ವಕ್ವಾಡಿ ಪರಿಸರದಲ್ಲಿ ಕಾಣಿಸಿಕೊಂಡ ಚಿರತೆ

ವಕ್ವಾಡಿ:  ಗ್ರಾಮದ ಕುರುವಡಿ ಎಂಬಲ್ಲಿ ರಸ್ತೆ ಪಕ್ಕದ ಗೇರು ಮರವೊಂದರಲ್ಲಿ ಕುಳಿತ ಚಿರತೆಯಿಂದಾಗಿ ದಾರಿಹೋಕರು, ಪರಿಸರದ ನಾಗರಿಕರು ಬೆಚ್ಚಿಬಿದ್ದ ಘಟನೆ ಅಪರಾಹ್ನ ನಡೆದಿದೆ. ವಕ್ವಾಡಿಯಿಂದ ಕೆದೂರು ಬಡಾಬೆಟ್ಟುವಿಗೆ ಹೋಗುವ ದಾರಿಯ ಎಡಬಲದಲ್ಲಿ ಹುಲುಸಾಗಿ ಬೆಳೆದುನಿಂತಿರುವ ಗೇರು ಪ್ಲ್ಯಾಂಟೇಶನ್‌ನ ಗೇರು ಮರವೊಂದರಲ್ಲಿ ಚಿರತೆ ನಿರ್ಭೀತಿಯಿಂದ ಕುಳಿತಿರುವುದನ್ನು ಕಂಡ ದಾರಿಹೋಕರು ಭೀತರಾಗಿ ಕೆಲಹೊತ್ತು ರಸ್ತೆಯಲ್ಲೇ ಕಾಲಕಳೆಯುವಂತಾಯಿತು. ಗಾತ್ರದಲ್ಲಿ ಭರ್ಜರಿಯಾಗಿರುವ ಚಿರತೆಯನ್ನು ನೋಡಲು ಸಮೀಪದ ಊರಿನಿಂದ ಮಹಿಳೆಯರು, ಮಕ್ಕಳು ಆಗಮಿಸಿದ್ದರು. ತಾನು ಮಲಗಿದ ಮರದ ಸಮೀಪ ನಾಗರಿಕರ ಸಂಖ್ಯೆ ಹೆಚ್ಚುತ್ತಿದ್ದಂತೆ ಮರದಿಂದ ಕೆಳಗಿಳಿದ ಚಿರತೆ ಗೇರು ತೋಪಿನೊಳಗೆ ನೆಗೆದು ಮರೆಯಾಗಿದೆ. 
      ಚಿರತೆ ಪ್ರತ್ಯಕ್ಷವಾಗಿರುವ ಹಿನ್ನೆಲೆಯಲ್ಲಿ ಕುಂದಾಪುರ ಉಪ ವಲಯ ಅರಣ್ಯಾಕಾರಿಗಳಾದ ದಿಲೀಪ್‌ಕುಮಾರ್, ಗುರುರಾಜ್ ಕಾವ್ರಾಡಿ ಮತ್ತು ಸಿಬ್ಬಂದಿಗಳು ಸ್ಥಳಕ್ಕೆ ಭೇಟಿ ನೀಡಿ ಕಾರ್ಯಾಚರಣೆ ಆರಂಭಿಸಿದ್ದಾರೆ. ಚಿರತೆ ಸೆರೆಹಿಡಿಯಲು ಆಯ ಕಟ್ಟಿನ ಸ್ಥಳಗಳಲ್ಲಿ ಬೋನು ಇರಿಸಿದ್ದಾರೆ. ಚಿರತೆಗೋಸ್ಕರ ಶೋಧ ಕಾರ್ಯ ಮುಂದುವರಿಸಲಾಗಿದ್ದು ಸ್ಥಳೀಯರಾದ ಕರುಣಾಕರ ಶೆಟ್ಟಿ, ಕೆದೂರು ಸತೀಶ ಶೆಟ್ಟಿ, ವಕ್ವಾಡಿ ಸತೀಶ್ ಶೆಟ್ಟಿ, ಸುಕೇಶ ಶೆಟ್ಟಿ, ರತ್ನಾಕರ ಶೆಟ್ಟಿ, ರವಿ ಶೆಟ್ಟಿ ವಕ್ವಾಡಿ, ದಿನೇಶ್ ಶೆಟ್ಟಿ ಬೇಳೂರು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದಾರೆ. 
       ಈ ಭಾಗದಲ್ಲಿ ಸಂಚರಿಸುತ್ತಿರುವ ಚಿರತೆ ಮರಿ ಇಟ್ಟಿರುವ ಸಾಧ್ಯತೆ ಇರುವುದರಿಂದ ಈ ಸಂದರ್ಭದಲ್ಲಿ ನಾಗರಿಕರು ಸೂಕ್ತ ಮುನ್ನೆಚ್ಚರಿಕೆ ವಹಿಸಬೇಕು ಎಂದು ಅರಣ್ಯಾಕಾರಿಗಳು ತಿಳಿಸಿದ್ದಾರೆ. ಈ ವೇಳೆಯಲ್ಲಿ ಚಿರತೆ ಕೊಂಚ ಉಗ್ರ ಸ್ವರೂಪ ಹೊಂದಿರುತ್ತವೆ. ಚಿರತೆ ಓಡಾಟ ಕಂಡುಬಂದಲ್ಲಿ ತಕ್ಷಣ ಇಲಾಖೆಗೆ ಗ್ರಾಮಸ್ಥರು ಮಾಹಿತಿ ನೀಡುವಂತೆ ಅಕಾರಿಗಳು ಮನವಿ ಮಾಡಿಕೊಂಡಿದ್ದಾರೆ.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com