ್. ಶಿವಪ್ರಕಾಶ್, ಸಂಶೋಧಕ ಪ್ರೊ óಷ. ಶೆಟ್ಟರ್, ಕವಯಿತ್ರಿ ಡಾ. ಮಾಲತಿ ಪಟ್ಟಣಶೆಟ್ಟಿ, ನಟ, ನಿರ್ದೇಶಕ ಶ್ರೀ ಟಿ.ಎಸ್.ನಾಗಾಭರಣ, ಸಂಘಟಕ ಪ್ರೊ. ಹೆರಂಜೆ ಕೃಷ್ಣಭಟ್ಟ, ಜಾನಪದ ವಿದ್ವಾಂಸ, ಖ್ಯಾತ ಗಾಯಕ ಬಾನಂದೂರು ಕೆಂಪಯ್ಯ, ಯಕ್ಷಗಾನ ಸವ್ಯಸಾಚಿ ಶ್ರೀ ಮಂಟಪ ಪ್ರಭಾಕರ ಉಪಾಧ್ಯ, ನೃತ್ಯ ವಿದುಷಿ ಡಾ. ವಸುಂಧರಾ ದೊರೆಸ್ವಾಮಿ, ಪ್ರಖ್ಯಾತ ರಥ ಶಿಲ್ಪಿ ಶ್ರೀ ಅಶ್ವತ್ಥಪುರ ಬಾಬುರಾಯ ಆಚಾರ್ಯರನ್ನು ಆಳ್ವಾಸ್ ನುಡಿಸಿರಿ 2014ರ ಗೌರವಕ್ಕಾಗಿ ಆಯ್ಕೆ ಮಾಡಲಾಗಿದೆ.

ನಾಲ್ಕು ಪ್ರಧಾನ ಗೋಷ್ಠಿಗಳು
ನಾಡು – ನುಡಿಯ ಈ ರಾಷ್ಟ್ರೀಯ ಸಮ್ಮೇಳನದಲ್ಲಿ ಮುಖ್ಯ ಪರಿಕಲ್ಪನೆಯಾಗಿ ‘ ಕರ್ನಾಟಕ : ವರ್ತಮಾನದ ತಲ್ಲಣಗಳು’ ಎಂಬ ವಿಷಯವನ್ನು ಆರಿಸಲಾಗಿದೆ. ಈ ವಿಚಾರವಾಗಿ ನಾಲ್ಕು ಪ್ರಧಾನ ಗೋಷ್ಟಿಗಳಿದ್ದು ಶಿವಾನಂದ ಕಳವೆ, ನಾಗೇಶ ಹೆಗಡೆ, ಡಾ.ಮೋಹನ ಚಂದ್ರಗುತ್ತಿ, ಡಾ.ಗುರುರಾಜ ಕರ್ಜಗಿ, ಎ.ಈಶ್ವರಯ್ಯ ಮಣಿಪಾಲ, ಡಾ.ಕೆ.ಆರ್.ಸಂಧ್ಯಾ ರೆಡ್ಡಿ, ಪ್ರತಿಭಾ ನಂದಕುಮಾರ್, ಡಾ.ಸಿ.ಎನ್.ರಾಮಚಂದ್ರನ್‍ರವರು ಪ್ರಬಂಧ ಮಂಡಿಸಲಿದ್ದಾರೆ.
ಮಹತ್ವದ ವಿಶೇಷೋಪನ್ಯಾಸಗಳು : ಈ ವರ್ಷದ ಆಳ್ವಾಸ್ ನುಡಿಸಿರಿಯಲ್ಲಿ ಹೆಚ್ಚು ವಿಚಾರಗಳು ಚರ್ಚಿತವಾಗಬೇಕೆಂಬ ದೃಷ್ಟಿಯಿಂದ ಎಂಟು ವಿಶೇಷೋಪನ್ಯಾಸಗಳನ್ನು ಹಮ್ಮಿಕೊಳ್ಳಲಾಗಿದೆ. ಪ್ರೇಕ್ಷಕರ ಆಸಕ್ತಿ ಹೆಚ್ಚುವಂತೆ ಮೂರು ದಿನಗಳ ಕಾಲವೂ ಈ ವಿಶೇಷೋಪನ್ಯಾಸಗಳನ್ನು ಹದವರಿತು ಬೆರೆಸಿಕೊಳ್ಳಲಾಗಿದೆ. ಡಾ.ಡಿ.ಎಸ್.ಚೌಗಲೆ, ಮನೋಹರ ಪ್ರಸಾದ್, ಡಾ.ಪುಂಡಿಕಾೈ ಗಣಪಯ್ಯ ಭಟ್, ಡಾ.ನಟರಾಜ ಹುಳಿಯಾರ್, ಡಾ.ನಿರಂಜನ ವಾನಳ್ಳಿ ಮೈಸೂರು, ವೈ.ಎಸ್.ವಿ.ದತ್ತ, ಪ್ರೊ.ಶಶಿಕಲ ಗುರುಪುರ, ವೀಣಾ ಬನ್ನಂಜೆಯವರು ತಮ್ಮ ವಿಚಾರಧಾರೆಗಳನ್ನು ಹರಿಸಲಿದ್ದಾರೆ .

