ಕಸ್ತೂರಿರಂಗನ್ ವರದಿ: ಜಿಲ್ಲೆಯ ಗ್ರಾಮಗಳನ್ನು ಕೈಬಿಡಲು ಶಾಸಕ ಪೂಜಾರಿ ಆಗ್ರಹ

ಕುಂದಾಪುರ: ಕಸ್ತೂರಿರಂಗನ್ ವರದಿಯಡಿ ಶಿಫಾರಸುಗೊಂಡಿರುವ ಉಡುಪಿ ಜಿಲ್ಲೆಯ ಎಲ್ಲ ಗ್ರಾಮಗಳನ್ನು ವರದಿಯಿಂದ ಕೈಬಿಡಬೇಕು. ಈಗಾಗಲೇ ಶಾಸಕಾಂಗ ಪಕ್ಷ ಸಭೆಯಲ್ಲಿ ವರದಿಯನ್ನು ಸಾರಾಸಗಟಾಗಿ ತಿರಸ್ಕರಿಸಲು ಮನವಿ ಮಾಡಿಕೊಂಡಿದ್ದೇವೆ. ಡಿ.15ರಿಂದ ಮತ್ತೆ ಆರಂಭಗೊಳ್ಳಲಿರುವ ಅಧಿವೇಶನದಲ್ಲಿ ವರದಿಯ ಪ್ರಸ್ತಾವನೆ ಮಾಡಲಾಗುವುದು. ಯಾವುದೇ ಕಾರಣಕ್ಕೂ ಕಸ್ತೂರಿರಂಗನ್ ವರದಿಯಡಿ ಉಲ್ಲೇಖಿಸಲ್ಪಟ್ಟಿರುವ ಗ್ರಾಮಗಳನ್ನು ಅದರಲ್ಲಿ ಸೇರ್ಪಡೆಗೊಳಿಸಲು ಬಿಡುವುದಿಲ್ಲ ಎಂದು ಬೈಂದೂರು ಶಾಸಕ ಕೆ.ಗೋಪಾಲ ಪೂಜಾರಿ ತಿಳಿಸಿದ್ದಾರೆ. 

ಕುಂದಾಪುರದಲ್ಲಿ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ ವರದಿಯ ಸಾಧಕ ಬಾಧಕದ ಕುರಿತು ಮುಖ್ಯಮಂತ್ರಿಯವರ ಗಮನಕ್ಕೆ ತರಲಾಗಿದೆ. ಪ್ರತಿಯೊಂದು ಗ್ರಾಮಗಳ ಅಭಿಪ್ರಾಯ ಕ್ರೋಢಿಕರಿಸಿ ಕೇಂದ್ರಕ್ಕೆ ವರದಿ ಸಲ್ಲಿಸುವ ಆದೇಶ ಮುಖ್ಯಮಂತ್ರಿ ನೀಡಿರುವ ಹಿನ್ನೆಲೆಯಲ್ಲಿ ಈಗಾಗಲೆ ಅಭಿಪ್ರಾಯ ಕ್ರೋಢಿಕರಿಸುವ ಪ್ರಕ್ರಿಯೆ ನಡೆಯುತ್ತಿದೆ. ವನ್ಯಜೀವಿ ವಲಯ ಬಿಟ್ಟು ಉಳಿದ ಪ್ರದೇಶಗಳನ್ನು ಯಾವುದೇ ಕಾರಣಕ್ಕೂ ವರದಿಯಲ್ಲಿ ಸೇರಿಸಬಾರದು ಎಂಬ ನಿರ್ಣಯ ತೆಗೆದುಕೊಳ್ಳಲಾಗುವುದು. ಈಗಾಗಲೆ ಕೇರಳ ಸರಕಾರ ಇದೇ ರೀತಿಯ ಪ್ರಸ್ತಾವನೆ ಸಲ್ಲಿಸಿದ್ದು ಎರಡು ಜಿಲ್ಲೆಯ ಶಾಸಕರು, ಸಂಸದರು ಈ ವಿಷಯದಲ್ಲಿ ಒಮ್ಮತದ ನಿರ್ಣಯ ತೆಗೆದುಕೊಂಡಿದ್ದು ಗ್ರಾಮಸ್ಥರು ಭಯಪಡುವ ಅಗತ್ಯವಿಲ್ಲ ಎಂದು ಅವರು ಹೇಳಿದರು. 
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com