ಸರಕಾರಿ ಆಸ್ಪತ್ರೆ ಸೌಲಭ್ಯ ಹೆಚ್ಚಳಕ್ಕೆ ಕ್ರಮ: ಖಾದರ್

ಶಿರೂರು: ಗ್ರಾಮೀಣ ಭಾಗದಲ್ಲಿ ಶೇ. 70ರಷ್ಟು ಜನರು ಸರ್ಕಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಅಲ್ಲಿ ಸುವ್ಯವಸ್ಥೆ ಹೆಚ್ಚಿಸಲು ಸರ್ಕಾರ ಕ್ರಮ ಕೈಗೊಳ್ಳಲಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ. ಖಾದರ್ ಹೇಳಿದರು. ಶುಕ್ರವಾರ ಶಿರೂರು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ, ಪರಿಶೀಲಿಸಿದ ಬಳಿಕ ಅವರು ಮಾತನಾಡಿದರು. 

ಶಿರೂರು ಪ್ರಾಥಮಿಕ ಆರೋಗ್ಯ ಕೇಂದ್ರದ ಕಟ್ಟಡವನ್ನು ಶಿರೂರಿನ ಗ್ರೀನ್ ವ್ಯಾಲಿ ಟ್ರಸ್ಟ್ 2.5 ಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡಲು ಮುಂದೆ ಬಂದಿರುವುದು ಶ್ಲಾಘನೀಯ. ಇದರಿಂದ ಪ್ರಭಾವಿತರಾಗಿ ಮುಂದಿನ ದಿನಗಳಲ್ಲಿ ರಾಜ್ಯದ ಎಲ್ಲ ಭಾಗಗಳಲ್ಲೂ ಆಸ್ಪತ್ರೆ ನಿರ್ಮಾಣಕ್ಕೆ ದಾನಿಗಳು ಮುಂದೆ ಬರುವ ವಿಶ್ವಾಸವಿದೆ ಎಂದರು. 

ರಾಜ್ಯದಲ್ಲಿ ಆಸ್ಪತ್ರೆಗಳನ್ನು ಹೆಚ್ಚಿಸುವ ಇರಾದೆ ಸರ್ಕಾರದ ಮುಂದಿಲ್ಲ ಎಂದ ಅವರು, ಈಗಾಗಲೇ ಕಾರ್ಯನಿರ್ವಹಿಸುವ ಆಸ್ಪತ್ರೆಗಳಿಗೆ ಅಗತ್ಯ ಸೌಲಭ್ಯ ಕಲ್ಪಿಸಲಾಗುವುದು. ದಾನಿಗಳ ನೆರವಿನಿಂದ ಶಿರೂರಿನಲ್ಲಿ ನೂತನವಾಗಿ ನಿರ್ಮಾಣವಾಗಲಿರುವ ಆರೋಗ್ಯ ಕೇಂದ್ರದಲ್ಲಿ ಎರಡು ಬ್ಲಾಕ್‌ಗಳನ್ನು ನಿರ್ಮಾಣ ಮಾಡಿ, ಒಂದರಲ್ಲಿ ಜನರಲ್ ಮೆಡಿಸಿನ್ ಹಾಗೂ ಇನ್ನೊಂದು ಬ್ಲಾಕ್‌ಗಳಲ್ಲಿ ಸ್ತ್ರೀರೋಗ ಹಾಗೂ ಪ್ರಸೂತಿ ವಿಭಾಗ ಕಾರ್ಯನಿರ್ವಹಿಸಲಿದ್ದು, ಇಲ್ಲಿಗೆ ಮೂವರು ವೈದ್ಯರನ್ನು ನೇಮಕ ಮಾಡಲಾಗುವುದು ಎಂದರು. 

ಶಾಸಕ ಕೆ. ಗೋಪಾಲ ಪೂಜಾರಿ ಮಾತನಾಡಿ, ತಾಲೂಕು ಕೇಂದ್ರದಿಂದ ಸುಮಾರು 40 ಕಿ.ಮೀ. ದೂರದಲ್ಲಿರುವ ಹಾಗೂ ನಕ್ಸಲ್ ಸಕ್ರಿಯ ಪ್ರದೇಶವಾದ ಸಿದ್ದಾಪುರ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು, ಸಮುದಾಯ ಆರೋಗ್ಯ ಕೇಂದ್ರವಾಗಿ ಮೇಲ್ದರ್ಜೆಗೇರಿಸಿ ಎಂದು ಸಚಿವರಿಗೆ ಮನವಿ ಮಾಡಿದರು. 

ಶಿರೂರು ಗ್ರೀನ್‌ವ್ಯಾಲಿ ಸ್ಕೂಲ್‌ನ ಟ್ರಸ್ಟಿ ಸೈಯದ್ ಅಬ್ದುಲ್ ಖಾದರ್ ಮಾತನಾಡಿ, ನಮ್ಮ ಟ್ರಸ್ಟಿನಲ್ಲಿ ಶಿರೂರಿನಲ್ಲಿ ಸುಮಾರು 2.5 ಕೋಟಿ ರೂ. ವೆಚ್ಚದ ಆಸ್ಪತ್ರೆ ನಿರ್ಮಾಣ ಮಾಡಿ ಬಳಿಕ ಅದನ್ನು ಇಲಾಖೆ ಹಸ್ತಾಂತರಿಸಲಾಗುವುದು. ಮುಂದಿನ ದಿನಗಳಲ್ಲಿ ಇಲ್ಲಿ ಕಾರ್ಯನಿರ್ವಹಿಸುತ್ತಿರುವ ವೈದ್ಯರಿಗೆ 15 ಸಾವಿರ ರೂ, ನರ್ಸ್‌ಗಳಿಗೆ 7500 ರೂ ಹೆಚ್ಚುವರಿ ಭತ್ಯೆಯನ್ನು ನಮ್ಮ ಸಂಸ್ಥೆಯಿಂದ ನೀಡುವುದಲ್ಲದೇ ವೈದ್ಯರ 2 ಮಕ್ಕಳಿಗೆ ಹಾಗೂ ನರ್ಸಗಳ ಒಂದು ಮಗುವಿಗೆ ನಮ್ಮ ಸಂಸ್ಥೆಯಿಂದ ಉಚಿತ ಶಿಕ್ಷಣ ನೀಡಲಾಗುವುದು ಎಂದರು.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com