ನ.29: ಉಡುಪಿಯಲ್ಲಿ ರಾಜ್ಯ ಮಟ್ಟದ ಕ್ರೀಡಾಕೂಟ

ಉಡುಪಿ: ಜಿಲ್ಲಾ ಪಂಚಾಯಿತಿ, ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಉಡುಪಿಯ ಬಾಲಕಿಯರ ಸರಕಾರಿ ಪದವಿ ಪೂರ್ವ ಕಾಲೇಜಿನ ಸಂಯುಕ್ತ ಆಶ್ರಯದಲ್ಲಿ ನ.29ರಿಂದ ಡಿ.1ರವರೆಗೆ ರಾಜ್ಯ ಮಟ್ಟದ ಪ್ರೌಢಶಾಲಾ ಬಾಲಕ ಬಾಲಕಿಯರ ಹೊನಲು ಬೆಳಕಿನ ಕ್ರೀಡಾಕೂಟ ಉಡುಪಿ ಅಜ್ಜರಕಾಡಿನ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಯಲಿದೆ. ಜಿಲ್ಲಾ ಉಸ್ತುವಾರಿ ಸಚಿವ ವಿನಯ ಕುಮಾರ್ ಸೊರಕೆ ಅವರು ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು. 

ಕ್ರೀಡಾಕೂಟವನ್ನು ನ.29ರಂದು ಸಂಜೆ 6 ಗಂಟೆಗೆ ರಾಜ್ಯ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ ಉದ್ಘಾಟಿಸಲಿದ್ದಾರೆ. ಕ್ರೀಡಾ ಸಚಿವ ಅಭಯಚಂದ್ರ ಜೈನ್ ಕ್ರೀಡಾ ಧ್ವಜಾರೋಹಣ ಮಾಡಲಿದ್ದಾರೆ. ರಾಜ್ಯಸಭಾ ಸದಸ್ಯ ಆಸ್ಕರ್ ಫರ್ನಾಂಡಿಸ್ ಅವರು ಕ್ರೀಡಾ ಸ್ಮರಣ ಸಂಚಿಕೆ ಬಿಡುಗಡೆ ಮಾಡಲಿದ್ದಾರೆ. ಅಂತರಾಷ್ಟ್ರೀಯ ಕಬಡ್ಡಿ ಪಟು ಮಮತಾ ಪೂಜಾರಿ ಕ್ರೀಡಾ ಜ್ಯೋತಿ ಬೆಳಗಲಿದ್ದಾರೆ ಎಂದು ಅವರು ತಿಳಿಸಿದರು. 

ರಾಜ್ಯದ 34 ಶೈಕ್ಷಣಿಕ ಜಿಲ್ಲೆಗಳಿಂದ ಹಾಗೂ 2 ಕ್ರೀಡಾ ವಸತಿ ಶಾಲೆಗಳಿಂದ ಸುಮಾರು 2,500 ಕ್ರೀಡಾಪಟುಗಳು ಭಾಗವಹಿಸಲಿದ್ದಾರೆ. ಅವರ ಆತಿಥ್ಯ ಹಾಗೂ ಕ್ರೀಡಾಕೂಟಕ್ಕೆ ಸುಮಾರು 35 ಲಕ್ಷ ರೂ.ಖರ್ಚು ಅಂದಾಜಿಸಲಾಗಿದೆ. ಕ್ರೀಡಾಕೂಟ ಸುಲಲಿತವಾಗಿ ನಡೆಯಲು ವಿವಿಧ ಸಮಿತಿ ರಚಿಸಲಾಗಿದೆ. ಇಲ್ಲಿ ಪ್ರಥಮ ಹಾಗೂ ದ್ವಿತೀಯ ಸ್ಥಾನ ಪಡೆದ ಕ್ರೀಡಾಪಟುಗಳು ಡಿಸೆಂಬರ್‌ನಲ್ಲಿ ರಾಂಚಿಯಲ್ಲಿ ನಡೆಯುವ ರಾಷ್ಟ್ರಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಲಿದ್ದಾರೆ. 3 ದಿನಗಳ ಕಾಲ ನಡೆಯುವ ಈ ಕ್ರೀಡಾಕೂಟದಲ್ಲಿ ಬಾಲಕ ಮತ್ತು ಬಾಲಕಿಯರ ವಿಭಾಗದಲ್ಲಿ ಒಟ್ಟು 33 ಸ್ಪರ್ಧೆಗಳಿಂದ 99 ಪದಕಗಳು ನಿರ್ಧಾರವಾಗಲಿವೆ. ಮೊದಲ 3ಸ್ಥಾನ ಹಾಗೂ ದಾಖಲೆ ಮಾಡಿದ ಕ್ರೀಡಾಪಟುಗಳಿಗೆ ನಗದು ಬಹುಮಾನ ನೀಡಲಾಗುವುದು ಎಂದರು. 

