ಕೊಲ್ಲೂರು ಸಾಹಿತ್ಯ ಸಮ್ಮೇಳನಕ್ಕೆ ತೆರೆ

ಕೊಲ್ಲೂರು: ಪ್ರಾಥಮಿಕ ಶಿಕ್ಷಣ ಮಾತಭಾಷೆಯಲ್ಲಿ ಕಡ್ಡಾಯಗೊಳಿಸಬೇಕು ಎಂಬ ಕೂಗಿಗೆ ವಿರುದ್ಧವಾಗಿ ಸುಪ್ರೀಂ ಕೋರ್ಟ್ ತೀರ್ಪು ನೀಡಿರುವುದು ಕನ್ನಡ ಭಾಷೆಗೆ ಮರಣಶಾಸನವಾಗಿದೆ. ಪ್ರಾಥಮಿಕ ಶಿಕ್ಷಣದಲ್ಲಿ ಕನ್ನಡ ಮರೆಯಾದರೆ ಸುಸಂಸ್ಕೃತ ಭಾಷೆ ಉಳಿಯಲು ಸಾಧ್ಯವಿಲ್ಲ. ಇದಕ್ಕಾಗಿ ಸಂವಿಧಾನದಲ್ಲಿ ತಿದ್ದುಪಡಿ ಮಾಡವ ಅಗತ್ಯವಿದೆ. ಈ ಬಗ್ಗೆ ಮುಖ್ಯಮಂತ್ರಿಗಳು ದೇಶದ ಎಲ್ಲಾ ರಾಜ್ಯದ ಮುಖ್ಯಮಂತ್ರಿಗಳಿಗೆ ಪತ್ರ ಬರೆದು ಅಭಿಪ್ರಾಯ ಕೇಳಿರುವುದು ಪ್ರಶಂಸನೀಯವಾಗಿದೆ, ಸಂವಿಧಾನ ತಿದ್ದುಪಡಿಯಿಂದ ಇದಕ್ಕೆ ಪರಿಹಾರ ಕಂಡುಕೊಳ್ಳಲು ಸಾಧ್ಯವಿದೆ ಎಂದು ರಾಜ್ಯ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಪುಂಡಲೀಕ ಹಾಲಂಬಿ ಹೇಳಿದರು. ಕೊಲ್ಲೂರಿನಲ್ಲಿ ನಡೆದ ಕುಂದಾಪುರ ತಾಲೂಕು 14ನೇ ಸಾಹಿತ್ಯ ಸಮ್ಮೇಳನದಲ್ಲಿ ಸಾಧಕರನ್ನು ಸನ್ಮಾನಿಸಿ ಮಾತನಾಡಿದರು. 

ಕುಂದಾಪುರ ತಾಲೂಕು ಅಪ್ಪಟ್ಟ ಕನ್ನಡಿಗರ ತಾಲೂಕಾಗಿದ್ದು, ಇಲ್ಲಿನ ಕುಂದಾಪ್ರ ಭಾಷೆಯಲ್ಲಿ ಹಳಗನ್ನಡ ಪದವಿದೆ. ಇಂದು ಸಮ್ಮೇಳನಗಳು ಯಾಕೆ ನಡೆಸಬೇಕು ಎಂಬ ಜಿಜ್ಞಾಸೆ ಹಲವರಲ್ಲಿ ಕಾಡುತ್ತಿದೆ. ಸಮ್ಮೇಳದಿಂದಾಗಿ ಕನ್ನಡವನ್ನು ಜಾಗತಗೊಳಿಸುವ ಕೆಲಸವಾಗುತ್ತಿದೆ. ಇಲ್ಲಿನ ಎಲ್ಲಾ ನಿರ್ಣಯಗಳನ್ನು ನಾಡು ನುಡಿಯ ಹಿತಕ್ಕೆ ಬದ್ದವಾಗಿದ್ದು ಈ ನಿರ್ಣಯಗಳ ಮೂಲಕ ಪ್ರಭುತ್ವಕ್ಕೆ ಒತ್ತಡ ಹಾಕುವ ಕೆಲಸವಾಗುತ್ತಿದೆ. ಮುಂದಿನ ರಾಜ್ಯ ಸಾಹಿತ್ಯ ಸಮ್ಮೇಳನ ಜೈನರ ಕಾಶಿ ಶ್ರವಣಬೆಳಗೋಳದಲ್ಲಿ ನಡೆಯಲಿದ್ದು, ಕನ್ನಡ ಸಾಹಿತ್ಯಕ್ಕೆ ಜೈನರಾದ ರನ್ನ, ಪಂಪ, ಜನ್ನ ರ ಕೊಡುಗೆ ವಿಶಿಷ್ಠವಾದುದು ಎಂದರು. 

ಕನ್ನಡ ಭಾಷೆಗೆ ಸುಮಾರು ಎರಡು ಸಾವಿರ ವರ್ಷದ ಇತಿಹಾಸವಿದ್ದು ದೇಶದ 30 ಭಾಷೆಗಳಲ್ಲಿ ಅದ್ಭುತ ಸಾಹಿತ್ಯ ಹೊಂದಿರುವ ಭಾಷೆಗಳಲ್ಲಿ ಒಂದಾಗಿದೆ. ಎಂಟು ಜ್ಞಾನಪೀಠ ಪ್ರಶಸ್ತಿಯನ್ನು ಪಡೆದ ಈ ಭಾಷೆಗೆ 13ನೇ ಶತಮಾನದಲ್ಲಿ ಬಂದಂತಹ ಆಂಗ್ಲ ಭಾಷೆಯಿಂದ ಆತಂಕ ಎದುರಾಗಿರುವುದು ದುರಂತದ ಸಂಗತಿಯಾಗಿದೆ ಎಂದರು.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com