ಭಗವದ್ಗೀತಾ ಅಭಿಯಾನದ ಸಂಪನ್ನ

ಬೈಂದೂರು: ಶ್ರೀ ಮದ್ಭಗವದ್ಗೀತೆಯು ವ್ಯಕ್ತಿತ್ವ ವಿಕಸನದಲ್ಲಿ ಔಚಿತ್ಯ ಪ್ರಜ್ಞೆಯನ್ನು ಬೋಧಿಸುತ್ತಾ ಸಂತುಲಿನ ಜೀವನ ಪದ್ಧತಿ ಆಪೇಕ್ಷಿಸುತ್ತದೆ. ಅತಿಯಾದಲ್ಲಿ ಎಲ್ಲವೂ ನ್ಯೂನತೆಯೇ ಆಗುವುದರಿಂದ ಸಮಚಿತ್ತ, ಶುದ್ಧಚಾರಿತ್ಯ ಮುಖ್ಯ. ಕಾಲಾಬಾಧಿತವಾಗದೇ ಇಂದಿಗೂ ಸೂತ್ರಪ್ರಾಯವಾಗಿರುವ ಈ ಗ್ರಂಥ ವಿಶ್ವಮಾನ್ಯವಾಗಿದೆ ಎಂದು ನಾವುಂದ ರಿಚರ್ಡ ಡಿಅಲ್ಮೆಡಾ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಎಸ್. ನಾರಾಯಣ ರಾವ್ ಹೇಳಿದರು. 
      ಶ್ರೀ ಮದ್ಭಗವದ್ಗೀತಾ ಜಯಂತಿ ಪ್ರಯುಕ್ತ ಬೈಂದೂರಿನ ಶ್ರೀ ಸೀತಾರಾಮಚಂದ್ರ ದೇವಸ್ಥಾನದ ಸಭಾಭವನದಲ್ಲಿ ನಡೆದ ಭಗವದ್ಗೀತಾ ಅಭಿಯಾನದ ವಿವಿಧ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಿಸಿ ಸಮಾರೋಪ ಭಾಷಣ ಮಾಡುತ್ತಾ ನುಡಿದರು. ಈ ಸಾಲಿನ ಗೀತಾ ಜಯಂತಿ ಪ್ರಯುಕ್ತ ಶ್ರೀ ಸ್ವರ್ಣವಲ್ಲಿ ಶ್ರೀಗಳ ಮಾರ್ಗದರ್ಶನದಲ್ಲಿ ತಿಂಗಳಿಡೀ ತಾಲೂಕಿನ 180 ಕೇಂದ್ರಗಳಲ್ಲಿ ಹಮ್ಮಿಕೊಂಡ ಭಗವದ್ಗೀತಾ ಅಭಿಯಾನದ ಸಮಾರೋಪ ಸಮಾರಂಭವನ್ನು ರಾಮ ಕ್ಷತ್ರಿಯ ಸಂಘದ ಅಧ್ಯಕ್ಷ ಗೋಪಾಲ ನಾಯಕ್ ಉದ್ಘಾಟಿಸಿದರು. ಅಧ್ಯಕ್ಷತೆಯನ್ನು ಸಮಿತಿಯ ಅಧ್ಯಕ್ಷ ಬಿ.ರಾಮಕಷ್ಣ ಶೇರೆಗಾರ್ ವಹಿಸಿದ್ದರು. ವೇದಿಕೆಯಲ್ಲಿ ಮಾತಮಂಡಳಿಯ ಸೀತಾಶ್ರೀ ನಿವಾಸ್, ವಿಪ್ರ ರಂಜಿನಿಯ ಯು.ವರಮಹಾಲಕ್ಷ್ಮೀ ಹೊಳ್ಳ, ಮಂಗೇಶ ಶಣೈ, ಶ್ರೀನಿವಾಸ್ ಮದ್ದೋಡಿ, ನಾಗೇಶ ಶೇರುಗಾರ ಉಪಸ್ಥಿತರಿದ್ದರು. ಸಮಿತಿ ಕಾರ್ಯದರ್ಶಿ ಕೇಶವ ನಾಯಕ್ ಅಭಿಯಾನದ ವರದಿ ವಾಚಿಸಿದರು. ಸಮಿತಿಯ ಗೌರವಾಧ್ಯಕ್ಷ ಉಪ್ಪುಂದ ಚಂದ್ರಶೇಖರ ಹೊಳ್ಳ ಮತ್ತು ವೇ.ಮೂ. ಸುಬ್ರಹ್ಮಣ್ಯ ಭಟ್ ಶುಭಾಶಂಸನಗೈದರು. ಸ್ಪರ್ಧಾ ವಿಜೇತರ ಪಟ್ಟಿಯನ್ನು ಮಂಜುನಾಥ ಶೇರುಗಾರ ಮತ್ತು ಭಾರತಿ ಟೀಚರ್ ಓದಿದರು. ವಿಪ್ರರಂಜಿನಿ ತಂಡದವರು ಪ್ರಾರ್ಥಿಸಿದರು. ಬಿ. ವಿಶ್ವೇಶ್ವರ ಅಡಿಗರು ಸ್ವಾಗತಿಸಿ, ಗಣಪತಿ ಹೋಬಳಿದಾರ್ ಕಾರ್ಯಕ್ರಮ ನಿರೂಪಿಸಿ, ಯು.ಗಣೇಶ ಪ್ರಸನ್ನ ಮಯ್ಯ ವಂದಿಸಿದರು. ಸಂಯೋಜಕರು, ಸಂಪನ್ಮೂಲ ವ್ಯಕ್ತಿಗಳು ಮತ್ತು ಪಠಣಕಾರರಿಗೆ ಶ್ರೀ ಮಠದ ಪರವಾಗಿ ಶಾಲು ಮತ್ತು ಮಂತ್ರಾಕ್ಷತೆ ನೀಡಿ ಗೌರವಿಸಲಾಯಿತು.

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com