ಮರವಂತೆ: ಒಂದು ಪ್ರದೇಶದ ಅಭಿವೃದ್ಧಿಯಲ್ಲಿ ಅಲ್ಲಿನ ಸಂಪರ್ಕ ವ್ಯವಸ್ಥೆಗಳಾದ ಸೇತುವೆ, ರಸ್ತೆ ಪ್ರಮುಖ ಪಾತ್ರ ವಹಿಸುತ್ತದೆ. ಈ ನಿಟ್ಟಿನಲ್ಲಿ ಸರಕಾರ ಮೂಲ ವ್ಯವಸ್ಥೆಗಳ ಅನುಷ್ಠಾನಕ್ಕೆ ಹೆಚ್ಚಿನ ಒತ್ತು ನೀಡಲಿದೆ. ಜನಪ್ರತಿನಿಧಿಗಳಿಗೆ ಇಚ್ಛಾಶಕ್ತಿ¤ ಇದ್ದಾಗ ಅಭಿವೃದ್ಧಿ ಪೂರಕ ಯೋಜನೆಗಳನ್ನು ಹೆಚ್ಚು ಅನುಷ್ಠಾನಗೊಳಿಸಲು ಸಾಧ್ಯ. ಈ ನಿಟ್ಟಿನಲ್ಲಿ ಶಾಸಕ ಗೋಪಾಲ ಪೂಜಾರಿ ಸರಕಾರದ ವಿವಿಧ ಅನುದಾನಗಳನ್ನು ಜೋಡಣೆ ಮಾಡುವುದರ ಮೂಲಕ ಬೈಂದೂರು ಹಿಂದುಳಿದ ಕ್ಷೇತ್ರ ಎನ್ನುವ ಅಪವಾದವನ್ನು ದೂರ ಮಾಡುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದಾರೆ ಎಂದು ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ವಿನಯ ಕುಮಾರ ಸೊರಕೆ ಹೇಳಿದರು.
ಅವರು ಮರವಂತೆ ಮಹಾರಾಜ ಸ್ವಾಮಿ ದೇವಸ್ಥಾನದ ಬಳಿ ಲೋಕೋಪಯೋಗಿ ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆ ರೂ. 4.95 ಕೋಟಿ ಅನುದಾನದಲ್ಲಿ ಸೌಪರ್ಣಿಕಾ ನದಿಗೆ ಅಡ್ಡಲಾಗಿ ನಿರ್ಮಾಣಗೊಳ್ಳುತ್ತಿರುವ ಸೇತುವೆಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದರು.
ಪ್ರಾಕೃತಿಕ ಸೌಂದರ್ಯ ಹೊಂದಿರುವ ಮರವಂತೆ ಜಿಲ್ಲೆ ನೈಸರ್ಗಿಕ ಪ್ರವಾಸಿ ಕೇಂದ್ರವಾಗಬೇಕು. ಈ ನಿಟ್ಟಿನಲ್ಲಿ ಸರಕಾರ ಮುಂದಿನ ದಿನದಲ್ಲಿ ಹೆಚ್ಚಿನ ಒತ್ತು ನೀಡಲಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಬೈಂದೂರು ಶಾಸಕ ಕೆ. ಗೋಪಾಲ ಪೂಜಾರಿ ಮಾತನಾಡಿ, ಅತ್ಯಂತ ಮಹತ್ವಾಕಾಂಕ್ಷೆಯ ಯೋಜನೆಯಾದ ಮರವಂತೆ-ಪಡುಕೋಣೆ ಸಂಪರ್ಕ ಸೇತುವೆ ನಿರ್ಮಾಣದ ಹಿಂದೆ ಅನೇಕ ಹಿರಿಯರ ಪರಿಶ್ರಮವಿದೆ. ಬೈಂದೂರು ಕ್ಷೇತ್ರದಲ್ಲಿ ಬಂಟ್ವಾಡಿ, ನಾಡ ಸೇರಿದಂತೆ ಇನ್ನೂ ಅನೇಕ ಪ್ರಮುಖ ಸೇತುವೆಗಳ ನಿರ್ಮಾಣದ ನಿರೀಕ್ಷೆಯಿದೆ. ಈ ಬಗ್ಗೆ ಪ್ರಯತ್ನ ನಡೆಯುತ್ತಿದೆ ಎಂದರು.
ಈ ಸಂದರ್ಭ ತಾ.ಪಂ. ಅಧ್ಯಕ್ಷ ಭಾಸ್ಕರ ಬಿಲ್ಲವ, ಜಿ.ಪಂ. ಸದಸ್ಯರಾದ ಬಾಬು ಶೆಟ್ಟಿ, ಅನಂತ ಮೊವಾಡಿ, ಮರವಂತೆ ಗ್ರಾ.ಪಂ. ಅಧ್ಯಕ್ಷ ಕೆ.ವಿ. ಸುಗುಣ, ತಾ.ಪಂ. ಸದಸ್ಯರಾದ ರಾಜು ಪೂಜಾರಿ, ಮಂಜಯ್ಯ ಶೆಟ್ಟಿ, ಶಂಕರ ಶೆಟ್ಟಿ, ಮಂಜು ಬಿಲ್ಲವ, ಉದ್ಯಮಿಗಳಾದ ಸುರೇಶ ಎಸ್. ಪೂಜಾರಿ ಮುಂಬೈ, ಸುರೇಶ ಡಿ. ಪಡುಕೋಣೆ, ಪಾಂಡು ಪೂಜಾರಿ, ಸಿಲ್ವೆಸ್ಟೇರ್ ಅಲ್ಮೇಡಾ, ರಾಜು ದೇವಾಡಿಗ, ಎನ್.ಟಿ. ಪೂಜಾರಿ, ವಿಜಯ ಕೃಷ್ಣ, ಫಾದರ್ ಜೋಸೆಪ್ ಮೊದಲಾದವರು ಉಪಸ್ಥಿತರಿದ್ದರು.
ಸ್ಥಳದಾನ ಮಾಡಿದವರನ್ನು ಈ ಸಂದರ್ಭ ಸಮ್ಮಾನಿಸಲಾಯಿತು.
ಜನಾರ್ದನ ಮರವಂತೆ ಸ್ವಾಗತಿಸಿದರು, ಕಾರ್ಯನಿರ್ವಾಹಕ ಎಂಜಿನಿಯರ್ ಚಂದ್ರಶೇಖರ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಪತ್ರಕರ್ತ ಕೆ.ಸಿ. ರಾಜೇಶ್ ಕಾರ್ಯಕ್ರಮ ನಿರೂಪಿಸಿದರು. ಸತೀಶ ನಾಯ್ಕ ವಂದಿಸಿದರು.
0 comments:
Post a Comment