ಉಡುಪಿ: ಬಸ್ ಮಾಲೀಕರು ಮತ್ತು ಸಿಬ್ಬಂದಿ ನಡುವೆ ಗೂಡ್ಸ್ ಸಾಗಾಟಕ್ಕೆ ಸಂಬಂಧಿಸಿ ಮಾತಿನ ಚಕಮಕಿ, ಹಲ್ಲೆ ನಡೆದ ಬಳಿಕ ಶುಕ್ರವಾರ ಚಾಲಕರು ತಕ್ಷಣ ಮುಷ್ಕರ ಆರಂಭಿಸಿದ್ದರಿಂದ ಮುಂಬಯಿಗೆ ಹೋಗುವ ಹೆಚ್ಚಿನ ಬಸ್ಗಳ ಸಂಚಾರ ಸ್ಥಗಿತಗೊಂಡಿದೆ. ಮುಂಬಯಿಗೆ ಹೊರಟ ಪ್ರಯಾಣಿಕರು ಮಾತ್ರ ಪರದಾಟ ಅನುಭವಿಸುವಂತಾಗಿದೆ.
ಬುಧವಾರ ರಾತ್ರಿ ಕಂಪನಿಯೊಂದರ ಬಸ್ನ್ನು ಬಸ್ ಮಾಲೀಕರ ಯೂನಿಯನ್ ನಿಯೋಜಿಸಿದ ಚೆಕ್ಕಿಂಗ್ ಸಿಬ್ಬಂದಿ ತಪಾಸಣೆ ನಡೆಸಿದರು. ಬಸ್ ಸಿಬ್ಬಂದಿಗಳು ಅಧಿಕೃತವಾಗಿ ಬುಕ್ ಮಾಡಿದ ಗೂಡ್ಸ್ಗಳ ಹೊರತಾಗಿ ದಾರಿ ಮಧ್ಯೆ ಹೆಚ್ಚುವರಿಯಾಗಿ ಗೂಡ್ಸ್ಗಳನ್ನು ಅನಧಿಕೃತವಾಗಿ ಸಾಗಿಸುತ್ತಾರೆ ಎಂಬ ದೂರುಗಳ ಹಿನ್ನೆಲೆಯಲ್ಲಿ ಈ ತಪಾಸಣೆ ನಡೆದಿತ್ತು. ಕ್ಯಾಬಿನ್ ಚೆಕ್ ಮಾಡಿದ್ದರಿಂದ ಚೆಕ್ಕರ್ಗಳು ಮತ್ತು ಚಾಲಕರ ನಡುವೆ ಬಿರುಸಿನ ಮಾತುಗಳ ವಿನಿಮಯವಾಗಿದೆ.
ಘಟನೆ ವೇಳೆ ತಾವು ಪ್ರಯಾಣಿಸುತ್ತಿದ್ದ ವಾಹನವನ್ನು ನಿಲ್ಲಿಸಿ ಅನಗತ್ಯವಾಗಿ ಕಿರಿಕಿರಿ ಮಾಡುತ್ತಿದ್ದಾರೆ ಎಂದು ಆಕ್ಷೇಪಿಸಿದ ಕೆಲವು ಪ್ರಯಾಣಿಕರು ಚೆಕ್ಕಿಂಗ್ಗೆ ಬಂದವರ ಮೇಲೆ ಹಲ್ಲೆ ನಡೆಸಿದ್ದರು. ಇದು ಚಾಲಕರ ಕುಮ್ಮಕ್ಕಿನಿಂದ ನಡೆದ ಹಲ್ಲೆ ಎಂದು ಭಾವಿಸಿದ ಮಾಲೀಕರು ಮತ್ತು ಚೆಕ್ಕಿಂಗ್ನವರ ಸೂಚನೆ ಮೇರೆಗೆ ಗುರುವಾರ ಮತ್ತೆ ಅದೇ ಬಸ್ನ್ನು ತಡೆಯಲಾಗಿದೆ. ಈ ವೇಳೆ ಚಾಲಕ ವಿಜಯ್ ಮೇಲೆ ಹಲ್ಲೆ ನಡೆದಿದೆ ಎನ್ನಲಾಗಿದೆ. ಈ ಬಗ್ಗೆ ವಿಜಯ್ ಅವರು ಕುಮಟಾ ಠಾಣೆಯಲ್ಲಿ ದೂರು ದಾಖಲಿಸಿ ಮಂಗಳೂರಿನ ಆಸ್ಪತ್ರೆಗೆ ದಾಖಲಾಗಿದ್ದಾರೆ.
ವಿಷಯ ತಿಳಿದ ಮುಂಬಯಿ ಬಸ್ ಚಾಲಕರು ಶುಕ್ರವಾರದಿಂದಲೇ ಮುಷ್ಕರ ಆರಂಭಿಸಿದ್ದು, ತಾವು ಬಸ್ ಚಲಾಯಿಸುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ. ಹಾಗಾಗಿ ಮೂರು ಕಂಪನಿಗಳನ್ನು ಹೊರತುಪಡಿಸಿದರೆ ಬೇರೆ ಯಾವ ಬಸ್ಗಳೂ ಮುಂಬಯಿಗೆ ಪ್ರಯಾಣಿಸಿಲ್ಲ.
0 comments:
Post a Comment