ಮಾನಸಿಕ ಅಸ್ವಸ್ಥನ ರಕ್ಷಣೆ

ಗಂಗೊಳ್ಳಿ: ಕೆಲ ದಿನಗಳಿಂದ ಗುಜ್ಜಾಡಿ ಸಮೀಪದ ಹೊಸಾಡು ಅರಣ್ಯ ಪ್ರದೇಶದಲ್ಲಿ ತಿರುಗಾಡುತ್ತಿದ್ದ ಮಾನಸಿಕ ಅಸ್ವಸ್ಥ ಯುವಕನಿಗೆ ಗಂಗೊಳ್ಳಿ ಇಗರ್ಜಿಯ ಧರ್ಮಗುರು ರೆ.ಫಾ.ಅಲ್ಪೋನ್ಸ್ ಡಿಲೀಮಾ ಅವರ ನೇತತ್ವದಲ್ಲಿ ರಕ್ಷಣೆ ನೀಡಲಾಗಿದೆ. 

ತನ್ನಷ್ಟಕ್ಕೆ ಅರಣ್ಯದಂಚಿನಲ್ಲಿ ಅತ್ಯಂತ ದಯನೀಯ ಸ್ಥಿತಿಯಲ್ಲಿದ್ದ ಅಸ್ವಸ್ಥ ಯುವಕ ಧರ್ಮಗುರುಗಳ ಕಣ್ಣಿಗೆ ಬಿದ್ದಿದ್ದು ತಕ್ಷಣ ಅವರು ಗಂಗೊಳ್ಳಿಯ ಹೆಲ್ಪ್‌ಲೈನ್ ಸಂಸ್ಥೆಯನ್ನು ಸಂಪರ್ಕಿಸಿದರು. ಹೆಲ್ಪ್‌ಲೈನ್ ಸಂಸ್ಥೆಯ ಸದಸ್ಯರು ತಕ್ಷಣ ಸ್ಥಳಕ್ಕಾಗಮಿಸಿ ಧರ್ಮಗುರುಗಳೊಂದಿಗೆ ಮಾನಸಿಕ ಅಸ್ವಸ್ಥ ನೆಲೆಗೊಂಡಿದ್ದ ತಾಣಕ್ಕೆ ತೆರಳಿದರು. ಅನ್ನ ಆಹಾರವಿಲ್ಲದೆ ಕಂಗೆಟ್ಟಿದ್ದ ಅಸ್ವಸ್ಥ ಯುವಕನಿಗೆ ಚೈತನ್ಯ ಒದಗಿಸಿದರು. ಹಿಂದಿಯಲ್ಲಿ ಅಸ್ಪಷ್ಟ ಮಾತನಾಡುವ ಈತ ತರಗೆಲೆ, ತ್ಯಾಜ್ಯ ತಿನ್ನುತ್ತಿದ್ದ. ಧರ್ಮಗುರು ಅಲ್ಪೋನ್ಸ್ ಡಿಲೀಮಾ ಮಂಗಳೂರಿನ ಸ್ನೇಹಾಲಯ ಮುಖ್ಯಸ್ಥರನ್ನು ಸಂಪರ್ಕಿಸಿ ಆಶ್ರಯ ನೀಡುವಂತೆ ಮನವಿ ಮಾಡಿಕೊಂಡರು. 

ಸ್ನೇಹಾಲಯದ ಮುಖ್ಯಸ್ಥ ಬ್ರದರ್ ಜೋಸೆಫ್ ಕ್ರಾಸ್ತಾ ಶುಕ್ರವಾರ ಹೊಸಾಡುವಿಗೆ ಭೇಟಿ ನೀಡಿ ಅಸ್ವಸ್ಥ ಯುವಕನಿಗೆ ಆರೈಕೆ ಮಾಡಿ ಆತನೊಂದಿಗೆ ಮಂಗಳೂರಿಗೆ ಪಯಣ ಬೆಳೆಸಿದರು. ಈ ಸಂದರ್ಭ ಒಲಿವಿಯಾ ಕ್ರಾಸ್ತಾ, ಪ್ರವೀಣ್ ಕಲ್‌ಬಾವೊ, ಸುಪ್ರೀತಾ ಕ್ರಾಸ್ತಾ, ಹೆಲ್ಪ್‌ಲೈನ್ ಸಂಸ್ಥೆಯ ಮಹಮದ್ ಇಬ್ರಾಹಿಂ, ವಿಲ್ಸನ್ ರೆಬೆರೊ, ಅಹ್ತಶಾಂ ಎಂ.ಎಚ್., ಜಾಹೀದ್, ಮುಜಾಹಿದ್ ಮೌಲನಾ, ಇಮ್ತಿಯಾಜ್, ನೌಫಾಲ್, ಅಬ್ರಾರ್ ಇದ್ದರು.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com