ಉಪ್ಪುಂದ: ಬಿಜೆಪಿ ಸದಸ್ಯತ್ವ ಅಭಿಯಾನಕ್ಕೆ ಚಾಲನೆ

ಬೈಂದೂರು: ಒಂದೆಡೆ ಕೇಂದ್ರ ಸರ್ಕಾರ ಸಮೃದ್ಧ ಭಾರತ ನಿರ್ಮಾಣದ ಬಗ್ಗೆ ಸಂಕಲ್ಪ ತೊಟ್ಟು, ಅಭಿವೃದ್ಧಿಯೆಡೆಗೆ ಮುನ್ನಡೆ ಯಿಡುತ್ತಿದ್ದರೆ, ಮಗದೊಂದೆಡೆ ರಾಜ್ಯ ಸರ್ಕಾರ ರಾಜ್ಯದಲ್ಲಿರುವ 1 ಕೋಟಿ 23 ಲಕ್ಷ ಪಡಿತರ ಚೀಟಿಗಳಲ್ಲಿ ಸುಮಾರು 35 ಲಕ್ಷ ಬಡವರ ಪಡಿತರ ಚೀಟಿಗಳನ್ನು ಅಮಾನತಿನಲ್ಲಿಟ್ಟಿದೆ. ಅಲ್ಲದೇ ಬಡವರ ಮನೆ ನಿರ್ಮಾಣಕ್ಕೆ 1.20 ಲಕ್ಷ ರೂ. ನೀಡುತ್ತೇವೆ ಎಂದು ಘೋಷಣೆ ಮಾಡಿ, ಇದೂವರೆಗೂ ಮನೆ ನಿರ್ಮಾಣಕ್ಕೆ ಚಿಕ್ಕಾಸು ನೀಡದೆ ಬಡವರ ಮೇಲೆ ಸವಾರಿ ಮಾಡುತ್ತಿದೆ ಎಂದು ಬಿಜೆಪಿ ಹಿಂದುಳಿದ ಮೋರ್ಚಾದ ರಾಜ್ಯಾಧ್ಯಕ್ಷ ಕೋಟ ಶ್ರೀನಿವಾಸ ಪೂಜಾರಿ ಆರೋಪಿಸಿದರು.

ಉಪ್ಪುಂದದಲ್ಲಿ ಬಿಜೆಪಿ ಹಿಂದುಳಿದ ಮೋರ್ಚಾದ ನೇತೃತ್ವದಲ್ಲಿ ನಡೆದ ಬಿಜೆಪಿ ಸದಸ್ಯತ್ವ ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಮೋದಿ ಸರ್ಕಾರ ಸದೃಢ ದೇಶ ಕಟ್ಟಲು ಕಟಿಬದ್ಧವಾಗಿದೆ. ಅಧಿಕಾರ ವಹಿಸಿಕೊಂಡ ಅಲ್ಪ ದಿನದಲ್ಲಿಯೇ ಹಲವು ಬಾರಿ ಡಿಸೇಲ್, ಪೆಟ್ರೋಲ್ ದರ ಇಳಿಕೆಯಾಗಿರುವುದರಿಂದ ಜನ ಸಂತಸಗೊಂಡಿದ್ದಾರೆ. ಇದಕ್ಕೆ ದೇಶದ ನಾನಾ ಭಾಗದಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಗೆಲುವೇ ಸಾಕ್ಷಿ ಎಂದರು. ಕಸ್ತೂರಿ ರಂಗನ್ ವರದಿಯ ಕರಿನೆರಳಿನಿಂದ ಪಶ್ಚಿಮ ಘಟ್ಟ ತಪ್ಪಲಿನ ಜನರು ಕಂಗೆಟ್ಟಿದ್ದಾರೆ. ಈ ಬಗ್ಗೆ ರಾಜ್ಯ ಸರ್ಕಾರ ತನ್ನ ನಿಲುವು ಸ್ಪಷ್ಟಪಡಿಸಬೇಕು ಎಂದು ಅವರು ಆಗ್ರಹಿಸಿದರು. 

ಜಿಪಂ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷೆ ಗೌರಿ ದೇವಾಡಿಗ, ಜಿಪಂ ಸದಸ್ಯ ಬಾಬು ಶೆಟ್ಟಿ, ಉಡುಪಿ ಜಿಲ್ಲಾ ಬಿಜೆಪಿ ಕಾರ್ಯದರ್ಶಿ ಬಿ.ಎಸ್. ಸುರೇಶ ಶೆಟ್ಟಿ, ತಾಪಂ ಸದಸ್ಯರಾದ ಪ್ರಸನ್ನ ಕುಮಾರ, ಮಹೇಂದ್ರ ಪೂಜಾರಿ, ಜಿಲ್ಲಾ ಬಿಜೆಪಿ ಹಿಂದಳಿದ ಮೋರ್ಚಾದ ಅಧ್ಯಕ್ಷ ಶಂಕರ ಪೂಜಾರಿ, ಬೈಂದೂರು ಕ್ಷೇತ್ರ ಬಿಜೆಪಿ ಹಿಂದಳಿದ ಮೋರ್ಚಾದ ಆಧ್ಯಕ್ಷ ಆನಂದ ಖಾರ್ವಿ, ಕ್ಷೇತ್ರ ಬಿಜೆಪಿ ಕಾರ್ಯದರ್ಶಿಗಳಾದ ಸದಾಶಿವ ಪಡುವರಿ, ಸದಾನಂದ ಉಪ್ಪಿನಕುದ್ರು, ಹೇರೂರು ಗ್ರಾ.ಪಂ. ಅಧ್ಯಕ್ಷ ಬಾಬು ಆಚಾರ್ಯ, ರಾಜೇಂದ್ರ ಎಸ್., ಜಯರಾಮ ಶೆಟ್ಟಿ, ನಾಗರಾಜ ಶೇಟ್ ಮತ್ತಿತರರು ಉಪಸ್ಥಿತರಿದ್ದರು. 

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com