ಕಸ್ತೂರಿ ರಂಗನ್ ವರದಿ ಅನುಷ್ಥಾನ ವಿರೋಧಿಸಿ ಬೈಂದೂರಿನಲ್ಲಿ ಬೃಹತ್ ಪ್ರತಿಭಟನೆ

ಬೈಂದೂರು: ಅವೈಜ್ಞಾನಿಕವಾಗಿ ರೂಪಿಸಲಾಗಿದೆ ಎಂದು ಹೇಳಲಾಗಿರುವ ಡಾ. ಕಸ್ತೂರಿ ರಂಗನ್ ವರದಿ ಅನುಷ್ಠಾನವನ್ನು ವಿರೋಧಿಸಿ ಬೈಂದೂರು ಯಡ್ತರೆ, ತಗ್ಗರ್ಸೆ, ಯಳಜಿತ, ಗೋಳಿಹೊಳೆ, ಅರೆಶಿರೂರು, ಕೊಲ್ಲೂರು, ಮುದೂರು, ಜಡ್ಕಲ್ ಗ್ರಾಮಸ್ಥರಿಂದ ಬೈಂದೂರಿನ ವಿಶೇಷ ತಹಶೀಲ್ದಾರ್ ಕಛೇರಿಯ ಎದುರು ಬೃಹತ್ ಪ್ರತಿಭಟನಾ ಸಭೆ ಜರುಗಿತು.
      ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಬೈಂದೂರು ಶಾಸಕ ಗೋಪಾಲ ಪೂಜಾರಿ ಕಸ್ತೂರಿ ರಂಗನ್ ವರದಿಯ ಅನುಷ್ಠಾನದಿಂದಾಗುವ ತೊಂದರೆಗಳ ಬಗ್ಗೆ ಮುಖ್ಯಮಂತ್ರಿಗಳೊಂದಿಗೆ ಚೆರ್ಚಿಸಿದ್ದೇನೆ. ಈ ವರದಿ ಅನುಷ್ಠಾನಗೊಳ್ಳದ ರೀತಿಯಲ್ಲಿ ಎಲ್ಲರೂ ಪಕ್ಷಭೇದ ಮರೆತು ಒಗ್ಗಟ್ಟಿನಿಂದ ಹೋರಾಡುತ್ತವೆ. ರಾಜ್ಯದ ಅರಣ್ಯ ಸಚಿವರನ್ನು ಈ ಭಾಗದ ಪ್ರತಿ ಭಾಗಗಳಿಗೂ ಕರೆದುಕೊಂಡು ಬಂದು ಜನರ ನೋವನ್ನು ಕೇಳಿಸುವ ವ್ಯವಸ್ಥೆ ಮಾಡಿಸುತ್ತೇನೆ ಎಂದರು.
     ಬೈಂದೂರು ಬಿಜೆಪಿ ಕ್ಷೇತ್ರಾಧ್ಯಕ್ಷ ಬಿ. ಎಂ. ಸುಕುಮಾರ ಶೆಟ್ಟಿ ಮಾತನಾಡಿ ಕರಾವಳಿ ಪ್ರದೇಶದ ಜನ ಈಗಾಗಲೇ ಸಿ.ಆರ್.ಜಡ್ ಸಮಸ್ಯೆಯಿಂದ ತೊಂದರೆ ಅನುಭವಿಸುತ್ತಿದ್ದಾರೆ ಅದರೊಂದಿಗೆ ಕಸ್ತೂರಿ ರಂಗನ ವರದಿಯ ಹೊರೆ ಬೇಡ. ಕಸ್ತೂರಿ ರಂಗನ್ ವರದಿ ಅನುಷ್ಠಾನಗೊಂಡಲ್ಲಿ ಜನ ಊರು ಬಿಡಬೇಕಾದ ಪರಿಸ್ಥಿತಿ ಎದುರಾಗಬಹುದು ಎಂದರು
      ತಾಲೂಕು ಪಂಚಾಯತ್ ಸದಸ್ಯರಾದ ರಾಜು ಪೂಜಾರಿ, ಕೊಲ್ಲೂರು ರಮೇಶ್ ಗಾಣಿಗ, ರೈತ ಸಂಘದ ಅಧ್ಯಕ್ಷ ದೀಪಕ್ ಕುಮಾರ್ ಶೆಟ್ಟಿ, ಬೈಂದೂರು ಗ್ರಾ. ಪಂ ಅಧ್ಯಕ್ಷ ಜನಾರ್ಧನ, ಯಡ್ತರೆ ಗ್ರಾ. ಪಂ ಅಧ್ಯಕ್ಷ ನಾಗರಾಜ ಶೆಟ್ಟಿ, ಪಡುವರಿ ಗ್ರಾ. ಪಂ ಅಧ್ಯಕ್ಷ ಸುರೇಶ್ ಬಟವಾಡಿ, ಗೋಳಿಹೊಳೆ ಗ್ರಾ. ಪಂ ಅಧ್ಯಕ್ಷ ನಾರಾಯಣ ಶೆಟ್ಟಿ, ರೈತ ಸಂಘದ ಉಪಾಧ್ಯಕ್ಷ ವಸಂತ ಹೆಗ್ಡೆ, ವೆಂಕ್ಟ ಪೂಜಾರಿ, ಭವಾನಿ ಗಾಣಿಗ ಮೊದಲಾದವರು ಈ ಸಂದರ್ಭ ಉಪಸ್ಥಿತರಿದ್ದರು.
     ಜಿಲ್ಲಾ ಪಂಚಾಯತ್ ಸದಸ್ಯ ಬಾಬು ಶೆಟ್ಟಿ ತಗ್ಗರ್ಸೆ ಪ್ರಾಸ್ತಾವಿಕ ಮಾತುಗಳನ್ನಾಡಿದರು, ಸದಾಶಿವ ಡಿ ನಿರೂಪಿಸಿದರು.
     ಬೈಂದೂರು ಎಸ್.ಬಿ.ಎಂ ಬ್ಯಾಂಕ್ ನಿಂದ ವಿಶೇಷ ತಹಶಿಲ್ದಾರರ ಕಛೇರಿಯ ತನಕ ಬೃಹತ್ ಪ್ರತಿಭಟನಾ ರ್ಯಾಲಿಯನ್ನು ಹಮ್ಮಿಕೊಳ್ಳಲಾಗಿತ್ತು. ನೂರಾರು ಪ್ರತಿಭಟನಾಕಾರರು ರ್ಯಾಲಿಯಲ್ಲಿ ಪಾಲ್ಗೊಂಡಿದ್ದರು. ಬಿಗಿ ಪೋಲಿಸ್ ಬಂದೋವಸ್ತ್ ಏರ್ಪಡಿಸಲಾಗಿತ್ತು. ಕೊನೆಯಲ್ಲಿ ತಹಶಿಲ್ದಾರರಿಗೆ ಮನವಿಯನ್ನು ಸಲ್ಲಿಸಲಾಯಿತು.

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com