ಖಾಸಗಿ ಶಾಲಾ ಪ್ರತಿನಿಧಿಗಳ ಸಭೆ

ಬೈಂದೂರು: ಒತ್ತಿನೆಣೆ ತಿರುವಿನಲ್ಲಿ ಗುರುವಾರ ಶಾಲಾ ವಾಹನ ದುರಂತಕ್ಕೀಡಾದ ಘಟನೆ ನಡೆದ ಹಿನ್ನೆಲೆಯಲ್ಲಿ ಇಲ್ಲಿನ ರತ್ತುಬಾಯಿ ಜನತಾ ಪ್ರೌಢಶಾಲೆಯಲ್ಲಿ ಖಾಸಗಿ ಶಾಲಾ ಪ್ರತಿನಿಧಿಗಳ ಸಭೆ ನಡೆಯಿತು. 

ಶಾಸಕ ಕೆ. ಗೋಪಾಲ ಪೂಜಾರಿ ಮಾತನಾಡಿ, ಘಟನೆ ಮನ ಕಲುಕುವಂತಿದೆ. ಆಸ್ಪತ್ರೆಯಲ್ಲಿರುವ ಮಕ್ಕಳನ್ನು ಬೆಳಗ್ಗೆ ಭೇಟಿ ಮಾಡಿದೆ. ಅವರು ಚೇತರಿಸಿಕೊಳ್ಳುತ್ತಿದ್ದಾರೆ. ಮುಂದೆ ಇಂತಹ ಘಟನೆಗಳು ಮರುಕಳಿಸದಂತೆ ಶಾಲಾ ಆಡಳಿತ ಮಂಡಳಿ ಎಚ್ಚರ ವಹಿಸಬೇಕು. ಖಾಸಗಿ ಶಾಲೆಗಳಲ್ಲಿ ಸುಸ್ಥಿತಿಯಲ್ಲಿ ಇಲ್ಲದ ವಾಹನಗಳನ್ನು ತಪಾಸಣೆ ನಡೆಸಿ, ಅವುಗಳನ್ನು ಒಂದು ನಿಗದಿತ ಸಮಯದೊಳಗೆ ಬದಲಾಯಿಸಬೇಕು ಇದಕ್ಕೆ ತಪ್ಪಿದ್ದಲ್ಲಿ ಸಂಬಂಧಪಟ್ಟ ಶಾಲೆಗಳಿಗೆ ನೋಟಿಸ್ ನೀಡಿ ಎಂದು ಸಂಬಂಧಿತ ಅಧಿಕಾರಿಗಳಿಗೆ ಸೂಚನೆ ನೀಡಿದರು. ಇಲ್ಲಿನ ಎಚ್‌ಎಂಎಂಎಸ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಹಲವು ತಿಂಗಳಗಳಿಂದ ಪಾಲಕರ ಸಭೆ ಕರೆದಿರುವ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ ಶಾಸಕರು, ಕಾಲ ಕಾಲಕ್ಕೆ ಎಲ್ಲ ಖಾಸಗಿ ಶಾಲೆಗಳಲ್ಲಿ ಪೋಷಕರ ಸಭೆ ನಡೆಸಿ, ಮಕ್ಕಳ ಚಲನ ವಲನ, ಸಮಸ್ಯೆ ಮತ್ತು ವಾಹನ ಚಾಲಕರ ಬಗ್ಗೆ ಮಾಹಿತಿ ಕಲೆ ಹಾಕಬೇಕು. ಕ್ಷೇತ್ರ ಶಿಕ್ಷಣಾಧಿಕಾರಿಗಳು ಸಹ ಖುದ್ದಾಗಿ ಖಾಸಗಿ ಶಾಲೆಗಳಿಗೆ ಭೇಟಿ ನೀಡಿ, ಪ್ರತೀ ಶಾಲೆಗಳಲ್ಲಿ ಇರುವ ವಾಹನಗಳು, ಚಾಲಕರುಗಳ ಬಗ್ಗೆ ವರದಿ ಸಿದ್ಧ್ದಪಡಿಸಬೇಕು ಎಂದು ಸೂಚನೆ ನೀಡಿದರು. 

