ಡ್ರೀಮ್ಡ್ ಫಾರೆಸ್ಟ್ ಕಾನೂನು ವಿರುದ್ಧ ರೈತರಿಂದ ಪ್ರತಿಭಟನೆ

ಬೈಂದೂರು: ಕಳೆದ ಎರಡು ತಿಂಗಳ ಹಿಂದೆ ಡೀಮ್ಡ್ ಫಾರೆಸ್ಟ್ ಸರಳೀಕರಣಗೊಳಿಸಿ, ಅದರ ವ್ಯಾಪ್ತಿಯಲ್ಲಿರುವ ರೈತರ ಭೂಮಿಯನ್ನು ವಿಲೇವಾರಿ ಮಾಡುವ ಬಗ್ಗೆ ಸರ್ಕಾರ ಜಿಲ್ಲಾ ಅರಣ್ಯ ಸಂರಕ್ಷಣಾಧಿಕಾರಿ ನೇತೃತ್ವದಲ್ಲಿ ಸಮಿತಿ ರಚಿಸಿತ್ತು. ಆದರೆ ಆ ಸಮಿತಿ ಇದುವರೆಗೂ ಒಂದೇ ಒಂದು ರೈತರ ಕಡತ ವಿಲೇವಾರಿ ಮಾಡದೇ ರೈತರಿಗೆ ಅನ್ಯಾಯವೆಸಗಿದೆ. ರಾಜ್ಯ ಸರ್ಕಾರ ನಿದ್ರಾವಸ್ಥೆಯಲ್ಲಿದ್ದು, ಅದು ಕಸ್ತೂರಿರಂಗನ್ ವರದಿ, ಡ್ರೀಮ್ಡ್ ಫಾರೆಸ್ಟ್ ಹೆಸರಿನಲ್ಲಿ ರೈತರಿಗೆ ಮರಣ ಶಾಸನ ಬರೆಯಲು ಹೊರಟಿದೆ ಎಂದು ರಾಜ್ಯ ರೈತ ಮೋರ್ಚಾ ಉಪಾಧ್ಯಕ್ಷ ದೀಪಕ್ ಕುಮಾರ ಶೆಟ್ಟಿ ಆರೋಪಿಸಿದರು.

ಜನವಸತಿ ಪ್ರದೇಶವನ್ನು ಡ್ರೀಮ್ಡ್ ಫಾರೆಸ್ಟ್‌ಗೆ ಸೇರಿಸುವ ಸರ್ಕಾರದ ಯೋಜನೆ ಖಂಡಿಸಿ ರೈತ ಸಂಘದ ನೇತೃತ್ವದಲ್ಲಿ ಬೈಂದೂರು ವಿಶೇಷ ತಹಶೀಲ್ದಾರ ಕಚೇರಿ ಆವರಣದಲ್ಲಿ ನಡೆದ ಬೃಹತ್ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದ ಅವರು, ಪಶ್ಚಿಮ ಘಟ್ಟದ ತಪ್ಪಲಿನ ಜನರು ಡ್ರೀಮ್ಡ್ ಫಾರೆಸ್ಟ್‌ನಿಂದಾಗಿ ಮೂಲಭೂತ ಸೌಕರ್ಯದಿಂದ ವಂಚಿತರಾಗಿದ್ದಾರೆ, ಅಲ್ಲದೇ ಅಕ್ರಮ ಸಕ್ರಮಗಳಿಂದ ರೈತರ ಭೂಮಿ ವಿಲೇವಾರಿ ಆಗುತ್ತಿಲ್ಲ. ಇದನ್ನು ಸರಳೀಕರಣಗೊಳಿಸಿ ರೈತರಿಗೆ ನ್ಯಾಯ ಒದಗಿಸಬೇಕೆಂದು ಹಲವು ಬಾರಿ ಮನವಿ ಮಾಡಿದರೂ, ಸಮಸ್ಯೆ ಬಗೆಹರಿಸಲು ಸರ್ಕಾರ ಮೀನಮೇಷ ಎಣಿಸುತ್ತಿದೆ. ಇಂತಹ ಸರ್ಕಾದಿಂದ ರೈತರಿಗೆ ಅನ್ಯಾಯವಾಗಿದೆ. ಸರ್ಕಾರ ಡ್ರೀಮ್ಡ್ ಫಾರೆಸ್ಟ್ ಹೆಸರಿನಲ್ಲಿ ಸಾವಿರಾರು ವರ್ಷಗಳಿಂದ ನೆಲೆಸಿರುವ ಪಶ್ಚಿಮ ಘಟ್ಟದ ತಪ್ಪಲಿನ ಜನರನ್ನು ಒಕ್ಕಲೆಬ್ಬಿಸಿ ಅವರ ಭೂಮಿ ಮುಟ್ಟುಗೋಲು ಹಾಕುವ ಹುನ್ನಾರ ನಡೆಸುತ್ತಿದೆ. ರೈತರ ಹಿತಕ್ಕಾಗಿ ಜೈಲಿಗೆ ಹೋಗಲು ಸಿದ್ಧ ಎಂದು ಗುಡುಗಿದರು.

ಬಿಜೆಪಿ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಗುರುರಾಜ ಶೆಟ್ಟಿ, ಕಾರ್ಯದರ್ಶಿ ಬಿ.ಎಸ್ ಸುರೇಶ ಶೆಟ್ಟಿ, ಜಿಪಂ ಸದಸ್ಯ ಕೆ.ಬಾಬು ಶೆಟ್ಟಿ, ಬಿಜೆಪಿ ಕ್ಷೇತ್ರಾಧ್ಯಕ್ಷ ಬಿ.ಎಂ.ಸುಕುಮಾರ್ ಶೆಟ್ಟಿ, ಕಾರ್ಯದರ್ಶಿ ಸದಾಶಿವ ಪಡುವರಿ, ಹಿಂದುಳಿದ ವರ್ಗಗಳ ಮೋರ್ಚಾ ಕ್ಷೇತ್ರಾಧ್ಯಕ್ಷ ಆನಂದ ಖಾರ್ವಿ, ಬೈಂದೂರು ಗ್ರಾಪಂ ಮಾಜಿ ಉಪಾಧ್ಯಕ್ಷ ವೆಂಕಟ ಪೂಜಾರಿ, ಯಡ್ತರೆ ಗ್ರಾಪಂ ಸದಸ್ಯ ಶಂಕರ ದೇವಾಡಿಗ, ಮುಖಂಡರಾದ ಕೆ.ಸೋಮಶೇಖರ ಶೆಟ್ಟಿ, ಎಂ.ಆರ್.ಶೆಟ್ಟಿ, ಬಾಲಕೃಷ್ಣ ಮುಂತಾದವರು ಉಪಸ್ಥಿತರಿದ್ದರು.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com