ಸುರಭಿ ಜೈಸಿರಿ: 3 ದಿನಗಳ ಸಾಂಸ್ಕೃತಿಕ ವರ್ಷಧಾರೆಗೆ ಚಾಲನೆ

ದೇಶವನ್ನು ಕಲಾ ಭಾರತವನ್ನಾಗಿಸಬೇಕಿದೆ: ಕೆರೆಮನೆ ಶಿವಾನಂದ ಹೆಗಡೆ


ಬೈಂದೂರು: ನಮ್ಮ ದೇಶದಲ್ಲಿ ಕಲೆಗೆ ಬಹಳ ಮಹತ್ವವಿದೆ. ಭಾರತೀಯರಲ್ಲಿನ ಕಲೆಯ ಬಗೆಗಿನ ಆಳವಾದ ಆಸಕ್ತಿ ವಿಸ್ಮಯವನ್ನುಂಟುಮಾಡುವುದಲ್ಲದೇ ಇಲ್ಲಿನ ಪ್ರತಿ ಕಲೆಯೂ ಒಂದೊಂದು ಸಂದೇಶವನ್ನು ನೀಡುತ್ತದೆ ಎಂದು ಇಡಗುಂಜಿ ಮೇಳದ ನಿರ್ದೇಶಕ ಕೆರೆಮನೆ ಶಿವಾನಂದ ಹೆಗಡೆ ಹೇಳಿದರು.
ಅವರು ಬೈಂದೂರಿನ ಸುರಭಿ ಸಂಸ್ಥೆಯ ’ಸುರಭಿ ಜೈಸಿರಿ’ ಮೂರು ದಿನಗಳ ಸಾಂಸ್ಕೃತಿಕ ವರ್ಷಧಾರೆಯನ್ನು ಉದ್ಘಾಟಿಸಿ ಕಲಾ ಸಂದೇಶ ನೀಡುತ್ತಾ ದೇಶವನ್ನು ಆಧ್ಯಾತ್ಮ ಭಾರತ, ರಾಜಕೀಯ ಭಾರತವನ್ನಾಗಿಸಿದ ಹಾಗೆಯೇ ಕಲಾ ಭಾರತವನ್ನಾಗಿಸಬೇಕಿದೆ. ಮಾಧ್ಯಮಗಳು ಕ್ರೀಡೆ, ಸಿನೆಮಾಗಳಿಗೆ ನೀಡುವ ಪ್ರಾಮುಖ್ಯತೆಯನ್ನು ಕಲೆಗೂ ನೀಡಬೇಕಿದೆ ಎಂದರು. 
ಜಿ.ಪಂ ಮಾಜಿ ಅಧ್ಯಕ್ಷ, ತಾ.ಪಂ. ಸದಸ್ಯ ರಾಜು ಪೂಜಾರಿ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಕೊಲ್ಲೂರು ಮೂಕಾಂಬಿಕಾ ದೇವಳದ ಧರ್ಮದರ್ಶಿ ಜಯಾನಂದ ಹೋಬಳಿದಾರ್, ಸೇನೇಶ್ವರ ದೇವಳದ ಧರ್ಮದರ್ಶಿ ಚನ್ನಕೇಶವ ಉಪಧ್ಯಾಯ ಉಪಸ್ಥಿತರಿದ್ದರು.
ಹಿರಿಯ ಮದ್ದಳೆ ವಾದಕ ಹೆಗ್ಗಳೆ ನಾರಾಯಣ ದೇವಾಡಿಗ ಹೊಸಾಡು ಇವರನ್ನು ಸುರಭಿಯ ವತಿಯಿಂದ ಸನ್ಮಾನಿಸಲಾಯಿತು. ಸಂಸ್ಥೆಯ ಯಕ್ಷಗಾನ ಗುರು ಪ್ರಶಾಂತ ಮಯ್ಯ ದಾರಿಮಕ್ಕಿ ಇವರಿಗೆ ಗುರುವಂದನೆ ಸಲ್ಲಿಸಲಾಯಿತು.
ಸುರಭಿಯ ನಿರ್ದೇಶಕ ಗಣಪತಿ ಹೋಬಳಿದಾರ್ ಸಂಸ್ಥೆಯನ್ನು ಪ್ರಾಸ್ತಾವಿಕ ಮಾತುಗಳನ್ನಾಡಿದರು, ಉಪಾಧ್ಯಕ್ಷ ಚಂದ್ರಶೇಖರ್ ವರದಿ ವಾಚಿಸಿದರು. ನಿರ್ದೇಶಕ ಸುಧಾಕರ ಪಿ. ಬೈಂದೂರು ಗುರುವಂದನಾ ಪತ್ರ ವಾಚಿಸಿದರು. ಅಧ್ಯಕ್ಷ ಶಿವರಾಮ ಕೊಠಾರಿ ಸ್ವಾಗತಿಸಿ, ಗಿರೀಶ್ ಪಿ. ಮೇಸ್ತ ಧನ್ಯವಾದಗೈದರು. ಕಾರ್ಯದರ್ಶಿ ಲಕ್ಷಣ ಕೊರಗ ಕಾರ್ಯಕ್ರಮ ನಿರೂಪಿಸಿದರು.

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com