ಕಂಬಳವನ್ನು ಜನಪದ ಕ್ರೀಡೆಯಾಗಿ ಉಳಿಸಲು ಆಗ್ರಹ

ಬೈಂದೂರು: ಪ್ರಾಣಿ ಹಿಂಸೆಗೆ ಪ್ರೋತ್ಸಾಹ ನೀಡಿದಂತಾಗುತ್ತದೆ ಎಂಬ ವಾದವನ್ನೇ ಮುಂದಿಟ್ಟುಕೊಂಡು ಪಾರಂಪರಿಕ ಜನಪದ ಕ್ರೀಡೆಯಾದ ಕಂಬಳವನ್ನು ನಿಷೇದಿಸುವುದು ಸಮಂಜಸವಲ್ಲ. ಕಂಬಳದಲ್ಲಿ ಪ್ರಾಣಿ ಹಿಂಸೆಯಾಗುತ್ತಿದೆ ಎಂದಾದರೆ ಅಂತಹ ಅಂಶ ನಿವಾರಿಸಿ ಮಾರ್ಪಾಡುಗಳೊಂದಿಗೆ ಕಂಬಳ ಕಲೆ ಉಳಿಸಿಕೊಳ್ಳುವ ನಿಟ್ಟಿನಲ್ಲಿ ನ್ಯಾಯಾಲಯ ತೀರ್ಪಿನ ಪುನರ್‌ಪರಿಶೀಲನೆಗೆ, ಚಿಂತನೆಗೆ ಸೂಕ್ತ ಅವಕಾಶ ಕಲ್ಪಿಸಬೇಕು ಎಂದು ನಾಗೂರಿನಲ್ಲಿ ಗುರುವಾರ ಜರಗಿದ ಕಂಬಳಾಸಕ್ತರ ಬಹಿರಂಗ ಸಭೆಯಲ್ಲಿ ಪಾಲ್ಗೊಂಡ ಕಂಬಳದ ಮನೆಯವರು, ಕೋಣಗಳ ಮಾಲಕರು, ಹಗ್ಗ ಮತ್ತು ಹಲಗೆ ಸವಾರರು ಹಾಗೂ ಸಾರ್ವಜನಿಕರ ಒಕ್ಕೊರಲ ಅಭಿಪ್ರಾಯ ವ್ಯಕ್ತಪಡಿಸಿದರು.

ನಾಗೂರಿನಲ್ಲಿ ನಡೆದ ಕಂಬಳಾಸಕ್ತರ ಬಹಿರಂಗ ಸಭೆಯ ಅಧ್ಯಕ್ಷತೆ ವಹಿಸಿದ್ದ ಶಾಂತಾರಾಮ ಶೆಟ್ಟಿ ಮಾತನಾಡಿ, ಅವಿಭಜಿತ ದಕ್ಷಿಣಕನ್ನಡ ಜಿಲ್ಲೆಯ ಜನಪದ ಆಚರಣೆಗಳಲ್ಲಿ ಒಂದಾದ ಕಂಬಳ ಕೇವಲ ಕೋಣಗಳ ಓಟದ ಸ್ಪರ್ಧೆಯಷ್ಟೇ ಆಗಿರದೇ ಧಾರ್ಮಿಕ, ಕೃಷಿಪರ ಮತ್ತು ಫಲವಂತಿಕೆಯ ಜೀವಾಳವಾಗಿದೆ. 4ನೇ ಶತಮಾನದಲ್ಲಿ ಅಳುಪ ರಾಣಿ ಬಲ್ಲಮಹಾದೇವಿಗೆ ಸಂಬಂದಿಸಿದ ಶಾಸನದಲ್ಲಿ ಕಂಬಳದ ಕುರಿತು ಉಲ್ಲೇಖವಿದೆ. ಇದು ಕಂಬಳದ ಪ್ರಾಚೀನತೆ ಮತ್ತು ಐತಿಹಾಸಿಕ ಪರಂಪರೆಗೆ ಸಾಕ್ಷಿ ಎಂದರು.