ಸುದ್ದಿಗೋಷ್ಠಿಯಲ್ಲಿ ನಗರಸಭೆ ಅಧ್ಯಕ್ಷ ಯುವರಾಜ್ ಪುತ್ತೂರು, ತಾಪಂ ಅಧ್ಯಕ್ಷೆ ಸುನೀತಾ ನಾಯ್ಕ, ಜಿಪಂ ಉಪಕಾರ್ಯದರ್ಶಿ ವಿಜಯ ಕುಮಾರ್ ಶೆಟ್ಟಿ, ಕಾಲೇಜಿನ ಪ್ರಾಂಶುಪಾಲೆ ರಾಧಾಮಣಿ ಡಿ.ಎಸ್., ಡಿವೈಎಸ್ಪಿ ಡಾ.ಪ್ರಭುದೇವ ಮಾನೆ, ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ಸೀತಾನದಿ ವಿಠಲ ಶೆಟ್ಟಿ, ಆರ್ಥಿಕ ಸಮಿತಿ ಅಧ್ಯಕ್ಷ ರಮೇಶ್ ಕಾಂಚನ್, ಜಿಲ್ಲಾ ಆಡಳಿತ ಉಪನಿರ್ದೇಶಕ ದಿವಾಕರ ಶೆಟ್ಟಿ ಉಪಸ್ಥಿತರಿದ್ದರು. 

ಜಿಲ್ಲೆಯಲ್ಲಿ ಸಂಚರಿಸಲಿದೆ ಕ್ರೀಡಾರಥ: ರಾಜ್ಯ ಮಟ್ಟದ ಕ್ರೀಡಾಕೂಟಕ್ಕೆ ಪೂರ್ವಭಾವಿಯಾಗಿ ನ.27ರಂದು ಉಡುಪಿ ತೆಂಕಪೇಟೆಯ ಶ್ರೀ ವೆಂಕಟರಮಣ ದೇವಳದಿಂದ ಸುಸಜ್ಜಿತ ಕ್ರೀಡಾರಥಕ್ಕೆ ಚಾಲನೆ ನೀಡಲಾಗುವುದು. 3 ದಿನಗಳ ಕಾಲ ಜಿಲ್ಲೆಯಾದ್ಯಂತ ಸಂಚರಿಸಲಿರುವ ಈ ಕ್ರೀಡಾರಥ ನ.29ರಂದು ಉಡುಪಿಗೆ ಹಿಂದುರುಗಿದಾಗ ಸಂಭ್ರಮದ ಸ್ವಾಗತ ದೊರೆಯಲಿದೆ. ರಥಬೀದಿಯಲ್ಲಿ ಪರ್ಯಾಯ ಕಾಣಿಯೂರು ಶ್ರೀ ವಿದ್ಯಾವಲ್ಲಭ ತೀರ್ಥ ಸ್ವಾಮೀಜಿ ಅವರು ಈ ಸಂದರ್ಭದಲ್ಲಿ ಪುರಮೆರವಣಿಗೆಗೆ ಚಾಲನೆ ನೀಡಲಿದ್ದಾರೆ. ಕ್ರೀಡಾಕೂಟವು ಡಿ.1ರಂದು ಅಪರಾಹ್ನ 3-30ಕ್ಕೆ ಸಮಾರೋಪಗೊಳ್ಳಲಿದೆ 

ಜಿಲ್ಲಾ ಕ್ರೀಡಾಂಗಣ ಅಭಿವೃದ್ಧಿಗೆ 2.25 ಕೋಟಿ ರೂ.: ಅಜ್ಜರಕಾಡಿನ ಜಿಲ್ಲಾ ಕ್ರೀಡಾಂಗಣದ ಮೇಲ್ಛಾವಣಿ ಕಾಮಗಾರಿಗೆ ರಾಜ್ಯ ಸಭಾ ಸದಸ್ಯ ಆಸ್ಕರ್ ಫೆರ್ನಾಂಡಿಸ್ ಅವರು ತಮ್ಮ ಸಂಸದರ ನಿಧಿಯಿಂದ 1.25 ಕೋಟಿ ರೂ. ನೀಡಲಿದ್ದಾರೆ. ಇದಕ್ಕೆ ಮ್ಯಾಚಿಂಗ್ ಗ್ರ್ಯಾಂಟ್ ಆಗಿ ರಾಜ್ಯ ಕ್ರೀಡಾ ಸಚಿವ ಅಭಯಚಂದ್ರ ಜೈನ್ ಅವರು 1 ಕೋಟಿ ರೂ. ಬಿಡುಗಡೆ ಮಾಡಲಿದ್ದಾರೆ. ಇದರಲ್ಲಿ ಲಾನ್ ಟೆನ್ನಿಸ್ ಕೋರ್ಟ್ ನಿರ್ಮಿಸಲಾಗುವುದು. ಹೀಗೆ ಜಿಲ್ಲಾ ಕ್ರೀಡಾಂಗಣವನ್ನು ಸುಸಜ್ಜಿತವಾಗಿ ಎಲ್ಲಾ ಬಗೆಯ ಕ್ರೀಡೆಗಳಿಗೂ ಅವಕಾಶವಿರುವಂತೆ ಅಭಿವೃದ್ಧಿ ಪಡಿಸಲಾಗುವುದು ಎಂದು ಸುದ್ದಿಗೋಷ್ಠಿಯಲಿ ್ಲ ಉಪಸ್ಥಿತರಿದ್ದ ಶಾಸಕ ಪ್ರಮೋದ್ ಮಧ್ವರಾಜ್ ತಿಳಿಸಿದರು.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com