ಹೊಸತನದೊಂದಿಗೆ ಮತ್ತೆ ಆಳ್ವಾಸ್ ವಿರಾಸತ್

ಮೂಡುಬಿದಿರೆ: ಮುಸ್ಸಂಜೆಯ ಮನದ ಮೌನಕ್ಕೆ ಗಾನದ ಅಲಾಪನೆ, ದಣಿವಾದ ತನುವಿಗೆ ನರ್ತನದ ರೋಮಾಂಚನ ಲೇಪನದೊಂದಿಗೆ ಆಳ್ವಾಸ್ ವಿರಾಸತ್ ಮತ್ತೆ ಬಂದಿದೆ. 

ಶೋಭಾವನದ ವಿರಾಸತ್ ಶೋಭೆಯ ನೆನಪುಗಳನ್ನು ಹಿಡಿದು, ವಿಶ್ವನುಡಿಸಿರಿ `ವಿರಾಸತ್’ನ ಸಾರ್ಥಕತೆಗೆ ಕೈಗನ್ನಡಿಯಾಗಿ ಆಳ್ವಾಸ್ ನುಡಿಸಿರಿ 2015 ವಿದ್ಯಾಗಿರಿಯ ಪ್ಯಾಲೇಸ್ ಗ್ರೌಂಡ್‍ನಲ್ಲಿ ಮೂಡಿಬರಲಿದೆ. ಶಾಸ್ತೀಯ ನೃತ್ಯ, ಸಂಗೀತದ ಹಿತದೊಂದಿಗೆ ಮೈ-ಮನಸ್ಸುಗಳನ್ನು ಹದಗೊಳಿಸಿ ದೇಶಿಯ ತೇಜಸ್ಸು ಆಳ್ವಾಸ್ ವಿರಾಸತ್ ಮೂಲಕ ಜ.8ರಂದು ಮೂಡುಬಿದರೆಯಲ್ಲಿ ಪಸರಲಿದೆ. 

ಕಳೆದ ಎರಡು ದಶಕಗಳಲ್ಲಿ ಮಿಜಾರಿನ ಶೋಭಾವನದಲ್ಲಿ ಹೆಚ್ಚು ವಿರಾಸತ್‍ಗಳು ನಡೆದಿವೆ. ಇಲ್ಲಿನ ಪ್ರಕೃತಿ ಸೌಂದರ್ಯ, ಪ್ರಶಾಂತ ವಾತಾವರಣ, ವಿಶಾಲವಾದ ಎತ್ತರ ಪ್ರದೇಶ ಹೀಗೆ ಹಲವಾರು ಕಾರಣಗಳಿಂದ ವಿರಾಸತ್ ಶೋಭೆ ಹೆಚ್ಚಾಯಿತು. ಮುಸ್ಸಂಜೆಯ ಕ್ಷಣ ಶೋಭಾವನ ಹಾಗೂ ವಿರಾಸತ್ ಅನ್ನು ಮತ್ತಷ್ಟು ಸುಂದರಗೊಳಿಸುತ್ತಿತು. ಮೂಡುಬಿದರೆಯ ಸಾವಿರಕಂಬದ ಬಸದಿಯಲ್ಲಿ ಹಿಂದೆ ನಡೆಯುತ್ತಿದ್ದ ವಿರಾಸತ್ ಅನ್ನು ಡಾ.ಎಂ.ಮೋಹನ್ ಆಳ್ವ ಆಳ್ವಾಸ್ ವಿರಾಸತ್ ಮೂಲಕ ಶೋಭಾವನದಲ್ಲಿ ಆಯೋಜಿಸಿದ್ದರು. ಸಾವಿರ ಕಂಬದ ಬಸದಿಯ ಧಾರ್ಮಿಕ ವಾತಾವರಣದಿಂದ ಪ್ರಕೃತಿ ಸೌಂದರ್ಯದ ಶೋಭಾವನದಲ್ಲಿ ನಡೆದುಬಂದ ವಿರಾಸತ್ ನಂತರ ಹಲವಾರು ಪ್ರಯೋಗಗಳಿಗೆ ನಾಂದಿಯಾಯಿತು. 