ಮಹೋನ್ನತ ಕ್ರೀಡೆ

ಹಲವು ದೇಶಗಳಲ್ಲಿ ನಾನಾ ಪ್ರಾಣಿಗಳ ಓಟ ಸ್ಪರ್ಧೆ ನಡೆಯುತ್ತದಾದರೂ ಕಂಬಳದಂತಹ ಮಹೋನ್ನತ ಕ್ರೀಡೆ ಬೇರೊಂದಿಲ್ಲ. ತನ್ನದೇ ಆದ ವೈಶಿಷ್ಟé, ಧಾರ್ಮಿಕ ಹಿನ್ನೆಲೆ, ಕೃಷಿಪರ ಚಟುವಟಿಕೆ ಹಾಗೂ ಗ್ರಾಮೀಣ ಜೀವನ ಸಂಸ್ಕೃತಿಯೊಂದಿಗೆ ಅವಿನಾಭಾವ ಸಂಬಂಧ ಹೊಂದಿರುವ ಕಂಬಳವನ್ನು ನಿಷೇಧಿಸಿದಲ್ಲಿ ಒಂದು ಸಂಸ್ಕೃತಿಯೇ ನಾಶವಾಗುವ ಸಾಧ್ಯತೆ ಇದೆ. ಆದ್ದರಿಂದ ಕಂಬಳ ನಿಷೇಧಕ್ಕೆ ಮುನ್ನ ಸಾರ್ವಜನಿಕ ಅಭಿಪ್ರಾಯಗಳಿಗೆ ಸೂಕ್ತ ಮನ್ನಣೆ ಸಿಗಬೇಕು ಎಂದು ಆಗ್ರಹಿಸಿದರು.

ಮುಖ್ಯ ಅತಿಥಿ ಪ್ರಗತಿಪರ ಕೃಷಿಕ, ತಾಲೂಕು ಪಂಚಾಯತ್‌ ಮಾಜಿ ಸದಸ್ಯ ಎಸ್‌. ಪ್ರಕಾಶ್ಚಂದ್ರ ಶೆಟ್ಟಿ, ಜಿ.ಪಂ. ಸದಸ್ಯ ಕೆ. ಬಾಬು ಶೆಟ್ಟಿ, ಜಿಲ್ಲಾ ರೈತ ಮೋರ್ಚಾದ ದೀಪಕ್‌ಕುಮಾರ್‌ ಶೆಟ್ಟಿ, ವೆಂಕ್ಟ ಪೂಜಾರಿ ಸಸಿಹಿತ್ಲು, ನೋಟರಿ ವಕೀಲ ಟಿ.ಬಿ. ಶೆಟ್ಟಿ, ಶೇಖರ್‌ ಪೂಜಾರಿ ಗುಡಾಡಿ ಮೊದಲಾದವರು ಉಪಸ್ಥಿತರಿದ್ದು, ಅನಿಸಿಕೆ ಹಂಚಿಕೊಂಡರು.

ಕಂಬಳ ನಿಷೇಧದ ಕುರಿತು ನವೆಂಬರ್‌ 29ರಂದು ಮಂಗಳೂರಿನಲ್ಲಿ ನಡೆಯುವ ಬೃಹತ್‌ ಪ್ರತಿಭಟನೆಯಲ್ಲಿ ಬೈಂದೂರು ವಲಯದಿಂದ 500ಕ್ಕೂ ಹೆಚ್ಚು ಕಂಬಳಾಸಕ್ತರು ಪಾಲ್ಗೊಳ್ಳುವ ಬಗ್ಗೆ ಈ ಸಂದರ್ಭ ಸಭೆ ನಿರ್ಣಯ ಕೈಗೊಂಡಿತು.

ಕಾರ್ಯಕ್ರಮ ಆಯೋಜಕ ಮಂಜು ಪೂಜಾರಿ ಸಸಿಹಿತ್ಲು ಸ್ವಾಗತಿಸಿದರು. ಕಿಶೋರ್‌ಕುಮಾರ್‌ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಗಣೇಶ್‌ ಕೊಠಾರಿ ಮತ್ತು ಸುರೇಶ್‌ ಕಾಡಿನತಾರ್‌ ಕಾರ್ಯಕ್ರಮ ನಿರ್ವಹಿಸಿದರು. ಜನಾರ್ದನ ನಾಯ್ಕನಕಟ್ಟೆ ವಂದಿಸಿದರು.

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com