ಬೈಂದೂರು ಕ್ಷೇತ್ರ ಬಿಜೆಪಿ ಸಕ್ರಿಯ ಸದಸ್ಯತಾ‌ ಸಮಾವೇಶ

ಹೆಮ್ಮಾಡಿ: ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರಕಾರವು ದೇಶದಲ್ಲಿ ಐತಿಹಾಸಿಕ ಬದಲಾವಣೆ ತರುತ್ತಿದ್ದು ಇದಕ್ಕೆ ಬೇಕಾದ ಎಲ್ಲಾ ಯೋಜನೆಗಳನ್ನು ಹಾಕಿಕೊಂಡು ಸಿದ್ಧತೆಗಳನ್ನು ಪ್ರಾರಂಭಿಸಿದೆ  ಎಂದು ವಿಧಾನಪರಿಷತ್‌ ಸದಸ್ಯ ಕ್ಯಾ.ಗಣೇಶ ಕಾರ್ಣಿಕ್‌ ಹೇಳಿದರು.

ಅವರು  ಹೆಮ್ಮಾಡಿಯ ಜಯಶ್ರೀ ಸಭಾಭವನದಲ್ಲಿ ಜರಗಿದ ಬೈಂದೂರು ಕ್ಷೇತ್ರ ಬಿಜೆಪಿ ಸಕ್ರಿಯ ಸದಸ್ಯತಾ‌ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದರು.

ದೇಶದ ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಷಾ ನೇತೃತ್ವದ ಜೋಡಿ ಪಕ್ಷದಲ್ಲಿ ತೀವ್ರ ಸಂಚಲನ ಉಂಟು ಮಾಡಿದ್ದು, ಹೆಮ್ಮೆ ಪಡುವ ಅಂತಾರಾಷ್ಟ್ರೀಯ ಸಾಧನೆ ಮಾಡುವತ್ತ ದಿಟ್ಟ ಹೆಜ್ಜೆಯನ್ನಿರಿಸಿದ್ದಾರೆ. 

ಎನ್‌ಡಿಎ ಸರಕಾರ ಅಧಿಕಾರಕ್ಕೆ ಬಂದ ಬಳಿಕ ದೇಶದಲ್ಲಿ ಆರ್ಥಿಕ ಸಮಾನತೆ ಬರುತ್ತಿದೆ. ಬೆಲೆ ಏರಿಕೆ ಸ್ಥಿರತೆ ಕಾಯ್ದುಕೊಂಡಿದ್ದರೆ, ಹಣದುಬ್ಬರ ನಿಯಂತ್ರಣದಲ್ಲಿದೆ. ಪೆಟ್ರೋಲ್‌, ಡಿಸೇಲ್‌ ಬೆಲೆ ಏಳೆಂಟು ಬಾರಿ ಇಳಿಕೆ ಕಂಡಿದೆ.

 ಸಶಕ್ತ ದೇಶ ನಿರ್ಮಾಣಕ್ಕಾಗಿ ಬಿಜೆಪಿಯನ್ನು ತಳಮಟ್ಟದಿಂದ ಇನ್ನಷ್ಟು ಬಲಿಷ್ಠಗೊಳಿಸಬೇಕಾಗಿದೆ. ಗ್ರಾಮಸಭೆಯನ್ನು ಗಟ್ಟಿಗೊಳಿಸುವ ಬದಲು ಗ್ರಾಪಂ ಸದಸ್ಯರ ಸದಸ್ಯತ್ವವನ್ನು ರದ್ದುಪಡಿಸುವ ಕಾನೂನು ರೂಪಿಸಿ, ವಿರೋಧದ ಬಳಿಕ ವಾಪಾಸು ಪಡೆದುಕೊಂಡಿತ್ತು. ಕಾಂಗ್ರೆಸ್‌ ನೇತƒತ್ವದ ಸರಕಾರಕ್ಕೆ ಸಂವಿಧಾನದ ಮೇಲೆ ವಿಶ್ವಾಸವಿಲ್ಲ. ಬಹುಸಂಖ್ಯಾಕರ ಭಾವನೆಗಳ ಮೇಲೆ ನಂಬಿಕೆ ಇಲ್ಲ. ಆದುದರಿಂದ ಕಾಂಗ್ರೆಸ್‌ ಮುಕ್ತ ರಾಜ್ಯ ಮಾಡಲು ನರೇಂದ್ರ ಮೋದಿ ನೇತೃತ್ವದಲ್ಲಿ ಬಿಜೆಪಿಯೊಂದಿಗೆ ಹೆಜ್ಜೆಯನ್ನಿಡಬೇಕು ಎಂದರು..

