ಜ.8-11: ಆಳ್ವಾಸ್‌ ವಿರಾಸತ್‌

ಮಂಗಳೂರು: ಆಳ್ವಾಸ್‌ ಶಿಕ್ಷಣ ಪ್ರತಿಷ್ಠಾನದ ಆಶ್ರಯದಲ್ಲಿ ಆಳ್ವಾಸ್‌ ವಿರಾಸತ್‌-2015 ಜ. 8ರಿಂದ 11ರ ತನಕ ವಿದ್ಯಾಗಿರಿಯ ಸುಂದರಿ ಆಳ್ವ ಆವರಣದಲ್ಲಿರುವ ಬೆಟ್ಟದ ಮೇಲಿನ ವಿಶಾಲ ಮೈದಾನ ಆಳ್ವಾಸ್‌ ಪ್ಯಾಲೇಸ್‌ ಗ್ರೌಂಡ್‌ನ‌ಲ್ಲಿ ನಡೆಯಲಿದೆ ಎಂದು ಪ್ರತಿಷ್ಠಾನದ ಅಧ್ಯಕ್ಷ ಡಾ| ಎಂ. ಮೋಹನ ಆಳ್ವ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

8ರಂದು ಸಂಜೆ 5.15ರಿಂದ 5.30ರ ತನಕ ಸಾಂಪ್ರದಾಯಿಕ ಮೆರವಣಿಗೆಯಲ್ಲಿ ಅತಿಥಿಗಳನ್ನು ವೇದಿಕೆಗೆ ಕರೆತರಲಾಗುವುದು. 5.30ರಿಂದ ಸಭಾ ಕಾರ್ಯಕ್ರಮ ನಡೆಯಲಿದ್ದು, ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಅವರು ವಿರಾಸತ್‌ ಉದ್ಘಾಟಿಸುವರು. ನಿಟ್ಟೆ ಎಜುಕೇಶನ್‌ ಟ್ರಸ್ಟ್‌ನ ಅಧ್ಯಕ್ಷ ಎನ್‌. ವಿನಯ್‌ ಹೆಗ್ಡೆ ಅಧ್ಯಕ್ಷತೆ ವಹಿಸುವರು. ವಿವಿಧ ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಸರೋದ್‌ ಮಾಂತ್ರಿಕ ಪದ್ಮವಿಭೂಷಣ ಉಸ್ತಾದ್‌ ಅಮ್ಜದ್‌ ಆಲಿಖಾನ್‌ ಅವರಿಗೆ ಈ ಬಾರಿಯ ಆಳ್ವಾಸ್‌ ವಿರಾಸತ್‌ - 2015 ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದು ಅವರು ವಿವರಿಸಿದರು.

ಶಾಸ್ತ್ರೀಯ ಸಂಗೀತ, ನೃತ್ಯ, ಜನಪದ ಸಂಗೀತ, ರಾಜಸ್ಥಾನದ ಶಾಸ್ತ್ರೀಯ ಹಾಗೂ ಜನಪದ ಕಲಾ ತಂಡದ ಡೆಸರ್ಟ್‌ ಸ್ಟೋರ್ಮ್, ಶ್ರೀರಾಮ ನಾಟಕ ನಿಕೇತನ, ಆಂಧ್ರಪ್ರದೇಶದ 25 ವಿದ್ಯಾರ್ಥಿಗಳ ವಿಶೇಷ ನೃತ್ಯ ಪ್ರದರ್ಶನ, ಪಂಜಾಬಿ ನೃತ್ಯ ವೈವಿಧ್ಯ, ಗುಜರಾತಿ ನೃತ್ಯ ವೈವಿಧ್ಯ, ಸ್ಟ್ರಿಂಗ್‌ ಸ್ಟ್ರಕ್‌-ಪೂರ್ವ-ಪಶ್ಚಿಮ ಅಪೂರ್ವ ವಾದನ ಸಂಗಮ, ಮೈಸೂರು ಮಂಜುನಾಥ್‌ ತಂಡದ 'ನಾದಲೋಕ' ಸೇರಿದಂತೆ ವಿವಿಧ ಕಾರ್ಯಕ್ರಮಗಳು ನಡೆಯಲಿವೆ ಎಂದು ಅವರು ತಿಳಿಸಿದರು.

9ರಂದು ರಾತ್ರಿ 8.30ಕ್ಕೆ ಕಲೈಮಾಮಣಿ ಶಿವಮಣಿ (ವಿಶ್ವದ ವಿವಿಧ ತಾಳವಾದ್ಯಗಳು), ಬಾಲ ಭಾಸ್ಕರ್‌ (ವಯೋಲಿನ್‌) ಮತ್ತು ಸ್ಟೀಫನ್‌ ದೇವಸ್ಸೀ (ಕೀಬೋರ್ಡ್‌) ಅವರಿಂದ ಮಹಾಲೀಲ, 10ರಂದು ಮುಂಬಯಿಯ 30 ಮಂದಿ ಅಂಧ ಕಲಾವಿದರಿಂದ ಅಖೀಯೋಂ ಕೆ ಝರೋಂಕೋ ಸೆ ಎಂಬ ಚಿತ್ರಗೀತೆಗಳ ರಸಸಂಜೆ, ಹೊಸದಿಲ್ಲಿಯ ಅಂಗವಿಕಲ ಕಲಾವಿದರ ವ್ಹೀಲ್‌ ಚಯರ್‌ ಸಾಹಸ ನೃತ್ಯ ಪ್ರದರ್ಶನ 'ಮಿರಾಕಲ್ಸ್‌' ಆನ್‌ ವ್ಹೀಲ್ಸ್‌' ಸಾಂಸ್ಕೃತಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಮೋಹನ್‌ ಆಳ್ವ ವಿವರಿಸಿದರು.

11ರಂದು ರಾತ್ರಿ 8.30ಕ್ಕೆ ಕರ್ನಾಟಕದ ಆಯ್ದ 30 ಯುವ ಪುರುಷ ನೃತ್ಯ ಕಲಾವಿದರಿಂದ 'ನೃತ್ಯಪುರುಷಸಂಯೋಗ' ಭರತನಾಟ್ಯ ವೈವಿಧ್ಯವಿದೆ. ಬಳಿಕ ಆಳ್ವಾಸ್‌ ಕಾಲೇಜಿನ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಏರ್ಪಡಿಸಲಾಗಿದೆ. ನಾಲ್ಕೂ ದಿನಗಳಲ್ಲಿ ಪಂಜಾಬಿನ ಫತೇ ಆರ್ಮಿ ಬ್ಯಾಂಡ್‌ ಕಲೆಯ ವಿಶೇಷ ಪ್ರದರ್ಶನ ಆಯೋಜಿಸಲಾಗಿದೆ. ವರ್ಣಮಯ ನೀರ ಝರಿ ನಿರ್ಮಿಸಲಾಗಿದೆ. ಅಲ್ಲದೇ ಆವರಣದಲ್ಲಿ ಪುಷ್ಪ ಪ್ರದರ್ಶನ ಏರ್ಪಡಿಸಲಾಗುವುದು ಎಂದು ಅವರು ತಿಳಿಸಿದರು.

ಸಂಸ್ಥೆಯ ಜೀವನ್‌ರಾಂ ಸುಳ್ಯ, ವೇಣುಗೋಪಾಲ್‌, ಡಾ| ಪದ್ಮನಾಭ ಉಪಸ್ಥಿತರಿದ್ದರು.

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com