ಸಂಭ್ರಮದಿ ಜರುಗಿದ ಉಪ್ಪ್ಪುಂದ ಮನ್ಮಹಾ ರಥೋತ್ಸವ

ಬೈಂದೂರು: ಇತಿಹಾಸ ಪ್ರಸಿದ್ಧ ಉಪ್ಪ್ಪುಂದ ಶ್ರೀ ದುರ್ಗಾಪರಮೇಶ್ವರಿ ದೇವಳದ ವಾರ್ಷಿಕ ಮನ್ಮಹಾ ರಥೋತ್ಸವ (ಕೊಡಿಹಬ್ಬ) ವು ಸಂಭ್ರಮ ಸಡಗರದಿಂದ ನೆರವೇರಿತು. ಸಹಸ್ತ್ರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ದೇವರ ದರ್ಶನ ಪಡೆದು ಪುನೀತರಾದರು. 

ಬೆಳಗ್ಗೆ 6 ಗಂಟೆಯಿಂದಲೇ ಭಕ್ತರು ಆಗಮಿಸಿ ಸೇವಾ ಕೈಂಕರ್ಯದಲ್ಲಿ ತೊಡಗಿದರು. ಗೋಕರ್ಣದ ತಂತ್ರಿ ಹಿರೇಗಂಗೆ ಗಣಪತಿ ಭಟ್ ನೇತತ್ವದಲ್ಲಿ ದೇವಳದಲ್ಲಿ ಉದಯ ಬಲಿ, ಕ್ಷೇತ್ರ ಬಲಿ, ರಥ ಶುದ್ಧಿ, ಪಂಚಾಮೃತ ಅಭಿಷೇಕ, ವಿಶೇಷ ಭೂತ ಬಲಿ ಸೇರಿದಂತೆ ಹಲವು ಧಾರ್ಮಿಕ ವಿಧಿವಿಧಾನ ನಡೆಯಿತು. ಸಂಜೆ ಗಂಟೆ 5 ರ ಸುಮಾರಿಗೆ ಚಂಡೆವಾದನ, ಡೊಳ್ಳುಕುಣಿತ ಸೇರಿದಂತೆ ವಿಶೇಷ ಕಲಾತಂಡದ ನೃತ್ಯದೊಂದಿಗೆ ರಥೋತ್ಸವ ನಡೆಯಿತು. ಸುಮಾರು 30 ಸಾವಿರಕ್ಕೂ ಹೆಚ್ಚು ಭಕ್ತರು ರಥೋತ್ಸವದಲ್ಲಿ ಪಾಲ್ಗೊಂಡು ರಥಕ್ಕೆ ಬಾಳೆಹಣ್ಣು ಎಸೆಯುವುದರ ಮೂಲಕ ಕೃತಾರ್ಥರಾದರು. 
ಮಧ್ಯಾಹ್ನ ಭಕ್ತರಿಗೆ ದೇವಳದ ವಠಾರದಲ್ಲಿ ಅನ್ನದಾನ ನಡೆಯಿತು. ಸುಮಾರು 3 ಸಾವಿರ ಭಕ್ತರು ಅನ್ನಪ್ರಸಾದ ಸ್ವೀಕರಿಸಿದರು. ಕಂಬದಕೋಣೆ ರೈತರ ಸೇವಾ ಸಹಕಾರಿ ಸಂಘ, ಸ್ಥಳೀಯ ಉದ್ಯಮಿ ಕಮಲಾಕ್ಷ ಪ್ರಭು ಹಾಗೂ ಕಳಿಹೊಳೆ ಕೃಷ್ಣಮೂರ್ತಿ ಮಯ್ಯ ಎಲ್ಲ ಭಕ್ತರಿಗೆ ಉಚಿತವಾಗಿ ತಂಪಾದ ಪಾನೀಯ ವ್ಯವಸ್ಥೆ ಕಲ್ಪಿಸಿದರೆ, ಸಾವಿತ್ರಿ ಕೃಷ್ಣಮೂರ್ತಿ ಎಂಬುವರು ಭಕ್ತರಿಗೆ ಲಡ್ಡು ಸೇವೆ ಮಾಡಿದರು. ಬಳಿಕ ಹರಕೆ ರೂಪದಲ್ಲಿ ಬಂದಂತಹ ಸೀರೆಯನ್ನು ಏಲಂ ಮಾಡಲಾಯಿತು. 

ಜಿ.ಪಂ. ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷೆ ಗೌರಿ ದೇವಾಡಿಗ, ತಾ.ಪಂ. ಸದಸ್ಯ ಪ್ರಸನ್ನ ಕುಮಾರ, ಗ್ರಾ.ಪಂ. ಅಧ್ಯಕ್ಷ ಎಂ. ಜಗನ್ನಾಥ ಉಪ್ಪುಂದ, ಬೆಂದೂರು ವಿಶೇಷ ತಹಸೀಲ್ದಾರ ಹನುಮೇಗೌಡ, ದೇವಳದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಜಯರಾಮ ಶೆಟ್ಟಿ, ಸದಸ್ಯರಾದ ಮುತ್ತಯ್ಯ ಖಾರ್ವಿ, ಗಣೇಶ ಉಪ್ಪುಂದ, ಹರ್ಷವರ್ಧನ ಶೇಟ್, ಮೂಕಾಂಬಿಕಾ ಗಾಣಿಗ, ಪಾರ್ವತಿ ಪೂಜಾರಿ, ಮಂಜುನಾಥ ದೇವಾಡಿಗ, ರಾಘವೇಂದ್ರ ಉಪ್ಪುಂದ, ಪ್ರಧಾನ ಅರ್ಚಕ ಪ್ರಕಾಶ ಉಡುಪ, ಕಾರ್ಯ ನಿರ್ವಹಣಾಧಿಕಾರಿ ಟಿ.ಜಿ.ಸುಧಾಕರ ಉಪಸ್ಥಿತರಿದ್ದರು.


ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com