16ರಂದು ಬಣ್ಣದ ವೇಷಧಾರಿಗಳ ಸಮ್ಮಿಲನ

ಉಡುಪಿ: ಉಡುಪಿಯ ಯಕ್ಷಗಾನ ಕಲಾರಂಗದ ಆಶ್ರಯದಲ್ಲಿ ಯಕ್ಷಗಾನದ ದೈತ್ಯ ಪ್ರತಿಭೆ ಬಣ್ಣದ ಮಹಾಲಿಂಗ ಅವರ ಶತಮಾನದ ಸಂಸ್ಮರಣಾರ್ಥ ಒಂದು ದಿನದ ಬಣ್ಣದ ವೇಷಧಾರಿಗಳ ಸಮ್ಮಿಲನ 'ಬಣ್ಣದ ಬಿನ್ನಾಣ' ಹಾಗೂ ಬಣ್ಣದ ವೇಷದ ಛಾಯಾಚಿತ್ರ ಪ್ರದರ್ಶನ ನ.16ರಂದು ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ನಡೆಯಲಿದೆ. ಯಕ್ಷಗಾನ ಕಲಾರಂಗದ ಅಧ್ಯಕ್ಷ ತಲ್ಲೂರು ಶಿವರಾಮ ಶೆಟ್ಟಿ ಅವರು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು. 

ಕಾರ್ಯಕ್ರಮವನ್ನು ಬೆಳಗ್ಗೆ 10ಗಂಟೆಗೆ ಪ್ರಸಿದ್ಧ ಹೃದಯ ತಜ್ಞ ಡಾ.ಪದ್ಮನಾಭ ಕಾಮತ್ ಉದ್ಘಾಟಿಸಲಿದ್ದಾರೆ. ರಾಜ್ಯ ಯಕ್ಷಗಾನ ಬಯಲಾಟ ಅಕಾಡೆಮಿ ಸದಸ್ಯ ಕಿಶನ್ ಹೆಗ್ಡೆ ಉಪಸ್ಥಿತರಿರುವರು. ಅಪರಾಹ್ನ 2ಗಂಟೆಯಿಂದ ನಡೆಯುವ ಬಣ್ಣದ ವೇಷದ ಮುಖವರ್ಣಿಕೆಯ ಪ್ರಸ್ತುತಿಯಲ್ಲಿ ಸುಮಾರು ತೆಂಕುತಿಟ್ಟಿನ ಸುಮಾರು 40 ಮಂದಿ ಬಣ್ಣದ ವೇಷಧಾರಿಗಳು ಭಾಗವಹಿಸುವರು. ಹಿರಿಯ ಕಲಾವಿದರುಗಳಾದ ದೇವಕಾನ ಕಷ್ಣ ಭಟ್, ಕೆ.ಗೋವಿಂದ ಭಟ್, ಬನ್ನಂಜೆ ಸಂಜೀವ ಸುವರ್ಣ, ಪದ್ಯಾಣ ಶಂಕರನಾರಾಯಣ ಭಟ್ ಅವರ ಉಪಸ್ಥಿತಿಯಲ್ಲಿ ಈ ಪ್ರಸ್ತುತಿ ನಡೆಯಲಿದೆ. 

ಬೆಳಗ್ಗೆ 11ಕ್ಕೆ ಉಪನ್ಯಾಸ ಮತ್ತು ಸಂವಾದ ಕಾರ್ಯಕ್ರಮದಲ್ಲಿ ಬೆಂಗಳೂರಿನ ರಾಮಕೃಷ್ಣ ಕನ್ನರ್ಪಾಡಿಯವರಿಂದ 'ಪ್ರಸಾಧನ ಮತ್ತು ರಂಗಭೂಮಿ' ವಿಷಯದ ಕುರಿತು ಉಪನ್ಯಾಸ ಹಾಗೂ 'ಯಕ್ಷಗಾನದಲ್ಲಿ ಬಣ್ಣದ ವೇಷಗಳು ಮತ್ತು ವೇಷಧಾರಿಗಳು 'ಎಂಬ ವಿಷಯದಲ್ಲಿ ಡಾ.ಕೋಳ್ಯೂರು ರಾಮಚಂದ್ರ ರಾವ್, ಕೋಟ ಶ್ರೀಧರ ಹಂದೆ, ಬಲಿಪ ನಾರಾಯಣ ಭಾಗವತ ಹಾಗೂ ಕೆ. ಸದಾಶಿವ ಸಂವಾದ ನಡೆಸಲಿದ್ದಾರೆ. 

