ಅನುದಾನ ಅನುಷ್ಠಾನ ವೈಫಲ್ಯ: ಪ್ರತಿಭಟನೆ

ಗಂಗೊಳ್ಳಿ: ಪರಿಶಿಷ್ಟ ಜಾತಿ ಪಂಗಡಗಳಿಗೆ ಸರಕಾರದಿಂದ ನೀಡಲಾಗುತ್ತಿರುವ ವಿಶೇಷ ಅನುದಾನದ ಅನುಷ್ಠಾನಗೊಳಿಸದೆ ದಲಿತ ಕುಟುಂಬಗಳಿಗೆ ಅನ್ಯಾಯವೆಸಗಲಾಗಿದೆ ಎಂದು ಆರೋಪಿಸಿ ಇಲ್ಲಿನ ದಲಿತ ಕುಟುಂಬಗಳು ಬುಧವಾರ ಗಂಗೊಳ್ಳಿ ಗ್ರಾಮ ಪಂಚಾಯಿತಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದರು. 

ಪ್ರತಿಭಟನೆಯ ನೇತತ್ವ ವಹಿಸಿದ್ದ ಗ್ರಾಮ ಪಂಚಾಯಿತಿ ಸದಸ್ಯ ಸಂತೋಷ್ ಮಾತನಾಡಿ ಕಳೆದ 1 ದಶಕದಿಂದ ಗಂಗೊಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ದಲಿತರನ್ನು ನಿರ್ಲಕ್ಷಿಸಲಾಗಿದೆ. ಶೇ.25ರ ನಿಧಿಯನ್ನು ಅನುಷ್ಠಾನಗೊಳಿಸದೆ ಅನ್ಯಾಯವೆಸಗಲಾಗಿದೆ. ಅನುಸೂಚಿತ ಜಾತಿ ಮತ್ತು ಪಂಗಡಗಳಿಗೆ ಹರಿದು ಬರುವ ಅನುದಾನ ಕಲ್ಯಾಣ ನಿಧಿಯನ್ನು ಇತರ ಉದ್ದೇಶಗಳಿಗೆ ಬಳಕೆ ಮಾಡಿಕೊಳ್ಳಲಾಗಿದೆ. ಗ್ರಾಮಸಭೆಯಲ್ಲಿ ಪ್ರಸ್ತಾಪಿಸಲಾಗಿದ್ದರೂ ಸ್ಪಂದನೆ ಇಲ್ಲ. ನೀಡಿರುವ ಮನವಿಗಳಿಗೆ ಕ್ಯಾರೇ ಅನ್ನುವುದಿಲ್ಲ. ಕರ್ನಾಟಕ ಪಂಚಾಯಿತಿರಾಜ್ ಅಧಿನಿಯಮವನ್ನು ಸ್ಪಷ್ಟವಾಗಿ ಪಂಚಾಯಿತಿ ಉಲ್ಲಂಘಿಸಿದೆ. ದಲಿತರಿಗೆ ಶಾಸನಾತ್ಮಕ ಸೌಲಭ್ಯ ನಿರಾಕರಿಸುವ ಮೂಲಕ ಪಂಚಾಯಿತಿ ಆಡಳಿತ ದೌರ್ಜನ್ಯ ಎಸಗಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು. 

ಪಂಚಾಯಿತಿ ಸದಸ್ಯೆ ನಾಗಿಣಿ ಮಾತನಾಡಿ ಇದು ಆರಂಭಿಕ ಹೋರಾಟ ಮಾತ್ರ. ದಲಿತ ಕುಟುಂಬಗಳಿಗೆ ನ್ಯಾಯಸಮ್ಮತವಾಗಿ ಸಿಗಬೇಕಾದ ಸವಲತ್ತು ಒದಗಿಸಬೇಕು. ಇಲ್ಲವಾದಲ್ಲಿ ತೀವ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು. ದಲಿತರಿಗೆ ಮೀಸಲಾಗಿರುವ ವಿಶೇಷ ನಿಧಿ ದುರುಪಯೋಗಪಡಿಸಿಕೊಂಡಿರುವ ಬಗ್ಗೆ ಜಿ.ಪಂ.ಕಾರ್ಯನಿರ್ವಹಣಾಧಿಕಾರಿ ಮಧ್ಯ ಪ್ರವೇಶಿಸಿ ದಲಿತರಿಗೆ ಆಗಿರುವ ಅನ್ಯಾಯ ಸರಿಪಡಿಸಬೇಕು. ಪಂಚಾಯಿತಿ ಅಧಿಕಾರಿ ವರ್ಗ ಭಷ್ಟಾಚಾರದಲ್ಲಿ ಮುಳುಗಿದ್ದು ಈಗಾಗಲೆ ಸಮಾಜ ಕಲ್ಯಾಣ ಇಲಾಖೆಗೆ ದೂರು ನೀಡಲಾಗಿದೆ ಎಂದರು. ಪ್ರತಿಭಟನೆಯಲ್ಲಿ ಗಂಗೊಳ್ಳಿಯ 200ಕ್ಕೂ ಮಿಕ್ಕಿ ದಲಿತ ಕುಟುಂಬಗಳು, ದಲಿತ ಮುಖಂಡರು ಪಾಲ್ಗೊಂಡಿದ್ದರು.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com