ಕುಂದಾಪುರ: 80 ಹರೆಯದಲ್ಲಿಯೂ ಅತ್ಯಂತ ಚಟುವಟಿಕೆಯಿಂದ ಕೂಡಿರುವ ಮಾಜಿ ಶಾಸಕ ಬಿ. ಅಪ್ಪಣ್ಣ ಹೆಗ್ಡೆ ಸರ್ವಮಾನ್ಯರು. ತಾಲೂಕಿನಲ್ಲಿ 5001ನೇ ಸ್ವಸಹಾಯ ಸಂಘ ಉದ್ಘಾಟನೆಗೊಳ್ಳುತ್ತಿರುವ ಈ ಸಂದರ್ಭದಲ್ಲಿ ಸಂಘಕ್ಕೆ ಸರ್ವಮಾನ್ಯ ಎಂದು ಹೆಸರಿಸಲಾಗುವುದು. ಇದೊಂದು ಸ್ಮರಣೀಯ ಸಮಾರಂಭ ಎಂದು ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆ ಹೇಳಿದರು.
ವಕ್ವಾಡಿ ಗುರುಕುಲ ವಿದ್ಯಾಸಂಸ್ಥೆಯ ವಠಾರದಲ್ಲಿ ಕುಂದಾಪುರ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವದ್ಧಿ ಯೋಜನೆ ವತಿಯಿಂದ ಹಮ್ಮಿಕೊಂಡ ಎರಡು ದಿನದ ಕೃಷಿ ಉತ್ಸವ ಸಮಾರೋಪ, ಮಾಜಿ ಶಾಸಕ ಬಿ.ಅಪ್ಪಣ್ಣ ಹೆಗ್ಡೆ 80ರ ಹುಟ್ಟುಹಬ್ಬ ಶುಭಾಶಂಸನೆ ಕಾರ್ಯಕ್ರಮ, 5001ನೇ ಪ್ರಗತಿಬಂಧು ಸ್ವಸಹಾಯ ಸಂಘಗಳ ಉದ್ಘಾಟನೆ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕಳೆದ 10 ವರ್ಷಗಳಲ್ಲಿ ಕುಂದಾಪುರ ತಾಲೂಕಿನಲ್ಲಿ ಗ್ರಾಮಾಭಿವದ್ಧಿ ಯೋಜನೆ ಭದ್ರವಾಗಿ ಬೆಳೆಯುವಲ್ಲಿ ಅಪ್ಪಣ್ಣ ಹೆಗ್ಡೆಯವರ ಪಾತ್ರ ಹಿರಿದಾದುದು. ಕುಂದಾಪುರ ತಾಲೂಕಿಗೆ ಕ್ಷೇತ್ರದ ಪ್ರತಿನಿಧಿ ಎಂಬಂತೆ ಅವರಿದ್ದಾರೆ. ಹೆಗ್ಡೆಯವರದ್ದು ವಿಶ್ವಕುಟುಂಬಿ ಚಿಂತನೆ. ಅವರಲ್ಲಿ ಕತಕತೆ ಇಲ್ಲ. ಜೀವನದ ಆದರ್ಶ ಅವರ ಗುಣನಡತೆಯಲ್ಲಿ ಸ್ವಾಭಾವಿಕವಾಗಿ ಬಂದು ಬಿಟ್ಟಿದೆ ಎಂದು ಅವರು ಬಣ್ಣಿಸಿದರು.
ಗ್ರಾಮಾಭಿವದ್ಧಿ ಯೋಜನೆ ವ್ಯವಸ್ಥೆಯಲ್ಲಿ ಕುಂದಾಪುರ ತಾಲೂಕು ಅತ್ಯಂತ ಮುಂಚೂಣಿಯಲ್ಲಿದೆ. 21.93ಕೋಟಿ ಹಣ ಇಲ್ಲಿ ಉಳಿತಾಯ ಆಗಿದೆ. 55 ಸಾವಿರ ಮಂದಿ ಸ್ವಸಹಾಯ ಸಂಘಗಳ ಸದಸ್ಯರಿದ್ದು 58 ಸಾವಿರ ಜೀವನ ಮಧುರ ಪಾಲಿಸಿ ಆಗಿದೆ. ಸ್ವಸಹಾಯ ಸಂಘದ ಮೂಲಕ ಸ್ವಾವಲಂಬಿ ಬದುಕಿಗೆ ಜನರನ್ನು ಕೊಂಡೊಯ್ಯುವ ನಿಟ್ಟಿನಲ್ಲಿ ಯೋಜನೆ ಮಾಡುತ್ತಿರುವ ಪ್ರಯತ್ನಕ್ಕೆ ಸರ್ವರ ಸಹಕಾರ ದೊರೆಯುತ್ತಿದೆ ಎಂದು ಅವರು ಹೇಳಿದರು.
