ಉಡುಪಿ ಶ್ರೀಕೃಷ್ಣ ಮಠ: ನಿತ್ಯ ರಥೋತ್ಸವ ಸಂಭ್ರಮ

ಉಡುಪಿ: ಉಡುಪಿ ರಥಬೀದಿಯಲ್ಲಿನ್ನು ಭಾಗೀರಥಿ ಜನ್ಮದಿನದ ತನಕ ಶ್ರೀಕೃಷ್ಣನಿಗೆ ನಿತ್ಯ ರಥೋತ್ಸವ ಸಂಭ್ರಮ. 

ಚಾತುರ್ಮಾಸ್ಯ ಅವಧಿಯ ಶಯನೀಯ ಶ್ರೀಕೃಷ್ಣನ ಉತ್ಸವ ಮೂರ್ತಿಯನ್ನು ಹೊರತೆಗೆಯುವ ಮೂಲಕ ಲಕ್ಷ ದೀಪೋತ್ಸವ ಸಹಿತವಾದ ತೆಪ್ಪೋತ್ಸವ, ರಥೋತ್ಸವ ಮಂಗಳವಾರ ನಡೆಯಿತು. ಸಂಜೆ 6.45 ರ ಸುಮುಹೂರ್ತದಲ್ಲಿ ನವಗ್ರಹ ಪೂಜೆ, ದಾನದ ಬಳಿಕ ಶ್ರೀಕೃಷ್ಣನ ಉತ್ಸವ ಮೂತಿರ್ಯನ್ನು 148 ದಿನಗಳ ಬಳಿಕ ಹೊರತೆಗೆದು ಮುಖ್ಯಪ್ರಾಣ ಸಹಿತನಾಗಿ ಮಧ್ವ ಸರೋವರದಲ್ಲಿ ತೆಪ್ಪೋತ್ಸವ ನಡೆಸಲಾಯಿತು. 

ಸ್ವರ್ಣ ಪಲ್ಲಕ್ಕಿಯಲ್ಲಿ ಶ್ರೀಕೃಷ್ಣನನ್ನು ತಂದು ಮಧ್ಯಮ ರಥದಲ್ಲಿಟ್ಟು ಪರ್ಯಾಯ ಕಾಣಿಯೂರು ಶ್ರೀವಿದ್ಯಾವಲ್ಲಭತೀರ್ಥ ಶ್ರೀಪಾದರು ಪೂಜೆ ಸಲ್ಲಿಸಿದರು. ಚಿಕ್ಕ ರಥದಲ್ಲಿ ಶ್ರೀಅನಂತೇಶ್ವರ ಹಾಗೂ ಚಂದ್ರಮೌಳೀಶ್ವರ ದೇವರನ್ನಿಡಲಾಯಿತು. 

ಮಧ್ಯಮ ರಥದಲ್ಲಿ ಶ್ರೀಕೃಷ್ಣ ಮತ್ತು ಮುಖ್ಯಪ್ರಾಣ ದೇವರನ್ನಿಟ್ಟು ರಥಬೀದಿಯಲ್ಲಿ ಉತ್ಸವ ನಡೆಸಲಾಯಿತು. ಭಕ್ತಾದಿಗಳು ಗೋವಿಂದ ನಾಮ ಸ್ಮರಣೆಯೊಂದಿಗೆ ರಥವನ್ನೆಳೆದರು. ಸುಡುಮದ್ದು ಆಗಸದಲ್ಲಿ ಬೆಳಕು, ಬಣ್ಣದ ಆಕರ್ಷಕ ಚಿತ್ತಾರ ಮೂಡಿಸಿತು. 

ಪೇಜಾವರ ಶ್ರೀವಿಶ್ವೇಶತೀರ್ಥ ಶ್ರೀಪಾದರು, ಶ್ರೀವಿಶ್ವಪ್ರಸನ್ನ ತೀರ್ಥ ಶ್ರೀಪಾದರು, ಕೃಷ್ಣಾಪುರ ಮಠದ ಶ್ರೀವಿದ್ಯಾಸಾಗರತೀರ್ಥ ಶ್ರೀಪಾದರು, ಪಲಿಮಾರು ಶ್ರೀವಿದ್ಯಾಧೀಶತೀರ್ಥ ಶ್ರೀಪಾದರು, ಅದಮಾರು ಶ್ರೀಈಶಪ್ರಿಯತೀರ್ಥ ಶ್ರೀಪಾದರು ಉಪಸ್ಥಿತರಿದ್ದರು. 

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com