ಹೆಣ್ಣು, ಗಂಡಿಗೆ ಸಮಾನ ಕಾನೂನು ಜಾರಿಗೆ ತನ್ನಿ: ಡಾ| ಪೋತೆದಾರ್

ಉಡುಪಿ: ದೇಶದಲ್ಲಿ ಹೆಣ್ಣು, ಗಂಡಿಗೆ ಸಮನಾಗಿ ಅನ್ವಯವಾಗುವ ಲಿಂಗ ತಟಸ್ಥ (ಜೆಂಡರ್ ನ್ಯೂಟ್ರಲ್) ಕಾನೂನು ಜಾರಿಗೊಳಿಸುವಂತೆ ಸಾಮಾಜಿಕ ಕಾರ್ಯಕರ್ತ, ಬೆಳಗಾವಿಯ ಡಾ.ಸಂತೋಷ್ ಕುಮಾರ್ ಬಿ.ಪೋತೆದಾರ್ ಒತ್ತಾಯಿಸಿದ್ದಾರೆ. 
    ಅವರು  ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕೆಲವೊಂದು ಕಾನೂನುಗಳು ಮಹಿಳಾ ಪರವಿದ್ದು , ಇದನ್ನು ಗಂಡಸರ ವಿರುದ್ಧ ದುರ್ಬಳಕೆ ಮಾಡಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಸಮಾನ ಕಾನೂನು ಜಾರಿಗೆ ರಾಷ್ಟ್ರಪತಿ, ಪ್ರಧಾನಿಗೆ ಮನವಿ ಮಾಡಲಾಗುವುದು ಎಂದರು. 
     ಗಂಡನ ಶೋಷಣೆ ನಿರತ ಕೆಲ ಪತ್ನಿಯರು ವರದಕ್ಷಿಣೆ ಕಿರುಕುಳ ಕಾಯ್ದೆ (ಐಪಿಸಿ 498 ಎ) ದುರ್ಬಳಕೆ ಮೂಲಕ ವಂಚನೆ ಎಸಗುತ್ತಿದ್ದಾರೆ. ಇದರ ವಿರುದ್ಧ ಹುತಾತ್ಮರ ದಿನ ಬೆಳಗಾವಿ ಜಿಲ್ಲೆ ತೆಲಸಂಗ ಗ್ರಾಮದಿಂದ ಹೊಸದಿಲ್ಲಿಗೆ ಕಾಲ್ನಡಿಗೆ ಆಂದೋಲನ ನಡೆಸಲಾಗುವುದು. 
    2,500 ಕಿ. ಮೀ. ದೂರದ ಕಾಲ್ನಡಿಗೆ ಮೇ 3ರಂದು ಸಮಾಪನಗೊಳ್ಳಲಿದ್ದು ದಾರಿ ಮಧ್ಯೆ ಐಪಿಸಿ 498 ಎ ಕುರಿತಂತೆ ಜನಜಾಗೃತಿ ಮೂಡಿಸಲಾಗುವುದು. ವಿವಾಹಿತ ಪುರುಷರ, ವೃದ್ಧ ಪಾಲಕರ ಆತ್ಮಹತ್ಯೆ ಪ್ರಮಾಣ ನಿಯಂತ್ರಣ, ವರದಕ್ಷಿಣೆ ಕಿರುಕುಳ ಕಾಯ್ದೆ (ಐಪಿಸಿ 498 ಎ) ತಿದ್ದುಪಡಿ ಅಗತ್ಯವಿದೆ. 
     ಐಪಿಸಿ 498 ಎ ದುರ್ಬಳಕೆಯಿಂದ ಬಲಿಪಶುಗಳಾದ ಕುಟುಂಬಗಳಿಗೆ ಸಾಂತ್ವನ, ಧೈರ್ಯ ಹೇಳಲಾಗುವುದು, ಆರ್ಥಿಕ ನೆರವನ್ನೂ ನೀಡಲಾಗುವುದು. ಕಾಯಿದೆ ದುರ್ಬಳಕೆ ಮಾಡುವ ಮಹಿಳೆಯರನ್ನು ನಾರ್ಕೋ ಅನಾಲಿಸಿಸ್, ಬ್ರೈನ್ ಮ್ಯಾಪಿಂಗ್‌ಗೆ ಒಳಪಡಿಸಬೇಕು. ಮಾಡಿದ ಆರೋಪ ಸುಳ್ಳೆಂದು ಸಾಬೀತಾದರೆ ತಪ್ಪಿತಸ್ಥ ಮಹಿಳೆಯನ್ನು ಜೀವಾವಧಿ ಶಿಕ್ಷೆಗೆ ಒಳಪಡಿಸಬೇಕು. ರಾಷ್ಟ್ರೀಯ ಪುರುಷರ ಆಯೋಗ ಹಾಗೂ ಪುರುಷರ ಕಲ್ಯಾಣ ಮಂತ್ರಾಲಯ ಸ್ಥಾಪಿಸಬೇಕು ಎಂದರು.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com