ಕೋಡಿ ಬ್ಯಾರಿಸ್ ಕಾಲೇಜು ವಾರ್ಷಿಕೋತ್ಸವ

ಕೋಡಿ: "ರಾಜಕೀಯದಲ್ಲಿ ಧರ್ಮ ಇರಬೇಕು ಆದರೆ ಧರ್ಮದಲ್ಲಿ ರಾಜಕೀಯ ಇರಬಾರದು" ಎಂದು ಕರ್ನಾಟಕ ರಾಜ್ಯ ನಗರಾಭಿವೃಧ್ಧಿ ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ. ವಿನಯಕುಮಾರ್ ಸೊರಕೆಯವರು ಹೇಳಿದರು.
ಅವರು ಬ್ಯಾರೀಸ್ ಸಮೂಹ ಶಿಕ್ಷಣ ಸಂಸ್ಥೆಯ ವಾರ್ಷಿಕೋತ್ಸವ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡುತ್ತಾ ಇಸ್ಲಾಂ ಧರ್ಮ ಶಾಂತಿ, ಸಮಾನತೆಯನ್ನು ಸಾರುವ ಧರ್ಮ. ಎಲ್ಲಾ ಧರ್ಮಗಳ ಸಾರಾಂಶವನ್ನು ತಿಳಿದುಕೊಳ್ಳುವುದು ಅತೀ ಮುಖ್ಯ. ಕೋಡಿ ಪ್ರದೇಶಕ್ಕೆ ಬೇಕಾದಂತಹ ವಿದ್ಯಾರ್ಜನೆಯನ್ನು ಬ್ಯಾರೀಸ್ ಸಮೂಹ ಶಿಕ್ಷಣ ಸಂಸ್ಥೆ ನೀಡುತ್ತಿದೆ. ವಿದ್ಯಾರ್ಜನೆ ನೀಡುವುದು ದೇವರ ಕೆಲಸ ಎಂದರು. 
ಗೌರವಾನ್ವಿತ ಅತಿಥಿಗಳಾದ ಕುಂದಾಪುರದ ಸಹಾಯಕ ಆಯುಕ್ತರಾದ ಕು.ಚಾರುಲತಾ ಸೋಮಲ್ ಮಾತನಾಡುತ್ತಾ " ಶಾಲೆ ಎನ್ನುವುದು ಎರಡನೆಯ ಮನೆ. ಶಾಲೆಯಲ್ಲಿ ವಿದ್ಯಾರ್ಥಿನಿಯರ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿ, ದೈಹಿಕ ಬೆಳವಣಿಗೆಯ ಬಗ್ಗೆ ಗಮನ ಹರಿಸಬೇಕು. ವಿದ್ಯಾರ್ಥಿಗಳು ಮುಂದೆ ದೇಶವನ್ನಾಳುವವರು ಎಂದು ಅಭಿಪ್ರಾಯಪಟ್ಟರು. 
ರಾಷ್ಟ್ರೀಯ ಪ್ರಶಸ್ತಿ ವಿಜೇತರಾದ ಕುಂದಾಪುರ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶ್ರೀ ಗೋಪಾಲ ಶೆಟ್ಟಿ ಮಾತನಾಡಿ, " ನಾವು ಮಾಡುವ ವೃತ್ತಿಯನ್ನು ಪ್ರೀತಿಸಿ  ಗೌರವಿಸಬೇಕು. ನಾವು ಸಮಾಜದಲ್ಲಿ ತಲೆ ಎತ್ತಿ ನಿಲ್ಲಲು ನಾವು ಪಡೆದ ಶಿಕ್ಷಣವೇ ಕಾರಣ ಎನ್ನುವುದನ್ನು ಮರೆಯಬಾರದು. ನನ್ನ ಕನಸು ಕುಂದಾಪುರ ತಾಲೂಕನ್ನು ಶೈಕ್ಷಣಿಕ ತಾಲೂಕನ್ನಾಗಿ ಮಾಡುವುದು" ಎಂದರು.  
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಸಂಸ್ಥೆಯ ಅಧ್ಯಕ್ಷರಾದ ಹಾಜಿ ಮಾಸ್ಟರ್ ಮೆಹಮೂದ್ ಶುಭಕೋರಿದರು. 