ಶತಮಾನದ ನಮನ :
ಶತಮಾನದ ಸಂಭ್ರಮವನ್ನು ಹಂಚಿಕೊಳ್ಳುವ, ಗೌರವಿಸುವ ಶತಮಾನದ ನಮನ ಕಾರ್ಯಕ್ರಮದಲ್ಲಿ ಕನ್ನಡದ ಖ್ಯಾತ ಜಾನಪದ ತಜ್ಞರಾಗಿದ್ದ ನಾಡೋಜ ಡಾ.ಎಚ್.ಎಲ್.ನಾಗೇಗೌಡರಿಗೆ ನುಡಿನಮನವನ್ನು ಡಾ.ಚೆಕ್ಕೆರೆ ಶಿವಶಂಕರ ಸಲ್ಲಿಸಲಿದ್ದಾರೆ. ಶತಾಯುಷಿ ಗಡಿನಾಡ ಕಿಡಿ ನಾಡೋಜ ಡಾ. ಕಯ್ಯಾರ ಕಿಂಞಣ್ಣ ರೈಯವರಿಗೆ ಡಾ.ಸದಾನಂದ ಪೆರ್ಲರವರು ನುಡಿನಮನ ಸಲ್ಲಿಸಲಿದ್ದಾರೆ.

ಹಿರಿಯರ ಸಂಸ್ಮರಣೆ:
ನಮ್ಮನ್ನಗಲಿದ ಹಿರಿಯ ಸಾಹಿತಿಗಳನ್ನು ನೆನಪಿಸುವ ಅವರ ಸಾಧನೆಗಳನ್ನು ತಿಳಿಸುವ ಸಂಸ್ಮರಣ ಕಾರ್ಯಕ್ರಮದಲ್ಲಿ ಸಮನ್ವಯದ ಕವಿಯೆಂದೇ ಪ್ರಸಿದ್ಧರಾದ ರಾಷ್ಟ್ರಕವಿ ನಾಡೋಜ ಡಾ.ಜಿ.ಎಸ್.ಶಿವರುದ್ರಪ್ಪನವರ ಸಾಹಿತ್ಯದ ವಿಚಾರವಾಗಿ ಡಾ.ಟಿ.ಪಿ.ಅಶೋಕರು ಮಾತನಾಡುತ್ತಾರೆ. ಪ್ರೀತಿಯ ಮೇಷ್ಟ್ರು ಖ್ಯಾತಿಯ ಜ್ಞಾನಪೀಠ ಪುರಸ್ಕøತ ಡಾ.ಯು.ಆರ್.ಅನಂತಮೂರ್ತಿಯವರ ಸಾಧನೆಗಳನ್ನು ಎನ್.ಮನು ಚಕ್ರವರ್ತಿಯವರು ಪರಿಚಯಿಸಲಿದ್ದಾರೆ.

