ಉದ್ಯೋಗ ಖಾತ್ರಿ ಯೋಜನೆ ಉಳಿಸಲು ಆಗ್ರಹಿಸಿ ಸಿಪಿಎಂ ಪ್ರತಿಭಟನೆ

ಕುಂದಾಪುರ: ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ ಉಳಿಸಿ ಆಗ್ರಹಿಸಿ ಬುಧವಾರ ಇಲ್ಲಿನ ತಾಲೂಕು ಪಂಚಾಯಿತಿ ಎದುರು ಸಿಪಿಎಂ ಕುಂದಾಪುರ ತಾಲೂಕು ಸಮಿತಿ ಕಾರ‌್ಯಕರ್ತರು ಪ್ರತಿಭಟನೆ ನಡೆಸಿದರು.

ಪ್ರತಿಭಟನಾ ಸಭೆಯನ್ನುದ್ದೇಶಿಸಿ ಮಾತನಾಡಿದ ಸಿಪಿಎಂ ರಾಜ್ಯ ಮುಖಂಡ ಕೆ. ಶಂಕರ್ ಅವರು, ಮೋದಿ ನೇತೃತ್ವದ ಬಿಜೆಪಿ ಸರಕಾರ ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ ಅಳಿಸಿ ಹಾಕಲು ಹೊರಟಿದೆ. ಯೋಜನೆಯ ಅನುಷ್ಠಾನಕ್ಕಾಗಿ ಅನುದಾನವನ್ನು ಗಣನೀಯವಾಗಿ ಕಡಿತಗೊಳಿಸುವ ಮೂಲಕ ಯೋಜನೆಯ ಫಲಾನುಭವಿಗಳಿಗೆ ಅನ್ಯಾಯವೆಸಗಿದೆ ಎಂದರು.

ನರೇಗ ಯೋಜನೆಯನ್ನು ಅತಿ ಹಿಂದುಳಿದ ಕೇವಲ 2500 ಬ್ಲಾಕ್‌ಗಳಿಗೆ ಮಾತ್ರ ಸೀಮಿತಗೊಳಿಸಲು ಉದ್ದೇಶಿಸಲಾಗಿದೆ. ಕೆಲಸಗಾರರ ವೇತನ ಕಡಿಮೆಗೊಳಿಸಿ ಸಾಮಗ್ರಿಗಳ ಮೊತ್ತ ಏರಿಕೆಗೆ ಹುನ್ನಾರ ನಡೆಸಿದೆ. ತನ್ಮೂಲಕ ಯಂತ್ರ ಬಳಕೆಗೆ ಆಸ್ಪದ ಮಾಡಿಕೊಟ್ಟಿದೆ ಎಂದು ಅವರು ಹೇಳಿದರು. ಯೋಜನೆಯನ್ನು ಯಾವುದೇ ಕಾರಣಕ್ಕೂ ಮೊಟಕುಗೊಳಿಸಕೂಡದು. ಸಿಪಿಎಂ ಇದರ ವಿರುದ್ಧ ಈಗಾಗಲೆ ದೇಶವ್ಯಾಪಿ ಹೋರಾಟಕ್ಕಿಳಿದಿದೆ. ಯೋಜನೆಯಡಿ ವರ್ಷದಲ್ಲಿ 200 ದಿನಗಳ ಕಡ್ಡಾಯ ಉದ್ಯೋಗ, ದಿನಕ್ಕೆ 300 ವೇತನ ನೀಡಬೇಕು. ಕೆಲಸ ಕೋರಿ ಬರುವ ಪ್ರತಿಯೊಬ್ಬರಿಗೂ ಉದ್ಯೋಗ ಚೀಟಿ ನೀಡಬೇಕು. ಕೆಲಸ ನೀಡಲು ವಿಫಲವಾದಲ್ಲಿ ನಿರುದ್ಯೋಗ ಪರಿಹಾರ ಒದಗಿಸಬೇಕು. ಎಲ್ಲ ರಾಜ್ಯಗಳಲ್ಲಿಯೂ ಕನಿಷ್ಠ ವೇತನ ಜಾರಿಗೊಳಿಸಬೇಕು. ಉದ್ಯೋಗದ ಹಕ್ಕನ್ನು ನಗರ ಪ್ರದೇಶಗಳಿಗೂ ವಿಸ್ತರಿಸಬೇಕು. ಯೋಜನೆಯ ಅಸಮರ್ಪಕ ಅನುಷ್ಠಾನ ತಡಗೆಟ್ಟಲು, ಭ್ರಷ್ಟಾಚಾರ ತಡೆಯಲು ಗ್ರಾಮಸಭೆಗಳ ಪಾತ್ರ ಬಲಪಡಿಸಬೇಕು ಎಂದು ಅವರು ಆಗ್ರಹಿಸಿದರು.

ಸಿಪಿಎಂ ತಾಲೂಕು ಕಾರ್ಯದರ್ಶಿ ಮಹಾಬಲ ವಡೇರಹೋಬಳಿ, ಮುಖಂಡರಾದ ವೆಂಕಟೇಶ್ ಕೋಣಿ, ಎಚ್.ನರಸಿಂಹ, ರಾಜೀವ ಪಡುಕೋಣೆ, ಸುರೇಶ್ ಕಲ್ಲಾಗರ, ನೂರಾರು ಫಲಾನುಭವಿಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಬಳಿಕ ತಾ.ಪಂ.ಕಾರ್ಯನಿರ್ವಹಣಾಧಿಕಾರಿಯವರ ಮೂಲಕ ರಾಜ್ಯ ಹಾಗೂ ಕೇಂದ್ರ ಸರಕಾರಕ್ಕೆ ಮನವಿ ಸಲ್ಲಿಸಲಾಯಿತು.

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com