ವಿಧಾನನ ಪರಿಷತ್‌ ಸದಸ್ಯ  ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿದರು. ಇದೇ ಸಂದರ್ಭ ಜಿಪಂ  ಮಾಜಿ ಸದಸ್ಯ ಸುಧಾಕರ ಕುಲಾಲ್‌, ಶಂಕರನಾರಾಯಣ ಗ್ರಾಪಂ ಮಾಜಿ ಸದಸ್ಯ ಬಿ.ಎಸ್‌.ಶ್ರೀನಿವಾಸ ಸೌಡ, ಶಂಕರನಾರಾಯಣ ಗ್ರಾಪಂ ಸದಸ್ಯ ನಾಗೇಶ್ಚಂದ್ರ ಭಟ್‌, ಸುಬ್ಬು ಕುಲಾಲ್‌ ಬಿಜೆಪಿ ಸೇರಿದರು.

ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ತಿಂಗಳೆ ವಿಕ್ರಮಾರ್ಜುನ ಹೆಗ್ಡೆ, ಜಿಪಂ ಸದಸ್ಯರಾದ ಟಿ.ಬಾಬು ಹೆಗ್ಡೆ, ಇಂದಿರಾ ಶೆಟ್ಟಿ, ಗೌರಿ ದೇವಾಡಿಗ, ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿಗಳಾದ ಕುತ್ಯಾರು ನವೀನ ಶೆಟ್ಟಿ, ಗುರುರಾಜ್‌ ಗಂಟಿಹೊಳೆ, ಸದಸ್ಯತಾ ಅಭಿಯಾನದ ಜಿಲ್ಲಾ ಪ್ರಮುಖ್‌ ಮಟ್ಟಾರು ರತ್ನಾಕರ ಹೆಗ್ಡೆ, ರೈತ ಮೋರ್ಚಾ ರಾಜ್ಯ ಉಪಾಧ್ಯಕ್ಷ ದೀಪಕಕುಮಾರ್‌ ಶೆಟ್ಟಿ, ಪಕ್ಷದ ಮುಖಂಡರಾದ ಸುರೇಶ ಶೆಟ್ಟಿ, ಕಿರಣ್‌ಕುಮಾರ್‌, ಯುವಮೋರ್ಚಾ ಅಧ್ಯಕ್ಷ ರಾಘವೇಂದ್ರ ನೆಂಪು ಮೊದಲಾದವರು ಉಪಸ್ಥಿತರಿದ್ದರು.

ಕ್ಷೇತ್ರ ಬಿಜೆಪಿ ಅಧ್ಯಕ್ಷ ಬಿ.ಎಂ.ಸುಕುಮಾರ್‌ ಶೆಟ್ಟಿ ಸ್ವಾಗತಿಸಿ, ಪ್ರಧಾನ ಕಾರ್ಯದರ್ಶಿ ಸದಾನಂದ ಉಪ್ಪಿನಕುದ್ರು ಪ್ರಾಸ್ತಾವಿಕ ಮಾತುಗಳನ್ನಾಡಿದರು. ಸದಾಶಿವ ಡಿ.ಪಡುವರಿ ಕಾರ್ಯಕ್ರಮ ನಿರೂಪಿಸಿದರು.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com