ಶೋಭಾವನದಲ್ಲಿ ನೆಲೆಕಂಡು ಜನಮನ ಸೆಳೆದ ವಿರಾಸತ್ ಅನ್ನು ನುಡಿಸಿರಿಯ ದಶಮಾನೋತ್ಸವದ ಸಂದರ್ಭದಲ್ಲಿ ವಿದ್ಯಾಗಿರಿಯಲ್ಲಿ ಹಮ್ಮಿಕೊಳ್ಳಲಾಯಿತು. ವಿದ್ಯಾಗಿರಿಯಲ್ಲಿ ನಡೆದ ಮೊದಲ ವಿರಾಸತ್ ಎಂಬ ಹೆಗ್ಗಳಿಕೆಯೊಂದಿಗೆ ಸಾರ್ಥಕ ಪ್ರಯತ್ನವಾಗಿ ಮೂಡಿಬಂದಿತು. ಕನ್ನಡ ನಾಡು-ನುಡಿಯ ಸಮ್ಮೇಳನದಲ್ಲಿ ರಾಷ್ಟ್ರೀಯ ಸಾಂಸ್ಕøತಿಕ ಲೋಕದ ಸಮ್ಮಿಲನಗೊಂಡಿತು. ಶೋಭಾವನದಲ್ಲಿನ ವಿರಾಸತ್ ಅನ್ನು ವಿದ್ಯಾಗಿರಿಯಲ್ಲಿ ಮುಂದುವರಿಸಲು ವಿಶ್ವನುಡಿಸಿರಿ ಸೇತುವೆಯಾಯಿತು. 

ಆಳ್ವಾಸ್ ಸಂಸ್ಥೆಯ ಬಹುತೇಕ ಕಾಲೇಜುಗಳಿರುವ ವಿದ್ಯಾಗಿರಿಯಲ್ಲಿ ನವೆಂಬರ್ ತಿಂಗಳಲ್ಲಿ 11ನೇ ವರ್ಷದ ನುಡಿಸಿರಿ ನಡೆದಿದ್ದು, ಎರಡು ತಿಂಗಳೊಳಗೆ ಮತ್ತೆ ಇಲ್ಲಿ ಸಾಂಸ್ಕøತಿಕ ಲೋಕ ಸೃಷ್ಠಿಯಾಗಿದೆ. ಮೂಡುಬಿದರೆಯಲ್ಲೇ ಎತ್ತರ ಪ್ರದೇಶದಲ್ಲಿರುವ ಮೈದಾನವಾಗಿರುವ ಪ್ಯಾಲೇಸ್ ಗ್ರೌಂಡ್ 2015ರ ವಿರಾಸತ್ ಅನ್ನು ಇದಿರುಗೊಳ್ಳುತ್ತಿದೆ. ಸುಮಾರು 20 ಎಕರೆ ಸ್ಥಳದಲ್ಲಿ ಪ್ಯಾಲೇಸ್ ಗ್ರೌಂಡ್ ನಿರ್ಮಿಸಲಾಗಿದೆ. ವಿಶಾಲವಾದ ಈ ಮೈದಾನದಲ್ಲಿ ನಿಂತರೆ ಮೂಡುಬಿದರೆ ನಗರ ಸಹಿತ ಸುತ್ತಮುತ್ತಲಿನ ಪ್ರಕೃತಿ ಸೌಂದರ್ಯ ಕಾಣಬಹುದಾಗಿದೆ. ಎರಡು ಬೃಹತ್ ಬಂಡೆಕಲ್ಲುಗಳ ಕೊಣಾಜೆಕಲ್ಲು ಬೆಟ್ಟವೂ ಇಲ್ಲಿ ಸ್ಪಷ್ಟವಾಗಿ ಕಾಣಸಿಗುತ್ತದೆ. ಮೈದಾನದ ಇನ್ನೊಂದು ಬದಿಯಲ್ಲಿ ಹಾವು ಹರಿದಾಡಿದಂತೆ ಕಾಣುವ ಮಂಗಳೂರು-ರಾಷ್ಟ್ರೀಯ ಹೆದ್ದಾರಿಯನ್ನು ಹೊಂದಿರುವ ಹಂಡೇಲು ಸುತ್ತು ಪ್ರದೇಶ, ಅದರ ಪಕ್ಕದಲ್ಲಿರುವ ಹೊಲ-ಗದ್ದೆಗಳು ಕಾಣಸಿಗುತ್ತದೆ. 

ಶೋಭಾವನದ ವಿರಾಸತ್‍ನ ಪ್ರಕೃತಿ ಸೌಂದರ್ಯ ನೆನಪಿನೊಂದಿಗೆ, ಹೊಸತನದ ಹೊಳಪಿನೊಂದಿಗೆ ಪ್ಯಾಲೇಸ್ ಗ್ರೌಂಡ್ ವಿರಾಸತ್‍ಗೆ ಸಜ್ಜಾಗುತ್ತಿದೆ. 

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com