ಕವಿಸಮಯ – ಕವಿನಮನದಲ್ಲಿ ಕವಿಗಳು:
ಆಳ್ವಾಸ್ ನುಡಿಸಿರಿಯ ವಿಶೇಷ ಕೊಡುಗೆ ಕವಿಸಮಯ ಕವಿನಮನದಲ್ಲಿ ಕನ್ನಡದ ಖ್ಯಾತ ಕವಿಗಳು ಕವನ ವಾಚನದ ಮೂಲಕ ತಮ್ಮ ಅನುಭವಗಳನ್ನು ಹಂಚಿಕೊಳ್ಳಲಿದ್ದಾರೆ. ಅವರ ಕವನಗಳನ್ನು ಎಂ.ಎಸ್.ಗಿರಿಧರ್ ತಂಡ ಸಂಗೀತಕ್ಕೆ ಅಳವಡಿಸಿ ಹಾಡಿನ ಹೊಳೆ ಹರಿಸಲಿದೆ. ಈ ಸಲದ ಕವಿಸಮಯ – ಕವಿನಮನದಲ್ಲಿ ಸುಬ್ಬು ಹೊಲೆಯಾರ್, ರಘುನಾಥ ಚ.ಹ, ಡಾ.ವಿಕ್ರಮ ವಿಸಾಜಿ, ಎಚ್.ಗೋವಿಂದಯ್ಯ, ಬಿ.ಆರ್. ಲಕ್ಷ್ಮಣ ರಾವ್, ರವಿಶಂಕರ ಶೆಟ್ಟಿ ಒಡ್ಡಂಬೆಟ್ಟು, ಪ್ರೊ.ಎಚ್.ಎಸ್.ಶಿವಪ್ರಕಾಶ್ ಮತ್ತು ರಜಿಯಾ ಡಿ.ಬಿ.ಯವರು ಪಾಲ್ಗೊಳ್ಳಲಿದ್ದಾರೆ.
ಸಮ್ಮೇಳನಾಧ್ಯಕ್ಷ ನಾಡೋಜ ಡಾ.ಸಿದ್ಧಲಿಂಗಯ್ಯನವರ ಹಾಡುಗಳ ಗಾಯನ ಕಾರ್ಯಕ್ರಮವನ್ನು ವಿಶೇಷವಾಗಿ ಹಮ್ಮಿಕೊಳ್ಳಲಾಗಿದೆ. ಮೈಸೂರಿನ ಜೆನ್ನಿ (ಜನಾರ್ಧನ) ಮತ್ತು ರಮೇಶ್ಚಂದ್ರರವರು ಗಾಯನ ಕಾರ್ಯಕ್ರಮವನ್ನು ನಡೆಸಿಕೊಡಲಿದ್ದಾರೆ.

ಭಾಷಾ ಸಾಮರಸ್ಯಕ್ಕೆ ಕೀಲಿಕೈ ತುಳುಸಿರಿ-ಕೊಂಕಣ ಸಿರಿ-ಬ್ಯಾರಿ ಸಿರಿ
ಪ್ರಧಾನ ಭಾಷೆ ಕನ್ನಡದ ಜೊತೆಗೆ ಪ್ರಾದೇಶಿಕ ಭಾಷೆಗಳಾದ ತುಳು-ಕೊಂಕಣಿ-ಬ್ಯಾರಿ ಭಾಷೆಗಳ ಕೊಡು-ಕೊಳೆ ಅನನ್ಯವಾದುದು. ಈ ಅನನ್ಯತೆಯನ್ನು ಉಳಿಸಿಕೊಂಡೇ ಭಾಷಾ ಸಾಮರಸ್ಯ ಮುಂದುವರಿಯಬೇಕೆಂಬುದು ಆಳ್ವಾಸ್ ನುಡಿಸಿರಿಯ ಉದ್ದೇಶ. ಪ್ರಾದೇಶಿಕ ಭಾಷೆಗಳು ಹಾಗೂ ಪ್ರಧಾನ ಭಾಷೆಗಳೊಂದಿಗೆ ಸಾಮರಸ್ಯ ಏರ್ಪಟ್ಟಾಗ ಸಮಾಜದಲ್ಲಿ ಶಾಂತಿ – ಸುವ್ಯವಸ್ಥೆಗಳು ತನ್ನಿಂದ ತಾನೇ ಏರ್ಪಡುತ್ತದೆ. ಅದಕ್ಕಾಗಿ ಭಾಷಿಕ- ಸಾಂಸ್ಕøತಿಕ ನೆಲೆಯನ್ನು ಪರಸ್ಪರ ಅರಿತುಕೊಳ್ಳುವ ಉದ್ದೇಶದಿಂದ ಈ ವರ್ಷ ಸಮಾನಾಂತರ ವೇದಿಕೆಯಲ್ಲಿ ದಿನವೊಂದರಂತೆ ತುಳು-ಕೊಂಕಣಿ-ಬ್ಯಾರಿ ಭಾಷೆಗಳ ಸಮ್ಮೇಳನವನ್ನು ಏರ್ಪಡಿಸಲಾಗಿದೆ. ಮುಸ್ಸಂಜೆ 5.30ಕ್ಕೆ ಪ್ರಾರಂಭವಾಗುವ ಸಮ್ಮೇಳನದಲ್ಲಿ ಒಂದು ಗಂಟೆಯ ಸಭಾ ಕಾರ್ಯಕ್ರಮವಿದ್ದು ಆಯಾಭಾಷೆಗಳಿಗೆ ದುಡಿದ ಮಹನೀಯರನ್ನು ಸನ್ಮಾನಿಸುವ ಹಾಗೂ ಉಪನ್ಯಾಸದ ಕಾರ್ಯಕ್ರಮಗಳಿರುತ್ತವೆ. ಸಮಯ 6.30ರಿಂದ 10.00ಗಂಟೆಯವರೆಗೆ ಆಯಾ ಸಂಸ್ಕøತಿಯನ್ನು ಪರಿಚಯಿಸುವ ಸಾಂಸ್ಕøತಿಕ ಕಾರ್ಯಕ್ರಮಗಳು ನಡೆಯಲಿವೆ.