ಇದೇ ಸಂದರ್ಭ ಶ್ರೀ ಕ್ಷೇತ್ರ ಧರ್ಮಸ್ಥಳ ಮತ್ತು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಪರವಾಗಿ ಬಿ.ಅಪ್ಪಣ್ಣ ಹೆಗ್ಡೆಯವರನ್ನು ಡಾ.ಡಿ.ವೀರೇಂದ್ರ ಹೆಗ್ಗಡೆ ಸನ್ಮಾನಿಸಿದರು. ಸಂಘಟಕರ ವತಿಯಿಂದ ಅಭಿನಂದಿಸಲಾಯಿತು. ತಾಲೂಕಿನ 5001ನೇ ಅಮಾಸೆಬೈಲು-ಹೆಂಗವಳ್ಳಿ ಪ್ರಗತಿಬಂಧು ಸ್ವಸಹಾಯ ಸಂಘವನ್ನು ಹೆಗ್ಗಡೆ ಉದ್ಘಾಟಿಸಿದರು.
ಮುಖ್ಯ ಅತಿಥಿ ನಿಟ್ಟೆ ವಿವಿ ಸಹಕುಲಾಧಿಪತಿ ಡಾ.ಎಂ. ಶಾಂತಾರಾಮ ಶೆಟ್ಟಿ ಅಭಿನಂದನಾ ನುಡಿಗಳನ್ನಾಡಿದರು. ಬೆಂಗಳೂರು ರಾಮಕೃಷ್ಣ ಮಠದ ಶ್ರೀ ತ್ಯಾಗೇಶ್ವರಾನಂದ ಸ್ವಾಮೀಜಿ ಅವರು ಅಪ್ಪಣ್ಣ ಹೆಗ್ಡೆ ಪ್ರತಿಷ್ಠಾನದ ವತಿಯಿಂದ ಅಶಕ್ತರಿಗೆ ನೆರವಿನ ಚೆಕ್ ವಿತರಿಸಿದರು. ಒಳಗಿನ ಶ್ರೀಮಂತಿಕೆ ಮುಂದೆ ಬಾಹ್ಯ ಶ್ರೀಮಂತಿಕೆಗೆ ಮೌಲ್ಯವಿಲ್ಲ. ಸದಾಚಾರ, ಸದ್ಭಾವನೆ, ಸತ್ಯತೆ, ನಿಸ್ವಾರ್ಥ, ಪವಿತ್ರತೆ ಮನುಷ್ಯನನ್ನು ಉನ್ನತಕ್ಕೆ ಏರಿಸುತ್ತದೆ. ಅಪ್ಪಣ್ಣ ಹೆಗ್ಡೆಯವರಲ್ಲಿ ಈ ಗುಣ ಕಾಣಬಹುದು ಎಂದರು.
ಇದೇ ಸಂದರ್ಭದಲ್ಲಿ ಗುರುಕುಲ ವಿದ್ಯಾಸಂಸ್ಥೆಯ ನೂತನ ಯಾಜ್ಞವಲ್ಕ್ಯ ಕಟ್ಟಡ ಹಾಗೂ ಕಲಾಂಗಣ ಕಟ್ಟಡವನ್ನು ಲೋಕಾರ್ಪಣೆಗೊಳಿಸಲಾಯಿತು. ಬಿ.ಅಪ್ಪಣ್ಣ ಹೆಗ್ಡೆ ಪ್ರತಿಷ್ಠಾನ ವತಿಯಿಂದ ಶಿಕ್ಷಣತಜ್ಞ ಗದಗದ ಪ್ರೊ.ಬಿ.ಕೆ. ಕೊಣ್ಣೂರು ಯಲ್ಲಟ್ಟಿಯವರಿಗೆ ಬಿ.ಅಪ್ಪಣ್ಣ ಹೆಗ್ಡೆ ಶಿಕ್ಷಣ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಬಿ. ಅಪ್ಪಣ್ಣ ಹೆಗ್ಡೆ ಮತ್ತು ನಾಗರತ್ನ ದಂಪತಿ, ಮಾಜಿ ಸಚಿವ ಅಮರನಾಥ ಶೆಟ್ಟಿ, ಬಾಂಡ್ಯ ಎಜುಕೇಶನಲ್ ಟ್ರಸ್ಟ್ನ ಟ್ರಸ್ಟಿ ಬಾಂಡ್ಯ ಸುಭಾಶ್ಚಂದ್ರ ಶೆಟ್ಟಿ ಉಪಸ್ಥಿತರಿದ್ದರು. ಗುರುಕುಲ ವಿದ್ಯಾಸಂಸ್ಥೆಯ ಮ್ಯಾನೆಜಿಂಗ್ ಟ್ರಸ್ಟಿ ಅನುಪಮಾ ಎಸ್. ಶೆಟ್ಟಿ ಸ್ವಾಗತಿಸಿದರು. ಬಸ್ರೂರು ಅಪ್ಪಣ್ಣ ಹೆಗ್ಡೆ ಪ್ರತಿಷ್ಠಾನದ ಅಧ್ಯಕ್ಷ ರಾಮ್ಕಿಶನ್ ಹೆಗ್ಡೆ ವರದಿ ವಾಚಿಸಿದರು. ಹಳ್ನಾಡು ಪ್ರತಾಪಚಂದ್ರ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು. ಪ್ರೊ.ಕೆ. ರಾಧಾಕಷ್ಣ ಶೆಟ್ಟಿ ವಂದಿಸಿದರು.
0 comments:
Post a Comment