ಸಂಜೆ 5ಗಂಟೆಗೆ ನಡೆಯುವ ಸಮಾರೋಪ ಸಮಾರಂಭದಲ್ಲಿ ಪರ್ಯಾಯ ಕಾಣಿಯೂರು ಶ್ರೀ ವಿದ್ಯಾವಲ್ಲಭತೀರ್ಥ ಸ್ವಾಮೀಜಿ ಅವರು ಅನುಗ್ರಹ ಸಂದೇಶ ನೀಡುವರು. ಮಂಗಳೂರು ವಿವಿಯ ಯಕ್ಷಗಾನ ಅಧ್ಯಯನ ಕೇಂದ್ರದ ನಿರ್ದೇಶಕ ಡಾ.ಕೆ.ಚಿನ್ನಪ್ಪ ಗೌಡ ಅವರು ಅಧ್ಯಕ್ಷತೆ ವಹಿಸಲಿದ್ದಾರೆ. ಕುರಿಯ ಗಣಪತಿ ಶಾಸ್ತ್ರಿ ಅವರು ಬಣ್ಣದ ವೇಷದ ಮಹಾಲಿಂಗರ ಸಂಸ್ಮರಣೆ ಮಾಡಲಿದ್ದಾರೆ. ಯಕ್ಷಗಾನ ಬಯಲಾಟ ಅಕಾಡೆಮಿ ಸದಸ್ಯ ಕೆ.ಎಂ ಶೇಖರ ಉಪಸ್ಥಿತ ರಿರವರು. ಸಂಜೆ 6 ಗಂಟೆಯಿಂದ ಆಯ್ದ ವೇಷಗಳ ಪ್ರಾತ್ಯಕ್ಷಿಕೆ,ಪ್ರದರ್ಶನ ನಡೆಯಲಿದೆ. ಯಕ್ಷಗಾನ ಕಲಾರಂಗದ ಪದಾಧಿಕಾರಿಗಳಾದ ಮುರಳಿ ಕಡೆಕಾರ್, ಗಣೇಶ್ ರಾವ್,ಎಸ್.ವಿ.ಭಟ್, ಗಂಗಾಧರ ರಾವ್, ಎಎಚ್.ಎನ್. ಶೃಂಗೇಶ್ವರ್ ಉಪಸ್ಥಿತರಿದ್ದರು. 

ಛಾಯಾಗ್ರಾಹಕರಿಗೆ ಸ್ಪರ್ಧೆ: ಯಕ್ಷಗಾನದ ಬಣ್ಣದ ವೇಷಧಾರಿಗಳು ಹಾಗೂ ಮುಖವರ್ಣಿಕೆಯ ಛಾಯಾಚಿತ್ರಗಳ ಕೊರತೆಯಾಗಬಾರದು ಎಂಬ ಉದ್ದೇಶದಿಂದ ಛಾಯಾಚಿತ್ರ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ. ಆಸಕ್ತ ಫೋಟೊಗ್ರಾಫರ್ಸ್‌ಗಳು ಅಂದು ಬೆಳಗ್ಗಿನಿಂದ ಸಾಯಂಕಾಲದವರೆಗಿನ ದೃಶ್ಯಗಳನ್ನು ಕೆಮರಾದಲ್ಲಿ ಸೆರೆಹಿಡಿದು, ತಮ್ಮ ಉತ್ತಮ 2 ಫೋಟೊಗಳನ್ನು ಯಕ್ಷಗಾನ ಕಲಾರಂಗಕ್ಕೆ ನ.20ರೊಳಗೆ ತಲುಪಿಸಬೇಕು. ಉತ್ತಮ ಛಾಯಾಚಿತ್ರಗಳಿಗೆ ಪ್ರಥಮ ಬಹುಮಾನ 5,000ರೂ, ದ್ವಿತೀಯ 3,000ರೂ. ಹಾಗೂ ತೃತೀಯ ಬಹುಮಾನವಾಗಿ 2,000ರೂ.ನಗದು ಬಹುಮಾನವನ್ನು ನೀಡಲಾಗುವುದು.

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com