ಬೈಂದೂರಿನಲ್ಲಿ ಸಹಾಯಕ ಕಮೀಷನರ್ ನೇತತ್ವದಲ್ಲಿ ನಡೆಯುತ್ತಿರುವ ವಿಶೇಷ ಸಭೆಗೆ ಪ್ರಮುಖವಾಗಿ ಬರಬೇಕಾದ ಆರ್‌ಟಿಓ ಅಧಿಕಾರಿಗಳು ಬಾರದಿರುವ ಬಗ್ಗೆ ಶಾಸಕರು ಗರಂ ಆದರು. ಸ್ಥಳದಲ್ಲಿಯೇ ದೂರವಾಣಿ ಮೂಲಕ ಅಧಿಕಾರಿಗಳನ್ನು ಸಂಪರ್ಕಿಸಿ, ಶಾಲೆಗಳ ವಾಹನಗಳ ಸ್ಥಿತಿಗತಿಗಳ ಬಗ್ಗೆ ಪರಿಶೀಲಿಸಬೇಕಾದ ನೀವೇ ಸಭೆಗೆ ಬಂದಿಲ್ಲ. ನಾನು ಮಕ್ಕಳ ಮೇಲಿನ ಕಾಳಜಿಯಿಂದ ಅಧಿವೇಶನ ಬಿಟ್ಟು ಬಂದಿದ್ದೇನೆ. ಹವಾ ನಿಯಂತ್ರಿತ ಕೊಠಡಿಯಲ್ಲಿ ಕುಳಿತು ಕೆಲಸ ಮಾಡಿದರೆ ಸಾಲದು ಎಂದು ಆಕ್ರೋಶ ವ್ಯಕ್ತಪಡಿಸಿದರು. 

ಸಹಾಯಕ ಕಮೀಷನರ್ ಚಾರುಲತಾ ಸೋನಾರ್ ಮಾತನಾಡಿ, ಶಾಲಾ ವಾಹನ ಚಾಲಕರು ಅತಿಯಾದ ವೇಗ, ಮೊಬೈಲ್‌ನಲ್ಲಿ ಮಾತನಾಡುವುದರ ಬಗ್ಗೆ ದೂರು ನೀಡಲು ಸಹಕಾರಿಯಾಗುವಂತೆ ವಾಹನಗಳ ಮೇಲೆ ಶಾಲೆಯ ಮುಖ್ಯಸ್ಥರ ದೂರವಾಣಿ ಸಂಖ್ಯೆ ನಮೂದಿಸಬೇಕು. ಎಲ್ಲ ವಾಹನ ಚಾಲಕರು ಸಂಚಾರಿ ನಿಯಮಗಳನ್ನು ಪಾಲಿಸುವುದು ಕಡ್ಡಾಯವಾಗಿದೆ ಎಂದರು. 

ತಾ.ಪಂ. ಸದಸ್ಯ ರಾಜು ಪೂಜಾರಿ, ಜಿಪಂ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿಅಧ್ಯಕ್ಷೆ ಗೌರಿ ದೇವಾಡಿಗ, ತಹಸೀಲ್ದಾರ್ ಗಾಯತ್ರಿ ನಾಯಕ್, ವತ್ತ ನಿರೀಕ್ಷಕ ಸುದರ್ಶನ, ಎಸ್‌ಐ ಸಂತೋಷ ಕಾಯ್ಕಿಣಿ, ಕ್ಷೇತ್ರ ಶಿಕ್ಷಣಾಧಿಕಾರಿ ಭಾಸ್ಕರ ಶೆಟ್ಟಿ ಉಪಸ್ಥಿತರಿದ್ದರು. 
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com