ಸಾಕ್ಷಿಪ್ರಜ್ಞೆ ಮೂಡಿಸಿದ ಪತ್ರಿಕೆ ’ಸಾಕ್ಷಿ’: ಕಾಯ್ಕಿಣಿ

ಬೈಂದೂರು: ಕನ್ನಡ ಸಾಹಿತ್ಯದ ದೊಡ್ಡ ಕುಟುಂಬಕ್ಕೆ ಬೆರಳ ತುದಿ ಹಿಡಿದು ಕಿರಿಯರನ್ನು ಕರೆತಂದ, ಎಲ್ಲರೊಳಗೊಂದು ಸಾಕ್ಷಿಪ್ರಜ್ಞೆಯನ್ನು ಮೂಡಿಸಿದ ಕೀರ್ತಿ ಗೋಪಾಲಕೃಷ್ಣ ಅಡಿಗರ ’ಸಾಕ್ಷಿ’ ತ್ರೈಮಾಸಿಕ ಪತ್ರಿಕೆಗೆ ಸಲ್ಲುತ್ತದೆ. ಎಂದು ಸಾಹಿತಿ ಜಯಂತ ಕಾಯ್ಕಿಣಿ ಹೇಳಿದರು. 
      ಅವರು ಸುರಭಿ ಬೈಂದೂರು ಇಲ್ಲಿನ ಸರಕಾರಿ ಪದವಿಪೂರ್ವ ಕಾಲೇಜಿನ ಮೊಗೇರಿ ಗೋಪಾಲಕೃಷ್ಣ ಅಡಿಗ ರಂಗಮಂಟಪದಲ್ಲಿ ಹಮ್ಮಿಕೊಂಡ ’ಅಡಿಗ ಸಾಹಿತ್ಯೋತ್ಸವ’ ಕಾರ್ಯಕ್ರಮದ ಎರಡನೇ ದಿನ ಸಾಕ್ಷಿ ಪತ್ರಿಕೆಯ ಕುರಿತು ಮಾತನಾಡಿದರು.
     ಸಾಕ್ಷಿ ಪತ್ರಿಕೆ ಕೇವಲ ಸಾಹಿತ್ಯಕ್ಕಷ್ಟೇ ಸೀಮಿತವಾಗಿರದೇ ವಿವಿಧ ಕ್ಷೇತ್ರಗಳಿಗೆ ಸಂಬಂಧಿಸಿದ ಲೇಖನಗಳು ಅದರಲ್ಲಿ ಪ್ರಕಟಗೊಳ್ಳುತ್ತಿದ್ದವು. ನಾಡಿನ ನೂರಾರು ಪ್ರಮುಖ ಲೇಖಕರು, ಕವಿಗಳ ಮೊದಲ ಬರಹಗಳು ಸಾಕ್ಷಿ ಪತ್ರಿಕೆಯಲ್ಲಿ ಪ್ರಕಟಗೊಳ್ಳುತ್ತಿದ್ದವು. ’ಸಾಕ್ಷಿ’ ಕನ್ನಡ ಸಾಹಿತ್ಯ ಗಂಗೆಯ ಮುಂದಿನ ಮುಖ್ಯಧಾರೆಗಳ ಗಂಗೋತ್ರಿಯಾಗಿತ್ತು ಎಂದು ಅವರು ಬಣ್ಣಿಸಿದರು.
     ಸಾಹಿತ್ಯೋತ್ಸವದ ಸರ್ವಾಧ್ಯಕ್ಷ ಡಾ| ಕೆ. ಎಸ್. ನಿಸಾರ್ ಅಹಮ್ಮದ್ ಮಾತನಾಡಿ ಅಡಿಗರ ’ಸಾಕ್ಷಿ’ ಕನ್ನಡದ ಮಟ್ಟಿಗೆ ಒಂದು ವಿಶಿಷ್ಟ ಪ್ರಯತ್ನವಾಗಿತ್ತು ಎಂದರು.
      ನಂತರ ನಡೆದ ವಿಚಾರಗೋಷ್ಠಿಯಲ್ಲಿ ಅಡಿಗರ ಗದ್ಯ ಸಾಹಿತ್ಯದ ಕುರಿತು ಶಿವಮೊಗ್ಗ ಸಹ್ಯಾದ್ರಿ ಕಾಲೇಜಿನ ಪ್ರಾಧ್ಯಾಪಕಿ ಡಾ. ಶುಭಾ ಮರವಂತೆ, ಕಾರ್ಕಳ ಭುವನೇಂದ್ರ ಕಾಲೇಜಿನ ಪ್ರಾಧ್ಯಾಪಕ ಡಾ. ಅರುಣಕುಮಾರ್, ಕುಂದಾಪುರ ಭಂಡಾರ್‌ಕಾರ‍್ಸ್ ಕಾಲೇಜಿನ ಪ್ರಾಧ್ಯಾಪಕಿ ಡಾ. ಪಾರ್ವತಿ ಜಿ. ಐತಾಳ್, ಮಾತನಾಡಿದರು.
ಡಾ. ನಾ. ದಾಮೋದರ ಶೆಟ್ಟಿ, ಡಾ. ಪಾರ್ವತಿ ಜಿ. ಐತಾಳ್, ಡಾ. ಪ್ರಶಾಂತ ನಾಯಕ್, ಪೂರ್ಣಿಮಾ ಸುರೇಶ್, ಡುಂಡಿರಾಜ್ ಅಡಿಗರ ಕವನಗಳನ್ನು ವಾಚಿಸಿದರು. ಮಂಜುನಾಥ ಶಿರೂರು ಕಾರ್ಯಕ್ರಮ ನಿರೂಪಿಸಿದರು.

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com