ಕಾಮ ಕ್ರೋಧಗಳೇ ನಮ್ಮ ಪರಮಶತ್ರು: ಶ್ರೀ ಭಾರತೀತೀರ್ಥ ಮಹಾಸ್ವಾಮಿ

ಕುಂದಾಪುರ: ಶ್ರೀರಾಮಚಂದ್ರನ ಚರಿತ್ರೆ ಜಗತ್ತಿಗೇ ಮಾದರಿಯಾದುದು. ಆತನ ಬದುಕಿನ ಪ್ರತಿ ಘಟನೆಯನೂ ಅನಕರಣಿಯ, ಹಾಗಾಗಿಯೇ ಲಕ್ಷಾಂತರ ವರ್ಷಗಳಾದರೂ ಶ್ರೀರಾಮ ಆದರ್ಶ ಪುರುಷನಾಗಿ ಉಳಿದಿದ್ದಾನೆ. ಅಂತೆಯೇ ಆದಿಶಂಕರರು ನಡೆದ ಮಾರ್ಗವೂ ಅನುಕರಣೀಯ ಎಂದು ಶೃಂಗೇರಿ ಶ್ರೀ ಶಾರದಾ ಪೀಠಾಧೀಶ್ವರರಾದ ಜಗದ್ಗುರು ಶಂಕರಾಚಾರ್ಯ ಭಾರತೀತೀರ್ಥ ಮಹಾಸ್ವಾಮಿ ನುಡಿದರು. 
     ಅವರು ಸನ್ಯಾಸ ದೀಕ್ಷಾ ಸ್ವೀಕಾರದ ನಲವತ್ತನೇ ವರ್ಷ ಮತ್ತು ಪೀಠಾರೋಹಣದ ರಜತಮಹೋತ್ಸವದ ಅಂಗವಾಗಿ ಶ್ರೀ ಕುಂದೇಶ್ವರ ಸಭಾಭವನದಲ್ಲಿ ಆಯೋಜಿಸಲಾಗಿದ್ದ ಸಾರ್ವಜನಿಕ ಗುರುವಂದನೆ ಕಾರ್ಯಕ್ರಮದಲ್ಲಿ ಆಶಿರ್ವಚನವಿತ್ತರು.
     ಕಾಮ, ಕ್ರೋಧ, ಅಂಹಕಾರ, ದುರ್ಜನರ ಸಹವಾಸ ನಮ್ಮ ಪ್ರಬಲವಾದ ಶತ್ರುಗಳು. ಇವುಗಳಿಗೆ ಜೀವನದಲ್ಲಿ ಅವಕಾಶ ನೀಡದೇ ಭಗವಂತನಲ್ಲಿ ಭಕ್ತಿಯಿರಿಸಿದರೆ ಸದಾ ನೆಮ್ಮದಿಯಿಂದಿರಬಹುದು ಎಂದರು. 
    ಶೃಂಗೇರಿಯಿಂದ ಆಗಮಿಸಿ ಜಗದ್ಗುರುಗಳನ್ನು ಕುಂದೇಶ್ವರ ಸ್ವಾಗತ ಮಂಟಪದ ಬಳಿ ವೇದ-ವಾದ್ಯ ಘೋಷ ಮತ್ತು ಪೂರ್ಣಕುಂಭದೊಂದಿಗೆ ವಿಧ್ಯುಕ್ತವಾಗಿ ಸ್ವಾಗತಿಸಲಾಯಿತು. ಬಳಿಕ ಮೆರವಣಿಗೆಯಲ್ಲಿ ಕರೆದೊಯ್ದು, ಸಾರ್ವಜನಿಕ ನೆಲೆಯಲ್ಲಿ ಕುಂದಾಪುರ ಪುರಸಭೆ ಹಾಗೂ ವಿವಿಧ ಸಂಘಟನೆಗಳ ವತಿಯಿಂದ ಗುರುವಂದನೆ ನೆರವೇರಿಸಲಾಯಿತು. 

ಗುರುವಂದನಾ ಸಮಿತಿಯ ಅಧ್ಯಕ್ಷ, ಹಿರಿಯ ನ್ಯಾಯವಾದಿ ಎ.ಎಸ್.ಎನ್ ಹೆಬ್ಬಾರ್ ಸ್ವಾಗತಿಸಿ ಪ್ರಾಸ್ತಾವಿಕ ಮಾತಗಳನ್ನಾಡಿದರು, ಸಮಿತಿ ಉಪಾಧ್ಯಕ್ಷ, ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಳದ ಮಾಜಿ ಧರ್ಮದರ್ಶಿ ಬಿ.ಎಂ ಸುಕುಮಾರ ಶೆಟ್ಟಿ ಗುರುಗಳಿಗೆ ಮಾಲಾರ್ಪಣೆ ಮಾಡಿದರು. ಮತ್ತೊರ್ವ ಉಪಾಧ್ಯಕ್ಷ ಸುಬ್ರಾಯ ಭಾರತಿ ಫಲ ಸಮರ್ಪಿಸಿದರು. ಪಾದಕಾಣಿಕೆಯನ್ನು ಸಮಿತಿಯ ಕೋಶಾಧಿಕಾರಿ ಕೃಷ್ಣಾನಂದ ಚಾತ್ರ ಅರ್ಪಿಸಿದರು. ವಾಸುದೇವ ಜ್ಯೋಸ್ ಅಭಿನಂದನಾ ಭಾಷಣ ಮಾಡಿದರು ಡಾ. ಎಚ್. ವಿ. ನರಸಿಂಹ ಮೂರ್ತಿ ಕಾರ್ಯಕ್ರಮ ನಿರೂಪಿಸಿದರು.

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com