ಬಜೆಟ್‌ನಲ್ಲಿ ಬೈಂದೂರು ತಾಲೂಕು ಘೋಷಣೆ: ಗೋಪಾಲ ಪೂಜಾರಿ

ಬೈಂದೂರು: ಮುಂಬರುವ ಬಜೆಟ್‌ನಲ್ಲಿ ಬೈಂದೂರು ತಾಲೂಕು ಘೋಷಣೆ ಮಾಡುವ ಬಗ್ಗೆ ಸರಕಾರ ಚಿಂತನೆ ನಡೆಸಿದೆ. ಈ ಬಗ್ಗೆ ಮುಖ್ಯಮಂತ್ರಿಗಳು ಈಗಾಗಲೇ ಸುಳಿವು ನೀಡಿದ್ದಾರೆ. ಅದರಂತೆ ತಾಲೂಕು ಕೇಂದ್ರದಲ್ಲಿ ಆಗ ಬೇಕಾಗಿರುವ ರೈತ ಸಂಪರ್ಕ ಕೇಂದ್ರ, ನ್ಯಾಯಾಲಯ, ತಾಲೂಕು ಪಂಚಾಯಿತಿ, ಅಗ್ನಿಶಾಮಕ ದಳ ಸೇರಿದಂತೆ ಮತ್ತಿತರರ ಕಚೇರಿ ನಿರ್ಮಾಣಕ್ಕೆ ತಹಸೀಲ್ದಾರರ ನೇತತ್ವದಲ್ಲಿ ಜಾಗವನ್ನು ಕಾಯ್ದಿರಿಸುವ ಕೆಲಸವಾಗುತ್ತಿದೆ ಎಂದು ಶಾಸಕ ಕೆ.ಗೋಪಾಲ ಪೂಜಾರಿ ಹೇಳಿದರು. 

ಇಲ್ಲಿನ ಹೊಸ ಬಸ್ ನಿಲ್ದಾಣದ ಬಳಿ 38 ಲಕ್ಷ ರೂ. ವೆಚ್ಚದ ಬೈಂದೂರು ಹೋಬಳಿ ರೈತ ಸಂಪರ್ಕ ಕೇಂದ್ರದ ನೂತನ ಕಟ್ಟಡ ನಿರ್ಮಾಣದ ಶಿಲಾನ್ಯಾಸ ಹಾಗೂ ರೈತರಿಗೆ ಸಬ್ಸಿಡಿ ದರದಲ್ಲಿ ಯಂತ್ರೋಪಕರಣಗಳನ್ನು ವಿತರಿಸಿ ಅವರು ಮಾತನಾಡಿದರು. 

ರಾಜ್ಯ ಸರಕಾರ ಕೃಷಿಕರಿಗೆ ಹೆಚ್ಚಿನ ಆದ್ಯತೆ ನೀಡುವ ನೆಲೆಯಲ್ಲಿ ನೂತನ ಯೋಜನೆಗಳನ್ನು ರೂಪಿಸುತ್ತಿದೆ. ಆ ಯೋಜನೆಗಳನ್ನು ಯಶಸ್ವಿಗೊಳಿಸುವ ಹೊಣೆ ಅಧಿಕಾರಿವರ್ಗದ ಮೇಲಿದ್ದು, ಅವುಗಳು ಯಶಸ್ವಿಯಾದಾಗ ಮಾತ್ರ ಕಷಿಕರಿಗೆ ಸರ್ಕಾರದ ಮೇಲೆ ವಿಶ್ವಾಸ ಮೂಡಲು ಸಾಧ್ಯವಾಗುತ್ತದೆ ಎಂದರು. 

ಜಿಲ್ಲಾ ಪಂಚಾಯಿತಿ ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿಯ ಅಧ್ಯಕ್ಷ ಅರುಣ ಶೆಟ್ಟಿ ಮಾತನಾಡಿ, ಕೃಷಿಕರಿಗೆ ಮಾರುಕಟ್ಟೆ ಅಭಾವ, ಕೂಲಿ ಕಾರ್ಮಿಕರ ಕೊರತೆ ಹಾಗೂ ಕೃಷಿ ಲಾಭದಾಯಕ ವಾಗಿಲ್ಲದ ಕಾರಣದಿಂದಾಗಿ ಇಂದಿನ ಯುವ ಪೀಳಿಗೆ ಕೃಷಿಯಿಂದ ವಿಮುಖ ವಾಗುತ್ತಿದ್ದಾರೆ. ಇದನ್ನು ತಡೆಯುವ ಹಿನ್ನೆಲೆ ಯಲ್ಲಿ ಸರಕಾರ ನೂತನ ಯೋಜನೆಗಳನ್ನು ರೂಪಿಸಬೇಕಾದ ಅಗತ್ಯವಿದೆ ಎಂದರು. 

ಜಿಪಂ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿಯ ಅಧ್ಯಕ್ಷೆ ಗೌರಿ ದೇವಾಡಿಗ, ತಾ.ಪಂ. ಸದಸ್ಯರಾದ ರಮೇಶ ಗಾಣಿಗ, ರಾಜು ಪೂಜಾರಿ, ಗೌರಿ ದೇವಾಡಿಗ ಬಿಜೂರು, ಯಡ್ತರೆ ಗ್ರಾ.ಪಂ. ಅಧ್ಯಕ್ಷ ನಾಗರಾಜ ಶೆಟ್ಟಿ, ಉಪಾಧ್ಯಕ್ಷೆ ಕಲಾವತಿ, ಬೈಂದೂರು ಗ್ರಾ.ಪಂ. ಅಧ್ಯಕ್ಷ ಜನಾರ್ದನ, ಜಂಟಿ ಕಷಿ ನಿರ್ದೇಶಕ ಅಂಥೋಣಿ ಮರಿಯ ಇಮ್ಯಾನುಯಲ್, ಸಹಾಯಕ ಕೃಷಿ ಅಧಿಕಾರಿ ಕೃಷ್ಣ ಸ್ವಾಮಿ, ಪರಶುರಾಮ, ಗಾಯತ್ರಿ ದೇವಿ ಉಪಸ್ಥಿತರಿದ್ದರು. ಈ ಸಂದರ್ಭ ಕೃಷಿಕರಿಗೆ ಸಬ್ಸಿಡಿ ದರದಲ್ಲಿ 11 ಪವರ್ ಟಿಲ್ಲರ್ ಹಾಗೂ ಕೃಷಿ ಯಂತ್ರೋಪಕರಣಗಳನ್ನು ಶಾಸಕ ಗೋಪಾಲ ಪೂಜಾರಿ ವಿತರಿಸಿದರು.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com