ರಾಷ್ಟ್ರೀಯ ಮತದಾರರ ದಿನಾಚರಣೆ

ಬಸ್ರೂರು: ಮತದಾರರ ಪಟ್ಟಿ ಸೇರ್ಪಡೆಗೆ ಸ್ವೀಪ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಬಳಿಕ ಕಳೆದ 5 ವರ್ಷದಲ್ಲಿ ಮತದಾರರ ಪ್ರಮಾಣ ಗಣನೀಯ ಏರಿಕೆಯಾಗಿದೆ. ಸಂವಿಧಾನಾತ್ಮಕ ಹಕ್ಕಾಗಿರುವ ಮತದಾನದ ಪ್ರಾಮುಖ್ಯತೆ ಯುವಜನತೆ ಅರಿಯಬೇಕು. ದೇಶದಲ್ಲಿ ಯುವ ಸಮುದಾಯ ಮತದಾನ ಪ್ರಕ್ರಿಯೆಯಲ್ಲಿ ಭಾಗವಹಿಸುವುದು ಕಡಿಮೆಯಾಗುತ್ತಿದೆ ಎಂದು ಕುಂದಾಪುರ ತಹಸೀಲ್ದಾರ ಗಾಯತ್ರಿ ಎನ್.ನಾಯಕ್ ಹೇಳಿದರು. 

ಇಲ್ಲಿನ ಶಾರದಾ ಕಾಲೇಜಿನಲ್ಲಿ ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ತಾಲೂಕು ಆಡಳಿತದ ವತಿಯಿಂದ ಹಮ್ಮಿಕೊಂಡ ರಾಷ್ಟ್ರೀಯ ಮತದಾರರ ದಿನಾಚರಣೆ ಕಾರ‌್ಯಕ್ರಮದಲ್ಲಿ ಅವರು ಮಾತನಾಡಿದರು. 

ಈ ಬಾರಿಯ ಮತದಾರರ ಸೇರ್ಪಡೆ ಅಭಿಯಾನಕ್ಕೆ ಸುಲಭ ನೊಂದಾವಣೆ, ಸುಲಭ ತಿದ್ದುಪಡಿ ಶೀರ್ಷಿಕೆ ಇಡಲಾಗಿದೆ. ಮಾಹಿತಿ ಕೊರತೆಯಿಂದ ಮತದಾನ ಹಕ್ಕು ಚಲಾಯಿಸುವಿಕೆಯಲ್ಲಿ ಹಿನ್ನಡೆಯಾಗು ತ್ತಿದೆ. ನ್ಯೂನತೆ ಸರಿಪಡಿಸಿ ಪ್ರತಿಯೊಬ್ಬ ಪ್ರಜೆಯೂ ಮತದಾನ ಪ್ರಕ್ರಿಯೆಯಲ್ಲಿ ಭಾಗವಹಿಸಬೇಕೆಂಬ ನೆಲೆಯಲ್ಲಿ ಭಾರತ ಚುನಾವಣಾ ಆಯೋಗದ ನಿರ್ದೇಶನ ದಂತೆ ಹಮ್ಮಿಕೊಂಡ ಸ್ವೀಪ್ ಕಾರ್ಯಕ್ರಮ ಫಲಪ್ರದವಾಗಿದೆ. ಕಳೆದ ಚುನಾವಣೆಯಲ್ಲಿ ದೇಶದಲ್ಲಿ 84ಕೋಟಿ ಜನರು ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದರು. 2009ರಲ್ಲಿ ಶೇ.58.81ರಷ್ಟಿದ್ದ ಮತದಾನ ಪ್ರಮಾಣ 2014ರಲ್ಲಿ ಶೇ.67.14ಕ್ಕೆ ಏರಿಕೆಯಾಗಿದೆ. ಜ.1ಕ್ಕೆ 18 ವರ್ಷ ತುಂಬುವವರು ಕಡ್ಡಾಯ ಮತದಾನದಲ್ಲಿ ಭಾಗವಹಿಸ ಬೇಕು. ಪ್ರತಿಯೊಂದು ಕಾಲೇಜಿನಲ್ಲಿ ಮತದಾರರ ಸೇರ್ಪಡೆಗೋಸ್ಕರ ನೋಡಲ್ ಆಫೀಸರ್ ನಿಯುಕ್ತಿಗೊಳಿಸ ಲಾಗಿದೆ. ನಮೂನೆ 6, 7 ಮತ್ತು 8ರ ಮೂಲಕ ಹಕ್ಕು ಮತ್ತು ಆಕ್ಷೇಪಣೆಗೆ ಅರ್ಜಿ ಸಲ್ಲಿಸಬಹುದಾಗಿದೆ. ಮತದಾರರ ಗುರುತುಚೀಟಿ ಬಹಳ ಅತ್ಯಮೂಲ್ಯ. ಇದೊಂದು ರಾಷ್ಟ್ರೀಯ ದಾಖಲೆ ಎಂದು ಅವರು ತಿಳಿಸಿದರು. 