ಬ್ಯಾರೀಸ್ ಸಮೂಹ ಶಿಕ್ಷಣ ಸಂಸ್ಥೆಯ ಸಂಚಾಲಕರಾದ ಶ್ರೀ ಸೈಯದ್ ಮೊಹಮ್ಮದ್ ಬ್ಯಾರಿಯವರು ಪ್ರಾಸ್ತಾವಿಕವಾಗಿ ಮಾತನಾಡುತ್ತಾ, " ಶಾಲೆ ಎಂಬುದು ಜ್ಞಾನದ ದೇಗುಲ. ಜಾತಿ ಧರ್ಮದ ನೆಲೆಯಲ್ಲಿ ಯಾವತ್ತೂ ಜಗಳ ಮಾಡಬಾರದು. ನಮ್ಮ ಪರಿಸರದಲ್ಲಿ ಕೋಮು-ಗಲಭೆಗೆ ಎಂದಿಗೂ ಅವಕಾಶ ನೀಡಬಾರದು. ಜಗಳ ಎಂದಿಗೂ ವೈಯಕ್ತಿಕವಾಗಿರಬೇಕು. ಧರ್ಮವನ್ನು ಯಾರೂ ತಮ್ಮ ಸ್ವಾರ್ಥಕ್ಕಾಗಿ ಬಳಸಿಕೊಳ್ಳುತ್ತಾರೆ. ಅದರಿಂದ ನಮ್ಮ ಧರ್ಮ ಹಾಳಾಗುತ್ತದೆ, ದೇಶ ಒಡೆದು ಹೋಗುತ್ತದೆ. ಮಾನವೀಯ ಅಲೆಯು, ಸಹಬಾಳ್ವೆಯ ನೆಲೆಯು, ಸಹಭಾಗಿತ್ವದ ಕಂಪು ಜಗಕ್ಕೆಲ್ಲಾ ಕಂಪು ತರಲಿ ಎಂದರು.
ಸಂಸ್ಥೆಯ ಆಡಳಿತ ನಿರ್ದೇಶಕರು ಹಾಗೂ ಪದವಿ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ದೋಮ ಚಂದ್ರಶೇಖರ್ ಸ್ವಾಗತಿಸಿ, ಯಾರು ಸೋಲನ್ನು ಅನುಭವಿಸುತ್ತಾರೋ ಅವರು ಮುಂದೆ ಗೆಲುವನ್ನು ಪಡೆಯುತ್ತಾರೆ ಎಂದರು. 
ತಾಲೂಕು ಪಂಚಾಯತ್ ಸದಸ್ಯರಾದ ಮಂಜು ಬಿಲ್ಲವ , ಪುರಸಭಾ ಸದಸ್ಯರಾದ ಸಂದೀಪ್ ಪೂಜಾರಿ, ಕೌನ್ಸೆಲರ್ ಪ್ರಭಾಕರ್ ಶೇರಿಗಾರ್, ಬ್ಯಾರೀಸ್ ಸೀ ಸೈಡ್ ಸ್ಕೂಲ್ ನ ಶಾಲಾಭಿವೃಧ್ಧಿ ಸಮಿತಿಯ ಸದಸ್ಯರಾದ ಅಬುಶೇಖ್, ಹಾಜಿ ಕೆ ಮೊಹಿದೀನ್ ಬ್ಯಾರಿ ಅನುದಾನಿತ ಪ್ರೌಢಶಾಲಾಭಿವೃಧ್ಧಿ  ಸಮಿತಿಯ ಸದಸ್ಯರಾದ ಮಾಧವ ಪೂಜಾರಿ, ಹಾಜಿ ಕೆ ಮೊಹಿದೀನ್ ಬ್ಯಾರಿ ಟ್ರಸ್ಟ್ ನ ಸದಸ್ಯರಾದ ಅಬ್ದುಲ್ ರೆಹಮಾನ್,  ಶ್ರೀನಿವಾಸ್ ಶೆಣೈ ಶಾಲಾಭಿವೃಧ್ಧಿ ಸಮಿತಿಯ ಎಲ್ಲಾ ಸದಸ್ಯರು  ಹಾಗೂ ಸಂಸ್ಥೆಯ ಎಲ್ಲಾ ಮುಖಂಡರು ಉಪಸ್ಥಿತರಿದ್ದರು. 
ಈ ಸಂದರ್ಭದಲ್ಲಿ ಸಂಸ್ಥೆಯ ವಾರ್ಷಿಕ ಸಂಚಿಕೆಯನ್ನು ಬಿಡುಗಡೆಗೊಳಿಸಿ, ತಾಲೂಕು, ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ವಿಜೇತರಾದ ಎಲ್ಲಾ ವಿದ್ಯಾರ್ಥಿಗಳಿಗೂ ಬಹುಮಾನ ವಿತರಿಸಲಾಯಿತು. ಪದವಿ ಕಾಲೇಜಿನ ಹಿರಿಯ ಆಂಗ್ಲ ಉಪನ್ಯಾಸಕಿ ಶ್ರೀಮತಿ ಫ್ಲೇವಿಯಾ ರೆಬೆಲ್ಲೋ ಹಾಗೂ ಶಿಕ್ಷಕಿ ಜೆನ್ನಿಫರ್ ಕಾರ್ಯಕ್ರಮ ನಿರೂಪಿಸಿ, ಶಿಕ್ಷಕರಾದ ರವೀಂದ್ರ ಸ್ವಾಗತಿಸಿ, ಬಿ.ಎಡ್ ಕಾಲೇಜಿನ ಪ್ರಾಂಶುಪಾಲರಾದ ಸಿದ್ದಪ್ಪ ಕುಂಶಿ ವಂದಿಸಿದರು.

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com