ಶಿಕ್ಷಕರಿಗೆ ಒ.ಒ.ಡಿ. ಸೌಲಭ್ಯ:
ಆಳ್ವಾಸ್ ನುಡಿಸಿರಿ ಸಮ್ಮೇಳನದಲ್ಲಿ ಭಾಗವಹಿಸುವ ಪ್ರಾಥಮಿಕ, ಪ್ರೌಢ ಪದವಿಪೂರ್ವ ಹಾಗೂ ಪದವಿ ಕಾಲೇಜುಗಳ ಪ್ರಾಧ್ಯಾಪಕರುಗಳಿಗೆ ಅನ್ಯಕಾರ್ಯ ನಿಮಿತ್ತ(ಒ.ಒ.ಡಿ.) ರಜಾ ಸೌಲಭ್ಯವನ್ನು ಒದಗಿಸಲಾಗುತ್ತದೆ.

ಪುಸ್ತಕ ಮಳಿಗೆಗಳು:
ಸುಮಾರು ಇನ್ನೂರಕ್ಕೂ ಅಧಿಕ ಕನ್ನಡ ಪುಸ್ತಕಗಳ ಮಾರಾಟ ಮಳಿಗೆಗಳು, ತಿಂಡಿ ತಿನಿಸುಗಳ ಹಾಗೂ ಇನ್ನಿತರ ಮಳಿಗೆಗಳಿಗೆ ಈ ಸಮ್ಮೇಳನದಲ್ಲಿ ಅವಕಾಶ ಕಲ್ಪಿಸಿ ಕೊಡಲಾಗಿದೆ. 150ಕ್ಕಿಂತ ಹೆಚ್ಚು ಪುಸ್ತಕ ಮಳಿಗೆಗಳು ಈಗಾಗಲೇ ನೋಂದಾವಣೆಗೊಂಡಿದೆ. ಒಂದು ಮಳಿಗೆಗೆ ಕೇವಲ 500 ರೂಪಾಯಿ ಶುಲ್ಕವನ್ನು ನಿಗದಿಪಡಿಸಲಾಗಿದೆ.
ವಿದ್ಯಾರ್ಥಿಗಳಿಗೆ ಉಚಿತ ವಸತಿ, ಊಟ ಉಪಚಾರಗಳ ಸೌಲಭ್ಯ
ಸಮ್ಮೇಳನದಲ್ಲಿ ಭಾಗವಹಿಸುವ ವಿದ್ಯಾರ್ಥಿಗಳಿಗೆ ಸಂಪೂರ್ಣ ಉಚಿತವಾಗಿ ವಸತಿ ಮತ್ತು ಊಟೋಪಚಾರದ ವ್ಯವಸ್ಥೆ ಕಲ್ಪಿಸಲಾಗಿದೆ.

500ಕ್ಕೂ ಹೆಚ್ಚು ವಿಶೇಷ ಆಹ್ವಾನಿತರು:
ರಾಜ್ಯದಾದ್ಯಂತ ಸಾಹಿತ್ಯ ಸಾಂಸ್ಕೃತಿಕ ಚಟುವಟಿಕೆಗಿಂದ ಹೆಸರುವಾಸಿಯಾದ ಸಾಹಿತಿಗಳು, ವಿದ್ವಾಂಸರು ಆಳ್ವಾಸ್ ನುಡಿಸಿರಿಯಲ್ಲಿ ವಿಶೇಷ ಆಹ್ವಾನಿತರಾಗಿ 3 ದಿನಗಳ ಕಾಲ ಇದ್ದು ಸಮ್ಮೇಳನಕ್ಕೆ ವಿಶೇಷ ಗೌರವವನ್ನು ತಂದುಕೊಡಲಿದ್ದಾರೆ. ರಾಜ್ಯದಾದ್ಯಂತ 85 ಆಳ್ವಾಸ್ ನುಡಿಸಿರಿ ಘಟಕಗಳು ಕಾರ್ಯೋನ್ಮುಖವಾಗಿದ್ದು ಘಟಕಗಳ ಪದಾಧಿಕಾರಿಗಳು ಹೆಚ್ಚಿನ ಸಂಖ್ಯೆಯಲ್ಲಿ ಈ ಸಮ್ಮೇಳನದಲ್ಲಿ ಪಾಲ್ಗೊಳ್ಳುವ ನಿರೀಕ್ಷೆಯಿದೆ.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com