ಕುಂದಾಪುರ ಸಹಾಯಕ ಕಮಿಷನರ್ ಚಾರುಲತಾ ಸೋಮಲ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಕಾರ್ಯಕ್ರಮದ ಮೂಲಕ ಮತದಾನದ ಹಕ್ಕಿನ ಬಗ್ಗೆ ಜಾಗತಿ ಮೂಡಿಸಲಾಗುತ್ತದೆ. ಮತದಾನ ಪ್ರಕ್ರಿಯೆಯಲ್ಲಿ ಭಾಗವಹಿಸುವಿಕೆ ಅತಿ ಅಗತ್ಯ. ತನ್ಮೂಲಕ ದೇಶದ ಪ್ರಜೆಯಾಗಿ ತನ್ನ ಗೌರವ ಎತ್ತಿಹಿಡಿಯಬೇಕು ಎಂದರು. 

ಅಧ್ಯಕ್ಷತೆ ವಹಿಸಿದ್ದ ಬಸ್ರೂರು ಶಾರದಾ ಕಾಲೇಜಿನ ಪ್ರಿನ್ಸಿಪಾಲ್ ಪ್ರೊ.ರಾಧಾಕಷ್ಣ ಶೆಟ್ಟಿ ಮಾತನಾಡಿ ದೇಶದಲ್ಲಿಂದು ಅನಕ್ಷರಸ್ಥರು ಮತದಾನಕ್ಕೆ ನೀಡುವ ಗೌರವ ಸುಶಿಕ್ಷಿತರು ನೀಡುತ್ತಿಲ್ಲ. ಮತದಾನದ ಸಂದರ್ಭ ಫ್ಯಾಮಿಲಿ ಟೂರ್‌ಗೆ ಆಸ್ಪದ ಮಾಡಿಕೊಳ್ಳುವುದು ಹೆಚ್ಚುತ್ತಿದೆ. ದೇಶದ ಪ್ರಜೆಯಾಗಿ ಸಂವಿಧಾನಬದ್ಧವಾಗಿರುವ ಮತದಾನದ ಹಕ್ಕನ್ನು ಯಾರು ಕಳೆದು ಕೊಳ್ಳಬಾರದು. ಯುವಜನರು, ವಿದ್ಯಾರ್ಥಿಗಳು ಇದನ್ನು ಚೆನ್ನಾಗಿ ಅರ್ಥೈಸಿ ಕೊಳ್ಳಬೇಕು ಎಂದರು. ಈ ಸಂದರ್ಭ ಹೊಸ ಮತದಾರರಿಗೆ ಮತದಾನದ ಗುರುತುಚೀಟಿ ವಿತರಿಸಲಾಯಿತು. ಪ್ರತಿಜ್ಞಾವಿಧಿ ಬೋಧಿಸಲಾಯಿತು. ಕಂದಾಯ ನಿರೀಕ್ಷಕ ತಿಮ್ಮಪ್ಪ ಶೆಟ್ಟಿಗಾರ್ ಸ್ವಾಗತಿಸಿ, ಕಾರ್ಯಕ್ರಮ ನಿರ್ವಹಿಸಿದರು. ಮಂಜುನಾಥ ಅಕ್ಸಾಲಿ ವಂದಿಸಿದರು.

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com